ಬೆಂಗಳೂರು: ವಿಕ್ಟೋರಿಯಾ ಸಮುತ್ಛಯದ ಎರಡು ಪ್ರಮುಖ ಆಸ್ಪತ್ರೆಗಳಾದ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾಯೋಜನೆ(ಪಿಎಂಎಸ್ ಎಸ್‌ವೈ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭಿಸಲು ಸಜ್ಜಾಗಿವೆ.
ಐದು ತಿಂಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪೂರ್ಣ ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟ ಸಂದರ್ಭದಲ್ಲಿ ಪಕ್ಕದಲ್ಲಿಯೇ ಇದ್ದ ಪಿಎಂಎಸ್‌ಎಸ್‌ವೈ ಸೂಪರ್ ಸ್ಪೆಷಾಲಿಟಿ ಆಸ್ಪತೆ ಮತ್ತು ಮಿಂಟೊ ಕಣ್ಣಿನ ಆಸ್ಪತ್ರೆಗಳ ಸೇವೆಯನ್ನು ಸ್ಥಗಿತಗೊಸಲಾಗಿತ್ತು. ಈ ಎರಡೂ ಆಸ್ಪತ್ರೆಗಳನ್ನು ಕೋವಿಡ್ ಸೋಂಕಿತರ ಸೇವೆಯಲ್ಲಿದ್ದ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಯಕ್ವಾರಂಟೈನ್ ಮತ್ತು ವಿಶ್ರಾಂತಿ ಕೇಂದ್ರವನ್ನಾಗಿ ನಿಯೋಜಿಸಲಾಗಿತ್ತು. ಇದರಿಂದ ಹೆಚ್ಚುವರಿ ಚಿಕಿತ್ಸೆಗೆಂದು ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಬರುತ್ತಿದ್ದ ಸಾವಿರಾರು ಮಂದಿಗೆ, ಫಾಲೊ ಅಪ್ ರೋಗಿಗಳಿಗೆ ಸಮಸ್ಯೆಯಾಗಿತ್ತು. ಸದ್ಯ ವೈದ್ಯಕೀಯ ಸಿಬ್ಬಂದಿಗೆ ಹೋಟೆಲ್‌ನಲ್ಲಿ ಕ್ವಾರಂ ಟೈನ್ ಮತ್ತು ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದ್ದು, ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿವೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಈಗಾಗಲೇ ಪಿಎಂಎಸ್‌ಎಸ್ ವೈ ಆರಂಭ: ಸೆ.23 ರಿಂದಲೇ ಪಿಎಂಎಸ್‌ಎಸ್‌ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪುನಾರಂಭವಾಗಿದ್ದು, ಮೊದಲಿನಂತೆ ನರರೋಗ, ಹೃದ್ರೋಗ, ಯಕೃತ್ ಸಂಬಂದಿ ಹಾಗೂ ಮಕ್ಕಳ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಪೂರ್ವದಲ್ಲಿ ನಿತ್ಯ 800ಕ್ಕೂ ಹೆಚ್ಚು ಹೊರರೋಗಿಗಳು ತಪಾಸಣೆಗೆ ಆಗಮಿಸುತ್ತಿದ್ದರು. ಸದ್ಯ ರೋಗಿಗಳ ಸಂಖ್ಯೆ ಕಡಿಮೆ ಇದ್ದು, ನಿತ್ಯ 50 ಮಂದಿ ಆಗಮಿಸುತ್ತಿದ್ದಾರೆ. ಇನ್ನು ಒಳರೋಗಿಗಳ ದಾಖಲಾತಿಯು ಆರಂಭವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಉಚಿತ ಔಷಧಕ್ಕಾಗಿ ಬರುವವರೇ ಹೆಚ್ಚು: ಖಾಸಗಿ ಔಷಧಾಲಯಗಳಲ್ಲಿ ಹೃದ್ರೋಗ, ನರ ಸಂಬಂಧಿ ಕಾಯಿಲೆಗಳ ಮಾತ್ರೆಗಳು ದುಬಾರಿ ಇದ್ದು, ಬಡವರು ಪ್ರತಿ ತಿಂಗಳು ಸಾವಿರಾರು ರೂ.ಕೊಟ್ಟ ಖರೀದಿಸಲು ಕಷ್ಟವಾಗುತ್ತಿತ್ತು. ಹೀಗಾಗಿ, ಕಳೆದ ಎಂಟು ವರ್ಷಗಳಿಂದ ನಿತ್ಯ ಪಿಎಂಎಸ್‌ಎಸ್‌ವೈ ಆಸ್ಪತ್ರೆಯಲ್ಲಿ ದೀರ್ಘ ಕಾಲದ ರೋಗಗಳಿಗೆ ಉಚಿತ ಔಷಧ ವಿತರಿಸಲಾಗುತ್ತಿದೆ. ಕೊರೊನಾ ಹಿನ್ನೆಲೆ ಕೆಲ ತಿಂಗಳು ಔಷಧ ವಿತರಣೆ ಬಂದ್ ಆಗಿತ್ತು. ಸದ್ಯ ಔಷಧ ವಿತರಣೆ ಮಾಡಲಾಗುತ್ತಿದೆ. ಫಾಲೋಅಪ್ ರೋಗಿಗಳು ಬಂದು ಒಪಿಡಿಯಲ್ಲಿ ತಪಾಸಣೆಗೊಳಗಾಗಿ, ಮಾತ್ರೆ ಪಡೆಯಬಹುದು ಎಂದು ಆಸ್ಪತ್ರೆ ನಿರ್ದೇಶಕ ಡಾ.ಗಿರೀಶ್ ತಿಳಿಸಿದ್ದಾರೆ.
