Advertisement

ರೆಸಾರ್ಟ್‌-ಜಲಮನರಂಜನೆಗೂ ಕೊಕ್ಕೆ?

04:58 PM Apr 20, 2022 | Team Udayavani |

ಕಾರವಾರ: ಜೊಯಿಡಾ ತಾಲೂಕಿನ ಅವೇಡಾ ಪಂಚಾಯತ್‌ ವ್ಯಾಪ್ತಿಯಲ್ಲಿ ಕಾಳಿ ನದಿ ಅಂಚಿನ ರೆಸಾರ್ಟ್‌ಗಳಲ್ಲಿ ನಡೆವ ಜಲ ಸಾಹಸ ಚುಟವಟಿಕೆಗಳಿಗೆ ನೀಡಿದ್ದ ನೋ ಅಬ್ಜೆಕ್ಷನ್ ಪ್ರಮಾಣ ಪತ್ರಗಳನ್ನು ರದ್ದು ಮಾಡಿ, ನೋಟಿಸ್‌ ಜಾರಿ ಮಾಡಲಾಗಿದೆ. ನೋಟಿಸ್‌ ನೀಡುವಾಗ ಕಾನೂನುಬದ್ಧವಾಗಿ ಒಳನಾಡು ಜಲಸಾರಿಗೆ ಇಲಾಖೆಯಿಂದ ಅನುಮತಿ ಪಡೆದ ರೆಸಾರ್ಟ್‌ ಮಾಲೀಕರಿಗೂ ಎನ್‌ಒಸಿ ರದ್ದು ಮಾಡಿದ್ದು, ಆಕ್ಷೇಪಕ್ಕೆ ಕಾರಣವಾಗಿದೆ.

Advertisement

ಜಲಸಾಹಸ ಚಟುವಟಿಕೆ ತಡೆಯದಂತೆ ಹೈಕೋರ್ಟ್‌ ಆದೇಶ ಇದ್ದ ರೆಸಾರ್ಟ್‌ ಮಾಲೀಕರ ಎನ್‌ಓಸಿ ಸಹ ರದ್ದು ಮಾಡಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕಾಳಿ ನದಿಯಲ್ಲಿ ಪ್ರವಾಸೋದ್ಯಮದ ಭಾಗವಾಗಿ ಜಲ ಸಾಹಸ ಮತ್ತು ಜಲ ಮನೋರಂಜನಾ ಚಟುವಟಿಕೆಗಳನ್ನು ಅನುಮತಿಸುವುದು ಹಾಗೂ ನಿಯಂತ್ರಿಸುವ ಅಧಿಕಾರ ಇರುವುದು ಒಳನಾಡು ಜಲಸಾರಿಗೆ ಇಲಾಖೆಗೆ ಮಾತ್ರ. ಇನ್‌ ಲ್ಯಾಂಡ್‌ ಟ್ರಾನ್ಸ್‌ಪೋರ್ಟ್ ಆ್ಯಂಡ್‌ ವೆಜೆಲ್ಸ್‌ ಆ್ಯಕ್ಟ್ ಇದನ್ನು ಸ್ಪಷ್ಟವಾಗಿ ಹೇಳಿದೆ.

ಕಾಳಿ ನದಿ ದಂಡೆಯ ಚಟುವಟಿಕೆ ಮೇಲೆ ನಿಯಂತ್ರಣ ಕಂದಾಯ, ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ಅಥವಾ ಪಂಚಾಯತ್‌ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಈಚೆಗೆ ಕಂದಾಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜಲ ಸಾಹಸಿ ಚಟುವಟಿಕೆಗಳ ಮೇಲೆ ನಿಯಂತ್ರಣ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಪ್ರವಾಸೋದ್ಯಮಿಗಳು ಹೇಳುತ್ತಿದ್ದಾರೆ. ಈ ಸಂಬಂಧ ಅವರು ಕಾನೂನು ಹೋರಾಟಕ್ಕೂ ಸಜ್ಜಾಗಿದ್ದಾರೆ.

ಮಂಗಳವಾರ ಕಾಳಿ ನದಿ ದಂಡೆಯ ಇಳವಾ ಮಜಿರೆಯಲ್ಲಿನ ರೆಸಾರ್ಟ್‌ಗಳಿಗೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಭೇಟಿ ನೀಡಿ ರೆಸಾರ್ಟ್‌ ಮತ್ತು ಜಲ ಸಾಹಸ ಚಟುವಟಿಕೆಗಳ ಬಗ್ಗೆ ಇರುವ ಅನುಮತಿ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಇದರ ಬೆನ್ನಹಿಂದೆಯೇ ಅವೇಡಾ ಪಂಚಾಯತ್‌ ಅಧ್ಯಕ್ಷರಿಂದ ಜಲ ಸಾಹಸ ಚಟುವಟಿಕೆ ನಡೆಸುವವರಿಗೆ ಪರವಾನಗಿ ಪತ್ರದ ರದ್ದತಿ ಜೊತೆಗೆ ನೋಟಿಸ್‌ ಜಾರಿಯಾಗಿದೆ. ಈ ಕ್ರಮವನ್ನು ಉದ್ಯಮಿಗಳು ಒಳಗೊಳಗೆ ವಿರೋಧಿಸಿದ್ದಾರೆ.

