ಹಳೆಯಂಗಡಿ: ಗಾಮೀಣ ಭಾಗದ ಸಮಸ್ಯೆಗಳಿಗೆ ಗ್ರಾಮ ಪಂಚಾಯತ್ ಸದಸ್ಯರು ಧ್ವನಿಯಾಗುವ ಮನೋಭಾವ ಬೆಳೆಸಿಕೊಂಡಲ್ಲಿ ಗ್ರಾಮದಿಂದ ಆರಂಭವಾಗುವ ಅಭಿವೃದ್ಧಿ ಪಥ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸುತ್ತದೆ ಎಂದು ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯತ್‌ನ ತೋಕೂರಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ಮಾಣವಾದ 1.30 ಲಕ್ಷ ರೂ. ವೆಚ್ಚದ ಕಾಲು ಸಂಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ರಸ್ತೆಗಳು ಮುಖ್ಯವಾಗಿ ಸಣ್ಣ ಮಟ್ಟದ ತೊರೆಗಳಿಗೆ ಸೇತುವೆಗಳನ್ನು ನಿರ್ಮಿಸಲು ನರೇಗಾ ಯೋಜನೆ ಫಲಕಾರಿಯಾಗಿದೆ ಎಂದು ಹೇಳಿದರು.
ಕಾಲು ಸಂಕವನ್ನು ಪಡುಪಣಂಬೂರು ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್ ಉದ್ಘಾಟಿಸಿದರು.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶೈಲಜಾ ಭಟ್ ಮಾತನಾಡಿ, ಕೇಂದ್ರ ಸರಕಾರದ ನರೇಗಾ ಯೋಜನೆ ಜಿಲ್ಲೆಯಲ್ಲಿ ಯಶಸ್ಸು ಕಾಣಲು ಗ್ರಾಮೀಣ ಭಾಗದ ಜನರ ಸಹಭಾಗಿತ್ವವೇ ಪರೋಕ್ಷ ಕಾರಣ. ಯೋಜನೆಯನ್ನು ವೈಯಕ್ತಿಕ ಹಾಗೂ ಸಾಮೂಹಿಕವಾಗಿ ರೂಪಿಸಿಕೊಂಡು ಇನ್ನಷ್ಟು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮಂಗಳೂರು ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಜಿ.ಪಂ. ಮಾಜಿ ಸದಸ್ಯ ಈಶ್ವರ ಕಟೀಲು, ಪಡುಪಣಂಬೂರು ಪಂ.ನ ಮಾಜಿ ಉಪಾಧ್ಯಕ್ಷೆ ಶ್ಯಾಮಲಾ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಪಡುಪಣಂಬೂರು ಗ್ರಾ.ಪಂ. ಸದಸ್ಯ ರಾದ ಸಂತೋಷ್ ಕುಮಾರ್ ಸ್ವಾಗತಿಸಿ, ಹೇಮಂತ್ ಅಮೀನ್ ವಂದಿಸಿದರು.