ಅ. 1ರಿಂದ ಮಿಂಟೋ ಪೂರ್ಣಾರಂಭ : ತುರ್ತು ಚಿಕಿತ್ಸೆ ಮಾತ್ರ ಲಭ್ಯವಿದ್ದ ಮಿಂಟೋ ಪ್ರಾದೇಶಿಕಕಣ್ಣಿನ ಆಸ್ಪತ್ರೆಯಲ್ಲಿ, ಅ.1 ರಿಂದ ಎಲ್ಲಾ ಆರೋಗ್ಯ ಸೇವೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುತ್ತಿದೆ. ಈ ಮೂಲಕಕಣ್ಣಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಎದುರು ನೋಡುತ್ತಿದ್ದ ಬಡರೋಗಿಗಳಿಗೆ ಅನುಕೂಲವಾಗಲಿದೆ. ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ಆಸ್ಪತ್ರೆಯಲ್ಲಿ ಜೂ.22ರಿಂದಲೇ ಹೊರ ರೋಗಿಗಳ ವಿಭಾಗ ಆರಂಭಿಸಲಾಗಿದೆ. ತುರ್ತು ಹಾಗೂ ಗಂಭೀರ ರೆಟಿನಾ, ಗ್ಲಾಕೊಮಾ, ಕಾರ್ನಿಯಾ ಸಮಸ್ಯೆಗಳಿಗೆ ಮಾತ್ರವೇ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಕಣ್ಣಿನ ಪೊರೆ(ಕೆಟರ್ಯಾಕ್ಟ್) ಶಸ್ತ್ರಚಿಕಿತ್ಸೆ ಸೇರಿದಂತೆ, ಪಾಲೋ ಅಪ್ ರೋಗಿಗಳ ಶಸ್ತ್ರಚಿಕಿತ್ಸೆಗೆ ಬೇಡಿಕೆ ಹೆಚ್ಚಾಗಿದೆ. ರೋಗಿಗಳು ನಿತ್ಯ ಆಸ್ಪತ್ರೆಗೆಕರೆ ಮಾಡಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಪುನರಾರಂಭದಕುರಿತು ವಿಚಾರಿಸುತ್ತಿದ್ದರು. ಈ ಕುರಿತು ಸರ್ಕಾರದ ಗಮನಕ್ಕೆ ತಂದು ಪೂರ್ಣದಲ್ಲಿ ಸೇವೆ ಆರಂಭಿಸಲು ಮುಂದಾಗಿದ್ದೇವೆ.
ಇನ್ನು ಕಣ್ಣಿನ ಚಿಕಿತ್ಸೆಗೆ ಬರುವವರಿಗೆ ಕೋವಿಡ್ ಸೋಂಕು ಇದ್ದಲ್ಲಿ ಪ್ರತ್ಯೇಕ ಶಸ್ತ್ರ ಚಿಕಿತ್ಸಾಕೊಠಡಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ, ಐಸೋಲೇಷನ್ ವಾರ್ಡ್‌ನಲ್ಲಿ ಆರೈಕೆ ಮಾಡಲುಕ್ರಮಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.