Advertisement

ತೊಗರಿ ರೈತರ ಸಂಕಷಕ್ಕೆ ಸ್ಪಂದಿಸಿ

11:49 AM Dec 18, 2021 | Team Udayavani |

ಚಿತ್ತಾಪುರ: ಪ್ರತಿ ಕ್ವಿಂಟಾಲ್‌ ತೊಗರಿಗೆ ಸರ್ಕಾರ ಕನಿಷ್ಟ 8,650ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸಾಯಬಣ್ಣ ಗುಡುಬಾ ನೇತೃತ್ವದಲ್ಲಿ ರೈತರು ತಹಶೀಲ್ದಾರ್‌ ಕಚೇರಿ ಎದರು ಪ್ರತಿಭಟನೆ ನಡೆಸಿದರು.

Advertisement

ನಂತರ ಮಾತನಾಡಿದ ಅವರು, ರಾಜ್ಯದಲ್ಲಿಯೇ ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಯ ರೈತರಿಗೆ ನೆರವಾಗಲು ಸರ್ಕಾರ ಮುಂದಾಗಬೇಕು. ತೊಗರಿ ಅಭಿವೃದ್ಧಿ ಮಂಡಳಿ ಇದ್ದೂ ಇಲ್ಲದಂತಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಮತ್ತು ವಿಪಕ್ಷಗಳು ತೊಗರಿ ಬೆಳೆಗಾರರ ಕುರಿತು ಚರ್ಚೆ ನಡೆಸಿ, ಕನಿಷ್ಟ ಬೆಂಬಲ ಬೆಲೆ ಹೆಚ್ಚಳಕ್ಕೆ ನಿರ್ಧಾರ ಮಾಡಬೇಕು. ತೊಗರಿ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಬೇಕು. ಈಗಾಗಲೇ ತೊಗರಿ ರಾಶಿ ಶುರುವಾಗಿದೆ. ಶೀಘ್ರ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಬೆಳೆ ಹಾಳಾದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಕಲ್ಯಾಣ ಕರ್ನಾಟಕದ ಕಲಬುರಗಿಗೆ 30 ಕೋಟಿ ರೂ. ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ನೀರಾವರಿ ರೈತರಿಗೆ 8 ಗಂಟೆ ವಿದ್ಯುತ್‌ ಪೂರೈಕೆ ಮಾಡಬೇಕು. ಅತಿವೃಷ್ಟಿಯಿಂದ ಹಾಳಾದ ಬೆಳೆಗೆ ಪರಿಹಾರ ನೀಡಬೇಕು. ವಿಮೆ ಕಂಪನಿಗಳು ರೈತರ ಪರಿಹಾರದ ಹಣವನ್ನು ಸರಳವಾಗಿ ರೈತರಿಗೆ ಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಅಧ್ಯಕ್ಷೆ ಶೇಖಮ್ಮ ಕುರಿ, ರೈತ ಮುಖಂಡರಾದ ದಿಲೀಪ್‌ ನಾಗೂರೆ, ಭಾಗಣ್ಣ ನಾಲವಾರ, ಸಂಜಯಕುಮಾರ ರಾಠೊಡ, ಶಾಣಿಬಾಯಿ ರಾಠೊಡ, ಮಲ್ಲಮ್ಮ ಭೀಮನಗರ, ಶಿವಮ್ಮ ಹಿಂದಿನಕೇರಿ, ಜೈರಾಬೀ, ಅಶೋಕ ತಳವಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next