Advertisement

ನಾಯಕರಿಗೆ ಜಿಲ್ಲೆಗಳ ಹೊಣೆ; ಗುಜರಾತ್‌ನಲ್ಲಿ ಮತ್ತೆ ಅಧಿಕಾರಕ್ಕೇರಲು ಬಿಜೆಪಿ ಕಾರ್ಯತಂತ್ರ

11:24 PM Oct 16, 2022 | Team Udayavani |

ಹೊಸದಿಲ್ಲಿ: ಸದ್ಯದಲ್ಲೇ ವಿಧಾನಸಭೆ ಚುನಾವಣೆ­ಗಳನ್ನು ಎದುರಿಸಲಿರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ದಿನೇ ದಿನೆ ರಾಜಕೀಯ ಕಾವೇರುತ್ತಿದೆ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮದೇ ಆದ ರೀತಿಯಲ್ಲಿ ವಿವಿಧ ಕಾರ್ಯ­ತಂತ್ರಗಳನ್ನು ರೂಪಿಸುತ್ತಾ ಮತದಾರರನ್ನು ಆಕರ್ಷಿ ಸಲು ಯತ್ನಿಸುತ್ತಿವೆ.

Advertisement

ಗುಜರಾತ್‌ನಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಪಣತೊಟ್ಟಿರುವ ಬಿಜೆಪಿ, “ಮೈಕ್ರೋ -ಮ್ಯಾನೇಜ್‌ಮೆಂಟ್‌’ನ ಮೊರೆ ಹೋಗಿದೆ. ಅಂದರೆ, ಇತರ ಬೇರೆ ಬೇರೆ ರಾಜ್ಯಗಳ ನಾಯಕರು, ರಾಷ್ಟ್ರೀಯ ಪದಾಧಿಕಾರಿಗಳು, ಅನುಭವಿಗಳನ್ನು ಗುಜ­ರಾತ್‌ಗೆ ಕರೆಸಿಕೊಂಡು, ಒಬ್ಬೊಬ್ಬರಿಗೆ ಒಂದೊಂದು ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗುತ್ತಿದೆ.

ಕಾಂಗ್ರೆಸ್‌ ಗಂಭೀರವಾಗಬೇಕು: ಇದೇ ವೇಳೆ, ಗುಜ­ರಾತ್‌ನಲ್ಲಿ ಬಿಜೆಪಿ ವಿರೋಧಿ ವಾತಾವರಣವಿದ್ದು, ಅದನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮಾಜಿ ಸಿಎಂ, ಕಾಂಗ್ರೆಸ್‌ ನಾಯಕ ಶಂಕರ್‌ಸಿನ್ಹ ವಘೇಲಾ ರವಿವಾರ ಹೇಳಿದ್ದಾರೆ.

ಇಂಥ ಸ್ಥಿತಿಯಲ್ಲಿ ಕಾಂಗ್ರೆಸ್‌ ನಾಯಕತ್ವವು ಆಸಕ್ತಿ ತೋರ­ಬೇಕು. ಒಬ್ಬ ಕಿರಿಯ ನಾಯಕನನ್ನು(ರಘು ಶರ್ಮಾ) ಗುಜರಾತ್‌ ಉಸ್ತುವಾರಿಯನ್ನಾಗಿ ನೇಮಕ ಮಾಡಲಾ­ಗಿದೆ. ಪಕ್ಷದಲ್ಲಿ ಹಿರಿಯ ನಾಯಕರಿಲ್ಲವೇ? ಪ್ರಧಾನಿ ಮೋದಿ ಅವರು ರಾಜ್ಯಕ್ಕೆ 10 ಬಾರಿ ಭೇಟಿ ನೀಡಿದರೆ, ರಾಹುಲ್‌ ಗಾಂಧಿ ಕನಿಷ್ಠ 2 ಬಾರಿಯಾದರೂ ಭೇಟಿ ನೀಡಬೇಕಲ್ಲವೇ ಎಂದೂ ಅವರು ಪ್ರಶ್ನಿಸಿದ್ದಾರೆ.

ಆಪ್‌ನಿಂದ 5ನೇ ಪಟ್ಟಿ ಬಿಡುಗಡೆ: ಗುಜರಾತ್‌ ಅಸೆಂಬ್ಲಿ ಚುನಾವಣೆಗೆ 12 ಅಭ್ಯರ್ಥಿಗಳ 5ನೇ ಪಟ್ಟಿ ಯನ್ನು ಆಮ್‌ ಆದ್ಮಿ ಪಕ್ಷ ರವಿವಾರ ಬಿಡುಗಡೆ ಮಾಡಿದೆ. ಈ ಮೂಲಕ 182 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಈವರೆಗೆ 53 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಆಪ್‌ ಬಹಿರಂಗಪಡಿಸಿದಂತಾಗಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿಪಕ್ಷ ಕಾಂಗ್ರೆಸ್‌ ಈವರೆಗೆ ಯಾವುದೇ ಪಟ್ಟಿ ಬಿಡುಗಡೆ ಮಾಡಿಲ್ಲ.

