Advertisement

ಮುನ್ನೆಚ್ಚರ ವಹಿಸದಿದ್ದರೆ ಪಾಲಿಕೆ ಅಧಿಕಾರಿಗಳೇ ಹೊಣೆ

12:08 PM Aug 22, 2017 | Team Udayavani |

ಬೆಂಗಳೂರು: ನಗರದಲ್ಲಿ ಪ್ರತಿ ಮಳೆಗಾಲದಲ್ಲಿ ಅನಾಹುತಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಿಬಿಎಂಪಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿ ಅಥವಾ ನೌಕರರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಎಚ್ಚರಿಸಿದೆ.

Advertisement

ಮೇ ಅಂತ್ಯದಲ್ಲಿ ಸುರಿದ ಮಳೆಯ ಹೊಡೆತಕ್ಕೆ ಜೆ.ಸಿ. ನಗರದ ರಾಜಕಾಲುವೆಯಲ್ಲಿ ಜೆಸಿಬಿ ಸಹಿತ ಶಾಂತಕುಮಾರ (34) ಎಂಬುವರು ಕೊಚ್ಚಿಹೋದರು. ಇದುವರೆಗೆ ಅವರ ದೇಹ ಪತ್ತೆ ಆಗಿಲ್ಲ. ಕಳೆದ ವಾರ ತಡರಾತ್ರಿ ಸುರಿದ ದಾಖಲೆ ಮಳೆಗೆ ಎಚ್‌ಎಎಲ್‌ ವಾರ್ಡ್‌ನಲ್ಲಿ ಓರ್ವ ಬಾಲಕಿ ಕೊಚ್ಚಿಹೋಗಿದ್ದು, ಮಹದೇವಪುರದಲ್ಲಿ ಶವ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಅನಾಹುತಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು.

ಶಾಲೆಗೆ ಸುತ್ತೋಲೆ ಕಳುಹಿಸತಕ್ಕದ್ದು: ಸಾರ್ವಜನಿಕ ಉದ್ಯಾನಗಳು, ಕೆರೆಗಳು, ಆಟದ ಮೈದಾನಗಳಲ್ಲಿ ಅಭಿವೃದ್ಧಿ ಅಥವಾ ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ಆ ಪ್ರದೇಶದ ಸುತ್ತಲಿನ ಶಾಲೆಗಳಿಗೆ ಸುತ್ತೋಲೆ ಕಳುಹಿಸಿ, ಮಕ್ಕಳಿಗೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸದರಿ ಸ್ಥಳಗಳನ್ನು ಬಳಸದಂತೆ ಸೂಚಿಸಬೇಕು. ಮುಖ್ಯದ್ವಾರ ಹೊರತುಪಡಿಸಿ, ಉಳಿದ ಕಡೆಗಳಲ್ಲಿ ಬೇಲಿ/ ಕಾಂಪೌಂಡ್‌ ನಿರ್ಮಿಸಿ, ಪ್ರವೇಶ ನಿರ್ಬಂಧಿಸಬೇಕು.

ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬಳಸಿದ ಅಥವಾ ಬಳಸಬಹುದಾದ ಸಲಕರಣೆಗಳು ಕುಸಿದುಬೀಳದಂತೆ ನೋಡಿಕೊಳ್ಳಬೇಕು. ಕಾಮಗಾರಿ ನಡೆಯುವ ಜಾಗಗಳಲ್ಲಿ ಮುಂಜಾಗ್ರತಾ ಫ‌ಲಕಗಳನ್ನು ಅಳವಡಿಸಿ, ಮಕ್ಕಳಿಗೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗುವಂತೆ ಎಚ್ಚರ ವಹಿಸಬೇಕು. ತೊಂದರೆ ಎದುರಾದಲ್ಲಿ ತುರ್ತು ಸಂಪರ್ಕಿಸಬಹುದಾದ ದೂರವಾಣೀ ಸಂಖ್ಯೆಗಳನ್ನೂ ಪ್ರದರ್ಶಿಸಬೇಕು.

ಕಾರ್ಮಿಕರ ಸೂಕ್ತ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ಕೆ.ಎ. ಹಿದಾಯತ್ತುಲ್ಲ ಆದೇಶದಲ್ಲಿ ಸೂಚಿಸಿದ್ದಾರೆ. ಸಾಮಾನ್ಯವಾಗಿ ಕಾಮಗಾರಿ ಕೈಗೆತ್ತಿಕೊಂಡಾಗ ಸ್ಥಳೀಯ ಸಂಸ್ಥೆ ಹಾಗೂ ಗುತ್ತಿಗೆದಾರರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುತ್ತಾರೆ. ಆದರೆ, ನಗರದಲ್ಲಿ ಅಹಿತಕರ ಘಟನೆಗಳು ಮರುಕಳಿಸುತ್ತಿರುವುದು ಮುನ್ನೆಚ್ಚರಿಕೆ ಕ್ರಮದ ಬಗೆಗಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಕ್ರಿಮಿನಲ್‌ ಮೊಕದ್ದಮೆ
ಕಾಮಗಾರಿಗಳ ಅನುಷ್ಠಾನದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ಸಾರ್ವಜನಿಕರ ಪ್ರಾಣಕ್ಕೆ ಹಾನಿ ಉಂಟುಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಅಷ್ಟೇ ಅಲ್ಲ, ಯಾವುದೇ ಅನಾಹುತಗಳಿಗೂ ಸಂಬಂಧಿಸಿದ ಉಸ್ತುವಾರಿ ಎಂಜಿನಿಯರ್‌ ಅನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕು ಎಂದು ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ಕಾಮಗಾರಿ ಅನುಷ್ಠಾನಗೊಳಿಸುವ ಸಂಸ್ಥೆ ಅಥವಾ ಇಲಾಖೆಯು ಆಯಾ ಭಾಗದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಯಾ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ಸಾರ್ವಜನಿಕರಿಗೂ ಪೂರಕ ಮಾಹಿತಿ ನೀಡುವಂತೆ ಕೋರಬೇಕು. 

Advertisement

Udayavani is now on Telegram. Click here to join our channel and stay updated with the latest news.

Next