ಬೀದರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಾದಿ ಭಾಗ್ಯ ಯೋಜನೆ ಮುಂದುವರಿಸಿ 50 ಸಾವಿರ ರೂ. ನೀಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದ್ದೇನೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ಕಳೆದೆರಡು ವರ್ಷಗಳಿಂದ ಕೋವಿಡ್ ಸೋಂಕಿನ ಕಾರಣದಿಂದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನುದಾನ ಸಿಕ್ಕಿರಲಿಲ್ಲ. ಶಾದಿ ಭಾಗ್ಯ ಯೋಜನೆ ಬಂದಾಗಿದೆ. ಈಗಾಗಲೇ ಸರ್ಕಾರದಿಂದ ಸಪ್ತಪದಿ ಯೋಜನೆಯಲ್ಲಿ 50 ಸಾವಿರ ರೂ. ನೀಡಲಾಗುತ್ತಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಳ್ಳು ಸಂದೇಶ ಹಾಕಿದ್ರೆ ಕ್ರಮ
ಸಾಮಾಜಿಕ ಜಾಲತಾಣ ದುರುಪಯೋಗ ಮಾಡಿಕೊಂಡು ಧರ್ಮ, ಜಾತಿ ಬಗ್ಗೆ ನಿಂದನೆ ಮಾಡುವುದು ಹಾಗೂ ಸಮಾಜದಲ್ಲಿ ವೈಷಮ್ಯ ಹುಟ್ಟು ಹಾಕುವ ಸುಳ್ಳು ಸಂದೇಶ ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಎಲ್ಲೋ ನಡೆದ ಘಟನೆ ಬಗ್ಗೆ ನಿಂದನೆ ಮಾಡುವುದು, ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಾರೆ. ಇಂಥ ಚಟುವಟಿಕೆ ಮೇಲೆ ನಿಗಾ ಇರಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವೆ ಎಂದರು.
ಸಮಾಜದಲ್ಲಿ ಕಾನೂನು ಪಾಲನೆ ಮಾಡುವವರು ಶೇ. 95ರಷ್ಟು ಜನರಿದ್ದಾರೆ. ಆದರೆ ಶೇ.5ರಷ್ಟು ಜನ ಮಾತ್ರ ಕಾನೂನು ವಿರೋಧಿಸುತ್ತಾರೆ. ಇಂಥವರನ್ನು ನಿಯಂತ್ರಿಸಿದರೆ ಶಾಂತಿ, ಸೌಹಾರ್ದತೆ ನೆಲೆಸಲು ಸಾಧ್ಯ ಎಂದ ಅಬ್ದುಲ್ ಅಜೀಮ್, ಪೊಲೀಸರು ಜಾತಿ, ಧರ್ಮ ಮಾಡುವುದು ಬೇಡ. ಇವರಿಗೆ ಪೊಲೀಸ್ ಇಲಾಖೆ ಧರ್ಮ, ಸಂವಿಧಾನವೇ ಗ್ರಂಥ. ಠಾಣೆಗೆ ಬರುವವರ ವೇಷಭೂಷಣ ನೋಡಿ ಅವರನ್ನು ಹೀಯಾಳಿಸುವುದು, ನಿಂದನೆ ಮಾಡುವುದು ಸರಿಯಲ್ಲ. ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಈ ಬಗ್ಗೆ ಪೊಲೀಸರಿಗೆ ತಿಳಿಸಿರುವೆ ಎಂದರು.
ಅಲ್ಪಸಂಖ್ಯಾತರ ಸಮುದಾಯದಲ್ಲಿ ಬರುವ ಜೈನರ ಮಕ್ಕಳಿಗಾಗಿ ಪ್ರತ್ಯೇಕ ವಸತಿ ನಿಲಯ ಸ್ಥಾಪಿಸಬೇಕೆಂದು ಸರ್ಕಾರದ ಗಮನಕ್ಕೆ ತಂದಿರುವೆ. ಬೀದರ ಜಿಲ್ಲೆಯಲ್ಲಿ ಸಾಕಷ್ಟೂ ವಕ್ಫ್ಗೆ ಸೇರಿದ ಭೂಮಿ ಇದೆ. ಇದನ್ನು ಕಾಯ್ದುಕೊಂಡು ಶಾಲೆ, ಆಸ್ಪತ್ರೆಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಸಮಾಜದಲ್ಲಿ ಕೋಮು ಸೌಹಾರ್ದತೆಯಿಂದ ಮಾತ್ರ ಶಾಂತಿ, ಪ್ರೀತಿ ನೆಲೆಸುವಂತೆ ಮಾಡಲು ಸಾಧ್ಯವಿದೆ. ಗಡಿ ಜಿಲ್ಲೆ ಬೀದರನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಸೌಹಾರ್ದತೆ ವಾತಾವರಣ ಇದೆ. ಸಣ್ಣ ಪುಟ್ಟ ಘಟನೆಗಳು ನಡೆಯುವುದು ಸಾಮಾನ್ಯ. ಆದರೆ, ಕೋಮು ಗಲಭೆಯಂಥ ಘಟನೆಗಳು ಜಿಲ್ಲೆಯಲ್ಲಿ ನಡೆದಿಲ್ಲ. ಇದೇ ರೀತಿ ಶಾಂತಿಯುತ ಸಮಾಜ ಮುಂದುವರಿಸಿಕೊಂಡು ಹೋಗಬೇಕೆಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿರುವೆ
– ಅಬ್ದುಲ್ ಅಜೀಮ್, ಅಧ್ಯಕ್ಷರು, ಅಲ್ಪಸಂಖ್ಯಾತರ ಆಯೋಗ