Advertisement

ಬಿಜೆಪಿ ಎಲ್ಲ ದಾಖಲೆ ಮುರಿಯಲಿದೆ!: ಗುಜರಾತ್‌ನಲ್ಲಿ ಈಗ ಬಿಜೆಪಿ ಪರ ದೊಡ್ಡಮಟ್ಟದ ಅಲೆ ಎದ್ದಿದೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಬಿಜೆಪಿಯು ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದು, ಹೊಸ ಇತಿಹಾಸ ಸೃಷ್ಟಿಸಲಿದೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜತೆಗೆ, 2024ರ ಲೋಕಸಭೆ ಚುನಾವಣೆಯಲ್ಲೂ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದೂ ಅವರು ಹೇಳಿದ್ದಾರೆ. ಗುಜರಾತ್‌ನ ವಲ್ಸಾದ್‌ ಜಿಲ್ಲೆಯಲ್ಲಿ ಗೌರವ್‌ ಯಾತ್ರೆಯಲ್ಲಿ ಭಾಷಣ ಮಾಡಿ ಕಾಂಗ್ರೆಸ್‌ ಹಾಗೂ ಆಪ್‌ ವಿರುದ್ಧ ವಾಗ್ಧಾಳಿ ನಡೆಸಿದ ಠಾಕೂರ್‌, “ಹಿಂದೆಲ್ಲ ಇಟಲಿಯ ಮಹಿಳೆಯು ಪ್ರಧಾನಿ ಮೋದಿಯವರನ್ನು ಅವಮಾನಿ ಸುತ್ತಿದ್ದರು. ಈಗ ಒಬ್ಬ ಇಟಾಲಿಯಾ(ಆಪ್‌ ನಾಯಕ) ಮೋದಿಯವರ ತಾಯಿಗೆ ಅವಮಾನ ಮಾಡು ತ್ತಿದ್ದಾರೆ’ ಎಂದೂ ಕಿಡಿಕಾರಿದ್ದಾರೆ.

ಸಿ.ಟಿ.ರವಿ ಅವರಿಗೂ ಜವಾಬ್ದಾರಿ
ನೆರೆಯ ರಾಜಸ್ಥಾನ, ಮಧ್ಯಪ್ರದೇಶ ಮಾತ್ರವಲ್ಲದೇ, ಉತ್ತರಪ್ರದೇಶದಂಥ ರಾಜ್ಯಗಳ ನಾಯಕರಿಗೂ ಪ್ರಚಾರದ ಹೊಣೆಯನ್ನು ಬಿಜೆಪಿ ವಹಿಸಿದೆ. ಈ ನಾಯಕರು ತಮಗೆ ನೀಡಿದ ಜಿಲ್ಲೆ ಗಳಲ್ಲಿ ಮತದಾರರ ಮನಸ್ಥಿತಿ, ಸ್ಥಳೀಯ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೇಂದ್ರ ನಾಯಕತ್ವಕ್ಕೆ ವರದಿ ನೀಡುತ್ತಾರೆ. ಬಿಜೆಪಿ ರಾ. ಪ್ರಧಾನ ಕಾರ್ಯದರ್ಶಿ ವಿನೋದ್‌ ತಾಬ್ಡೆ ಅವರಿಗೆ ವಡೋದರಾ ಮತ್ತು ಛೋಟಾ ಉದಯಪುರ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಅದೇ ರೀತಿ, ಮತ್ತೊಬ್ಬ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ನಾಯಕ ಸಿ.ಟಿ. ರವಿ ಅವರಿಗೆ ಆನಂದ್‌ ಜಿಲ್ಲೆಯ ಉಸ್ತುವಾರಿ ಕೊಡಲಾಗಿದೆ. ಈ ಹಿಂದೆ ಗುಜರಾತ್‌ನಲ್ಲಿ ಮಾಧವ ಸಿನ್ಹಾ ಸೋಲಂಕಿ ನೇತೃತ್ವದಲ್ಲಿ 149 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ದಾಖಲೆಯನ್ನು ಮುರಿದು, ಹೊಸ ದಾಖಲೆ ನಿರ್ಮಿಸಲು ಬಿಜೆಪಿ ಪಣತೊಟ್ಟಿದೆ.

 

Advertisement

Udayavani is now on Telegram. Click here to join our channel and stay updated with the latest news.

Next