Advertisement

ಒಳನಾಡು ಜಲಸಾರಿಗೆ ಇಲಾಖೆಗೆ ಅಧಿಕಾರ: ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿ ಬಂದರು ಇಲಾಖೆ ನಿರ್ದೇಶಕರಿಗೆ ಇತ್ತು. ಈಗ ಈ ಇಲಾಖೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಕೇಂದ್ರ ಸರ್ಕಾರದ ಅಧೀನವಿದ್ದ ಈ ಇಲಾಖೆಯ ಎಲ್ಲಾ ಚಟುವಟಿಕೆಗಳು ಮೊದಲು ಬಂದರು ಇಲಾಖೆ ನಿರ್ದೇಶಕರ ವ್ಯಾಪ್ತಿಯಲ್ಲಿದ್ದವು. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಮಂಗಳೂರು ವಿಭಾಗದ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ಶರಾಬಿ ನದಿಗಳು ಸೇರಿದಂತೆ ಕರಾವಳಿಯಲ್ಲಿ ಹರಿವ 12 ನದಿಗಳಲ್ಲಿ ಏನೇ ಚಟುವಟಿಕೆ, ಸೇತುವೆ ನಿರ್ಮಾಣ, ಜಲಸಾರಿಗೆ ಪರವಾನಗಿ, ಬೋಟ್‌ ಸಂಚಾರ, ಬಾರ್ಜ್‌ ಚಟುವಟಿಕೆ ಏನೇ ಇದ್ದರೂ ಒಳನಾಡು ಜಲಸಾರಿಗೆ ಅಧಿಕಾರಿಯ ಅನುಮತಿ ಬೇಕು. ಇದು ನಿಯಮ ಹಾಗೂ ನದಿ ದಂಡೆಯಲ್ಲಿ 50 ಅಡಿ ಏನೇ ಶಾಶ್ವತ ನಿರ್ಮಾಣಗಳನ್ನು ಮಾಡುವಂತಿಲ್ಲ. ಅಲ್ಲದೆ ಜಲಸಾಹಸ ಚಟುವಟಿಕೆಗಳಿಗೆ, ಬೋಟ್‌ ಸಂಚಾರಕ್ಕೆ, ಸಾರಂಗ ಅನುಮತಿ (ತರಬೇತಿ ಪಡೆದ ಬೋಟ್‌ ಡ್ರೈವರÕ, ಈಜುಗಾರರು) ಎಲ್ಲವೂ ಒಳನಾಡು ಜಲಸಾರಿಗೆ ಅಧಿಕಾರಿಯಿಂದ ಪರಿಶೀಲನೆಯಾಗಿ, ಅನುಮತಿ ಪಡೆದಿರಬೇಕು ಎಂಬ ನಿಯಮವಿದೆ. ಇದನ್ನು ಎಷ್ಟು ಜನ ಪಾಲಿಸಿದ್ದಾರೆ. ಕಾಳಿ ನದಿ ದಂಡೆಗೆ ಈಚೆಗೆ ಆಗಿರುವ ಬೆಳವಣಿಗೆಗಳೇನು ಎಂಬುದನ್ನು ಒಳನಾಡು ಜಲಸಾರಿಗೆ ಅಧಿಕಾರ ಹೊತ್ತಿರುವ ಪಿಡಬ್ಲೂಡಿ ಇಲಾಖೆ ಹಾಗೂ ಸಿಆರ್‌ಝೆಡ್‌ ಅಧಿಕಾರಿ ಗಮನಿಸಬೇಕಾಗುತ್ತದೆ. ಇದು ಈಚಿನ ದಿನಗಳಲ್ಲಿ ಆದಂತಿಲ್ಲ. ಜಲಸಾಹಸ ಕ್ರೀಡೆಯನ್ನು ನಿಯಂತ್ರಿಸುವ ಅಧಿಕಾರ ಸಹ ಒಳನಾಡು ಜಲಸಾರಿಗೆಗೆ ಇದೆ. ಹಾಗಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಆಗಿರುವ ಪಾಲಿಸಬೇಕಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದನ್ನು ಕಂದಾಯ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಬದಲು ಸಂಬಂಧಿಸಿದ ಇಲಾಖೆ ಮಾಡಬೇಕಾಗಿದೆ. ನದಿ ದಂಡೆಯ 50 ಅಡಿ ಇರುವಂತೆಯೇ ನೈಸರ್ಗಿಕವಾಗಿ ಕಾಪಾಡಬೇಕಿದೆ ಎಂಬ ಮಾತು ಕೇಳಿಬಂದಿದೆ.

ಕಾಳಿ ನದಿ ದಂಡೆಯಲ್ಲಿನ ಹಾಗೂ ನದಿ ಪಾತ್ರದಲ್ಲಿನ ಮಾಲ್ಕಿ ಜಮೀನು ಇರಲಿ, ಖಾಸಗಿಯವರ ಭೂಮಿ ಇರಲಿ, ಅರಣ್ಯ ಇಲಾಖೆಯ, ಸರ್ಕಾರಿ ಭೂಮಿ ಇರಲಿ ಅಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಬೇಕಾದುದು ಒಳನಾಡು ಜಲಸಾರಿಗೆ ಇಲಾಖೆಯದ್ದು. ನದಿ ಪಾತ್ರ ಹಾಗೂ ನದಿ ದಂಡೆಯ 50 ಅಡಿ ಒಳನಾಡು ಜಲಸಾರಿಗೆಗೆ ಸೇರಿದ್ದು. ಇದನ್ನು ಇನ್‌ ಲ್ಯಾಂಡ್‌ ಆ್ಯಂಡ್‌ ವೆಜೆಲ್ಸ್‌ ಆ್ಯಕ್ಟ್ ಸ್ಪಷ್ಟವಾಗಿ ಹೇಳಿದೆ.

-ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next