Advertisement

ಕುಲಶೇಖರ-ಕಣ್ಣಗುಡ್ಡ ನಿವಾಸಿಗಳಿಗೆ ಹೊಸ ರಸ್ತೆ ಭಾಗ

11:35 AM Oct 25, 2018 | Team Udayavani |

ಮಹಾನಗರ: ಸ್ಮಾರ್ಟ್‌ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರಕ್ಕೆ ಹೊಂದಿಕೊಂಡಿರುವ ಕುಲಶೇಖರ-ಕಣ್ಣಗುಡ್ಡ ಸುತ್ತಮುತ್ತಲಿನ ಪರಿಸರದ ಸಾರ್ವಜನಿಕರ ನಲುವತ್ತು ವರ್ಷಗಳ ಹಿಂದಿನ ಬೇಡಿಕೆಗೆ ಕೊನೆಗೂ ಫಲಸಿಕ್ಕಿದೆ.

Advertisement

ಮಳೆಗಾಲ ಬಂದರೆ ಸಾಕು ಮೇಲ್ತೋಟದಿಂದ ಉಮಿಕಾನ್‌ ಮೈದಾನವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗುತ್ತದೆ. ಪ್ರತಿದಿನ ಬಸ್‌, ಕಾರು ಸಹಿತ ಹತ್ತಾರು ವಾಹನಗಳು ಸಂಚರಿಸುತ್ತಿದ್ದು, ಇನ್ನೂ ಡಾಮರು ಕಂಡಿಲ್ಲ. ಈ ರಸ್ತೆ ಕೆಳಗೆ ರೈಲು ಹಳಿ ಹಾದು ಹೋಗುವುದರಿಂದ ಪಾಲಿಕೆಗೆ ರಸ್ತೆ ಕಾಮಗಾರಿ ನಡೆಸಲು ರೈಲ್ವೇ ಇಲಾಖೆ ಈವರೆಗೆ ಅನುಮತಿ ದೊರಕಿರಲಿಲ್ಲ. ಇದರಿಂದ ಇದರ ಪಕ್ಕದಲ್ಲಿಯೇ ಇದೀಗ ಪರ್ಯಾಯ ರಸ್ತೆ ನಿರ್ಮಾಣವಾಗುತ್ತಿದೆ. ಪಾಲಿಕೆಯ ವಾರ್ಡ್‌ ಸಂಖ್ಯೆ 36 ಮತ್ತು 51ರಲ್ಲಿ ಈ ರಸ್ತೆ ಹಾದುಹೋಗುತ್ತಿದ್ದು, ಇದೀಗ ರೈಲ್ವೇ ಇಲಾಖೆಯಿಂದ 1 ಕೋಟಿ 32 ಲಕ್ಷ ರೂ. ವೆಚ್ಚದಲ್ಲಿ ಪಾಲಿಕೆ ಲೀಸ್‌ ಮಾದರಿಯಲ್ಲಿ ಈ ಜಾಗವನ್ನು ಖರೀದಿ ಮಾಡಿದೆ. ಹೊಸ ರಸ್ತೆ ಅಭಿವೃದ್ಧಿಯಿಂದಾಗಿ ಕಣ್ಣಗುಡ್ಡ, ಉಮಿಕಾನ ಮೈದಾನ, ಮೇಲ್ತೋಟ್ಟು, ಸೂರ್ಯನಗರ, ನೂಜಿ, ಸರಿಪಳ್ಳ, ಪುಳಿರೇ, ಕಲಾಯಿ, ಪ್ರಾದ್‌ ಸಾಬ್‌ ಕಾಲನಿ, ಕರ್ಪಿಮಾರ್‌, ದೆಕ್ಕಾಡಿ ಮೊದಲಾದ ಪ್ರದೇಶದ ಜನತೆಗೆ ಪ್ರಯೋಜನವಾಗಲಿದೆ.

