Advertisement

ಗೃಹರಕ್ಷಕರ ಸಮಸ್ಯೆಗೆ ಸ್ಪಂದಿಸಿ

02:34 PM Dec 30, 2019 | Suhan S |

ಕುಷ್ಟಗಿ: ಗೃಹರಕ್ಷಕ ದಳ ಸರ್ಕಾರದ ಅಧಿಧೀನ ಸಂಸ್ಥೆಯಾಗಿದ್ದರೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯಾಗುತ್ತಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು. ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಅಖೀಲ ಭಾರತ ಗೃಹರಕ್ಷಕ ದಳದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.

Advertisement

ಬಳಿಕ ಗೃಹರಕ್ಷಕ ದಳದ ಸಂಸ್ಥಾಪಕ ಮೊರಾರ್ಜಿ ದೇಸಾಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು. ಗೃಹರಕ್ಷಕರ ಉದ್ಯೋಗ ಭದ್ರತೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅನೇಕ ಬಾರಿ ಪತ್ರ ಬರೆದಿದ್ದರೂ, ಯಾವ ಸರ್ಕಾರಗಳು ಮುತುವರ್ಜಿವಹಿಸಿ ಸ್ಪದಿಸಿಲ್ಲ ಈ ಹಿಂದೆ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೊಲೀಸ್‌ ನೇಮಕಾತಿಯಲ್ಲಿ ಗೃಹರಕ್ಷಕರನ್ನು ವಯೋಮಿತಿ ಅರ್ಹತೆ, ದೇಹದಾಡ್ಯìತೆ ಆಧಾರದಲ್ಲಿ ಶೇ. 5ರಷ್ಟು ಮೀಸಲಾತಿ ಪರಿಗಣಿಸಲು ಸಲಹೆ ನೀಡಿದೆ. ಇದ್ಯಾವುದು ಪರಿಗಣಿಸಲಿಲ್ಲ ಎಂದರು. ಗೃಹರಕ್ಷಕ ದಳ ಸೇವಾ ಮನೋಭಾವನೆ ಸಂಸ್ಥೆಯಾಗಿದ್ದು ದೇಶದ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು, ಶಿಸ್ತಿನ ಸಿಪಾಯಿ ಆಗಿದ್ದನ್ನು ಸ್ಮರಿಸಿದರು.

ಸಿಪಿಐ ಜಿ. ಚಂದ್ರಶೇಖರ ಮಾತನಾಡಿ, ಗೃಹರಕ್ಷಕ ಘಟಕ ಪೊಲೀಸ್‌ ಇಲಾಖೆಗೆ ಕಿರಿಯ ಸಹೋದರ ಇದ್ದಂತೆ. ಪೊಲೀಸ್‌ ತನಿಖೆ ಹೊರತು ಪಡಿಸಿ, ಗೃಹರಕ್ಷಕರು ಪೊಲೀಸ್‌ ಸಮಾನವಾದ ಕೆಲಸ ನಿರ್ವಹಿಸುತ್ತಿದ್ದಾರೆ. ಕುಷ್ಟಗಿ, ಹನುಮಸಾಗರ ಹಾಗೂ ತಾವರಗೇರಾ ಠಾಣೆಗೆ ತಲಾ ಐವರಿಗೆ ಖಾಯಂ ಸೇವೆಗೆ ಬಳಸಿಕೊಳ್ಳಲು ಎಸ್‌ಪಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಬಕಾರಿ, ಜೆಸ್ಕಾಂ, ಪೊಲೀಸ್‌, ಗಣಿ ಭೂ ವಿಜ್ಞಾನ, ಅಗ್ನಿಶಾಮಕ ಆಸ್ಪತ್ರೆಗಳಲ್ಲಿ ಬಂದೋಬಸ್ತ್ ಸೇವೆಗೆ ಅವಕಾಶಗಳಿದ್ದು, ಮೂರು ತಿಂಗಳಲ್ಲಿ ಎರಡು ತಿಂಗಳವಾದರೂ ಕೆಲಸ ಸಿಗಬೇಕು ಎಂದರು.

ಹಿರಿಯ ಪ್ಲಟೂನ್‌ ಕಮಾಡೆಂಟ್‌ ರವೀಂದ್ರ ಬಾಕಳೆ ಮಾತನಾಡಿ, ಸದ್ಯ ಸೇವೆಯಲ್ಲಿರುವ ಗೃಹರಕ್ಷಕರಿಗೆ ಸಲ್ಲಿಸಿದ ಸೇವೆಗೆ ದಿನಕ್ಕೆ 380 ರೂ., ಕವಾಯತು ವಾರದ ಭತ್ಯೆ 22 ರೂ. ಇದೆ. ಬಹುತೇಕ ಗೃಹರಕ್ಷಕರು ಬಡವರ್ಗದವರಾಗಿದ್ದು, ಉದ್ಯೋಗ ಭದ್ರತೆ ಇಲ್ಲ ಹೀಗಾಗಿ ಆಂಧ್ರ, ತೆಲಂಗಾಣ ಮಾದರಿಯಲ್ಲಿ ಮಾಸಿಕ 28 ಸಾವಿರ ರೂ. ನೀಡುವಂತಾಗಲು ಶಾಸಕ ಬಯ್ನಾಪೂರ ಶ್ರಮಿಸಬೇಕು ಎಂದರು.

ಕುಷ್ಟಗಿ ಘಟಕಾಧಿಕಾರಿ ನಾಗರಾಜ ಬಡಿಗೇರ, ಹನುಮಸಾಗರ ಘಟಕಾಧಿಕಾರಿ ಅಕ್ಬರ್‌ ಚಳಗೇರಿ, ತಾವರಗೇರಾ ಘಟಕಾಧಿಕಾರಿ ರವೀಂದ್ರ ಬಳಿಗಾರ ಮತ್ತಿತರಿದ್ದರು. ಶಿವಪ್ಪ ಚೂರಿ ವಂದಿಸಿದರು. ಇದಕ್ಕೂ ಮುನ್ನ ಕಳೆದ ಶುಕ್ರವಾರ ಹೃದಯಘಾತದಿಂದ ನಿಧನರಾದ ಗೃಹರಕ್ಷಕ ಪುಟ್ಟಪ್ಪ ಹೋರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next