ಹುಣಸೂರು: ಪಶ್ಚಿಮಘಟ್ಟ ಶ್ರೇಣಿಯಲ್ಲಿ ಹರಿಯುವ 365 ದಿನಗಳೂ ಹರಿಯುವ 300 ನದಿಗಳಲ್ಲಿ ಕೊಡಗಿನಲ್ಲಿ ಹುಟ್ಟಿ ಹುಣಸೂರಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಳೆದ 30 ವರ್ಷಗಳಿಂದ ಸಂಪೂರ್ಣ ಮಲಿನವಾಗಿದ್ದು, ನದಿ ಉಳಿವಿಗಾಗಿ ನಮ್ಮ ಸಂಸ್ಥೆ ಹೋರಾಟ ರಾಜ್ಯ, ಕೇಂದ್ರ ಸರಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹುಣಸೂರು ಸೇವ್ ಅವರ್ ಅರ್ಥ್ ಕ್ಲಬ್ ಅಧ್ಯಕ್ಷ ಸಂಜಯ್ ವಿಷಾಧಿಸಿದರು.
ತಾಲೂಕಿನ ಮರದೂರಿನ ಲಾ ಸಲೆಟ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ “ಪರಿಸರ ಮಿತ್ರ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟ, ಹಿಮಾಲಯದ ಪರ್ವತ ಶ್ರೇಣಿಯಿಂದಾಗಿ ಭಾರತ ಸಮೃದ್ಧಿಯಾಗಿದೆ. ನಮ್ಮ ಉಳಿವಿಗಾಗಿ ಈ ಘಟ್ಟ-ಪರ್ವತಗಳನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ನದಿ ಉಳಿವಿಗೆ ಶ್ರಮಿಸಿ: ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಲಕ್ಷ್ಮಣತೀರ್ಥ ನದಿಯ ಪುನಃಶ್ಚೇತನಕ್ಕಾಗಿ ಸರಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಈ ನಿಟ್ಟಿನಲ್ಲಿ ಯುವ ವಿದ್ಯಾರ್ಥಿಗಳು ನದಿ ಉಳಿವಿಗೆ ಶ್ರಮಿಸಬೇಕು. ಯುವಜನತೆ ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ, ಆದರೆ, ಇಂದಿನ ಯುವಜನತೆ, ಇಂರ್ಟನೆಟ್, ಮೋಜಿನ ಜೀವನಕ್ಕೆ ಬಿದ್ದು, ಮಾನವೀಯ ಸಂಬಂಧಗಳನ್ನೇ ಕಳಚಿಕೊಳ್ಳುತ್ತಿರುವುದು ವಿಷಾದಕರ. ಯುವಜನತೆ ಸಂಸ್ಕೃತಿ, ಕುಟುಂಬ, ಸಮಾಜದತ್ತ ಗಮನಹರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಗಿಡಗಳನ್ನು ಪೋಷಿಸಿ: ಪರಿಸರವೆಂದರೆ ಬರಿ ಗಿಡ ನೆಡುವುದಲ್ಲಾ, ನದಿ, ಕೆರೆ-ಕಟ್ಟೆ, ತೋಡು, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ, ಸ್ವತ್ಛತೆಗೆ ಆದ್ಯತೆ ನೀಡಬೇಕಿದೆ. ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಕೇವಲ ಗಿಡ ನೆಟ್ಟರೆ ಸಾಲದು, ಗಿಡಗಳು ಮಕ್ಕಳಂತೆ, ಅವುಗಳನ್ನು ಮಕ್ಕಳಂತೆ ಪೋಷಣೆ ಮಾಡಿದಾಗ ಮಾತ್ರ ನಾವು ಗಿಡ ನೆಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ. ಆಗ ಮಾತ್ರ ನಾವು ಪರಿಸರ ಉಳಿಸಿದಂತಾಗುತ್ತದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಯೋನ್ಮುಖರಾಗಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಪರಿಸರಪ್ರೇಮಿ ಲಕ್ಷ್ಮಣ್‌ರಾವ್, ಪ್ರಾಂಶುಪಾಲ ರವಿದೀಪಕ್, ಎಸ್‌ಐ ಚಂದ್ರಶೇಖರ್, ಫಾದರ್‌ಗಳಾದ ಜೇಮ್ಸ್ ಕಳ್ಳಿಯತ್, ತೋಯನಾಧನ್, ರಿಜೋ, ಮುಖ್ಯ ಶಿಕ್ಷಕಿ ಸಿಸ್ಟರ್ ಕರುಣಾ, ಸೇವ್ ಅವರ್ ಅರ್ಥ್ ಕ್ಲಬ್ ನಿರ್ದೇಶಕ ರಾಜೇಂದ್ರ, ಚಿಕ್ಕಹುಣಸೂರು ಶ್ರೀನಿವಾಸ್, ಸ್ಮಿತಾ ಇತರರು ಹಾಜರಿದ್ದರು.
ಅನುಪಯುಕ್ತ ಪ್ಲಾಸ್ಟಿಕ್ ಖರೀದಿ: ಪರಿಸರಕ್ಕೆ ಮಾರಕವಾಗಿರುವ ಹಾಗೂ ಬಳಸಿರುವ ಎಲ್ಲಾ ರೀತಿಯ ಪ್ಲಾಸ್ಟಿಕ್‌ನ್ನು ಸೇವ್ ಅವರ್ ಅರ್ಥ್ ಕ್ಲಬ್ ವತಿಯಿಂದ ನಗರದ ಎರಡು ಕಡೆ ಕೆ.ಜಿ.ಗೆ 10 ರೂ.ಗಳಂತೆ ಖರೀದಿಸಲಾಗುತ್ತಿದೆ. ಪರಿಸರ ದಿನದಂದು ಕೆ.ಜಿ.ಗೆ 25 ರೂ.ಗಳಂತೆ ಖರೀದಿಸಲಾಯಿತು.
ಈ ಪ್ಲಾಸ್ಟಿಕ್ ಅನ್ನು ಕರಗಿಸಿ ಮರು ಬಳಕೆ ಮಾಡಲಾಗುವುದು. ತಾಲೂಕಿನ ಜನರು ಪೂಜೆಯ ಬಳಿಕ ಹೂವನ್ನು ಹೊಳೆಗೆ, ಕೆರೆಗೆ ಹಾಕಿ ನೀರನ್ನು ಕಳುಷಿತಗೊಳಿಸಬಾರದು. ಆ ಹೂವನ್ನು ಮಣ್ಣಿನಲ್ಲಿ ಹಾಕಿ ಗೊಬ್ಬರ ಮಾಡಿ ಮತ್ತೆ ಗಿಡಗಳಿಗೆ ಬಳಸಬೇಕು ಎಂದು ಹುಣಸೂರು ಸೇವ್ ಅವರ್ ಅರ್ಥ್ ಕ್ಲಬ್ ಅಧ್ಯಕ್ಷ ಸಂಜಯ್ ಮನವಿ ಮಾಡಿದರು.