ಕುಲಶೇಖರದಿಂದ ಕಣ್ಣಗುಡ್ಡ ಪ್ರದೇಶದವರೆಗೆ ಸುಮಾರು 2 ಕಿ.ಮೀ. ದೂರ ಇದೆ. ಗುಂಡಿ ಬಿದ್ದ ರಸ್ತೆಯಾಗಿರುವುದರಿಂದ ರವಿವಾರ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಇದ್ದ ಸಮಯದಲ್ಲಿ ಖಾಸಗಿ ಸಿಟಿ ಬಸ್‌ ಗಳು ಟ್ರಿಪ್‌ ಕಡಿತಗೊಳಿಸುತ್ತವೆ. ಒಂದು ವೇಳೆ ಕುಲಶೇಖರದಿಂದ ವಾಹನ ಬಾಡಿಗೆ ಮಾಡಿಕೊಂಡು ಬರಬೇಕಾದರೆ ಸಾಮಾನ್ಯ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಾರೆ. ಮಳೆ ಬಂದರಂತೂ ಈ ರಸ್ತೆ ಅವ್ಯವಸ್ಥೆ ಅಷ್ಟಿಷ್ಟಲ್ಲ ಎನ್ನುತ್ತಾರೆ ಸ್ಥಳೀಯರು.

ತಿಂಗಳಲ್ಲಿ ರಸ್ತೆ ಸಂಪೂರ್ಣ
ಮೇಲ್ತೋಟದಿಂದ ಉಮಿಕಾನ್‌ ಮೈದಾನವರೆಗಿನ 800 ಮೀ. ರಸ್ತೆಯು 85 ಲಕ್ಷ ರೂ. ಮೊತ್ತದಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಕೆಲವು ದಿನಗಳ ಹಿಂದಿನಿಂದಲೇ ರಸ್ತೆ ಅಗೆಯಲು ಪ್ರಾರಂಭಿಸಿದ್ದು, ಕೆಲಸ ನಡೆಯುತ್ತಿದೆ. ಮುಂದಿನ ತಿಂಗಳು ರಸ್ತೆ ಸಂಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ.

ಪ್ರಧಾನಿ ಮೋದಿಗೆ ಪತ್ರ
ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ಎಂಟನೇ ತರಗತಿಯ ವಿದ್ಯಾರ್ಥಿ ಯಶಸ್‌ ರೈ ಸಹಿತ ಸಾರ್ವಜನಿಕರ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಪತ್ರವನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದಿಂದ ಈಗಾಗಲೇ ಉತ್ತರ ಬಂದಿದೆ.

Advertisement

 85 ಲಕ್ಷ ರೂ. ವೆಚ್ಚ
ಕೆಲವು ವರ್ಷಗಳಿಂದ ಡಾಮರು ಕಾಣದಂತಹ ಮೇಲ್ತೋಟದಿಂದ ಉಮಿಕಾನ್‌ ಮೈದಾನವರೆಗಿನ 800 ಮೀ. ಹೊಸ ರಸ್ತೆ ಕಾಮಗಾರಿ ಆರಂಭವಾಗಿದೆ. ಸುಮಾರು 85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದ ಮಂದಿಗೆ ಉಪಯೋಗವಾಗಲಿದೆ.
– ಭಾಸ್ಕರ್‌ ಕೆ.,
ಪಾಲಿಕೆ ಮೇಯರ್‌

ರಸ್ತೆ ಇಕ್ಕಟ್ಟಾಗಿದೆ
ಕುಲಶೇಖರದಿಂದ ಕಣ್ಣಗುಡ್ಡವರೆಗೆ ಇರುವ 2 ಕಿ.ಮೀ. ರಸ್ತೆ ತುಂಬಾ ಇಕ್ಕಟ್ಟಾಗಿದೆ. ಈ ರಸ್ತೆಯನ್ನು ವಿಸ್ತರಿಸುವ ಅಗತ್ಯವಿದೆ. ಜತೆಗೆ ಬೀದಿ ದೀಪ ಸಹಿತ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ.
ಪ್ರಕಾಶ್‌ ಬಾಬು ಸುವರ್ಣ,
  ಸ್ಥಳೀಯರು

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next