Advertisement

ಅತಿವೃಷ್ಟಿ ಸಂತ್ರಸ್ತರ ನೋವಿಗೆ ಸ್ಪಂದಿಸಿ

02:49 PM Jun 02, 2022 | Team Udayavani |

ದಾವಣಗೆರೆ: ಅತಿವೃಷ್ಟಿ ಸಂದರ್ಭಗಳಲ್ಲಿ ಜೀವಹಾನಿ, ಮಳೆ ಹಾನಿ ಹಾಗೂ ಜಾನುವಾರುಗಳ ಹಾನಿಗೆ ಸಂಬಂಧಿಸಿದಂತೆ ಘಟನೆ ವರದಿಯಾದ 24 ಗಂಟೆಯೊಳಗೆ ಪರಿಹಾರ ನೀಡಿ. ಬಳಿಕ ದಾಖಲೆಗಳನ್ನು ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬುಧವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅವಘಡಗಳು ಸಂಭವಿದ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ತಕ್ಷಣದ ಪರಿಹಾರದ ಅವಶ್ಯಕತೆ ಇರುತ್ತದೆ. ಹಾಗಾಗಿ ಪರಿಹಾರ ನೀಡುವ ಮೂಲಕ ಅವರ ನೋವಿಗೆ ಸ್ಪಂದಿಸಲು ಮುಖ್ಯಮಂತ್ರಿಯವರು ತಿಳಿಸಿದ್ದು ಅದರಂತೆ ಎಲ್ಲ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.

ಈ ಬಾರಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗುತ್ತಿದ್ದು ಮಳೆಯಿಂದ ಆಗಬಹುದಾದ ಅವಘಡ ಹಾನಿಗಳ ಬಗೆಗೆ ಜಾಗರೂಕರಾಗಿರಬೇಕು. ಹಿಂದಿನ ಮೂರು ವರ್ಷಗಳ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಿದ ಅನುಭವ ನಮ್ಮಲ್ಲಿದೆ ಹಾಗಾಗಿ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನೆದುರಿಸಲು ಸಿದ್ಧರಾಗಿರಬೇಕು. ಮಳೆ ಹಾನಿ ಪ್ರದೇಶಗಳಲ್ಲಿ ಸ್ಥಾಪಿಸುವ ಕಾಳಜಿ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆಯ ವ್ಯವಸ್ಥೆ ಮಾಡಬೇಕು. ಹಿಂದಿನ ಐದು ವರ್ಷಗಳಲ್ಲಿ ಗ್ರಾಮ ಹಾಗೂ ನಗರಗಳಲ್ಲಿ ನೀರು ತುಂಬಿ ಸಮಸ್ಯೆಯಾಗುತ್ತಿದ್ದ ಪ್ರದೇಶಗಳನ್ನು ಗುರುತಿಸಿ ಸರಿಪಡಿಸಬೇಕು. ನದಿ ಪಾತ್ರದಲ್ಲಿ ಪ್ರತಿ ಮೂರು ಗಂಟೆಗಳಿಗೊಮ್ಮೆ ನೀರಿನ ಮಟ್ಟ ಒಳಹರಿವು ಹಾಗೂ ಹೊರಹರಿವು ಮಾಹಿತಿ ಕಲೆ ಹಾಕಬೇಕು. ಹರಿಹರ ಹಾಗೂ ಹೊನ್ನಾಳಿ ಪಟ್ಟಣದ ಕೆಲ ಪ್ರದೇಶಗಳು ಮುಳುಗಡೆಗೆ ಒಳಗಾಗುವ ಕಡೆಗಳಲ್ಲಿ ಮುಂಜಾಗ್ರತೆಯಿಂದಎಲ್ಲ ಸಿದ್ಧತೆಗಳನ್ನು ‌ಮುಂಚಿತವಾಗಿಯೇ ಮಾಡಿಟ್ಟುಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ನಾಲ್ಕೈದು ಅತಿ ದೊಡ್ಡ ದೊಡ್ಡ ಹಳ್ಳಗಳಿದ್ದು, ಯಾವ ಯಾವ ಹಳ್ಳಗಳು ತುಂಬಿ ಹರಿದರೆ ಎಲ್ಲಿ ಎಲ್ಲಿ ಹಾನಿಯಾಗುತ್ತದೆ ಎಂಬ ನಿಖರವಾದ ಮಾಹಿತಿ ನೀಡಬೇಕು ಹಾಗೂ ಅದರಿಂದ ಸಂಭವಿಸಬಹುದಾದ ತೊಂದರೆಗಳನ್ನು ಗ್ರಹಿಸಿ ಈ ಮುಂಚೆ ಕಾಳಜಿ ಕೇಂದ್ರಗಳನ್ನು ಎಲ್ಲೆಲ್ಲಿ ತೆರೆಯಲಾಗಿತ್ತು ಹಾಗೂ ಈಗ ಎಲ್ಲೆಲ್ಲಿ ಕಾಳಜಿ ಕೇಂದ್ರ ತೆರೆಯಬೇಕು ಎಂಬುದರ ಕಾರ್ಯಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ಕಂದಾಯ ಸಚಿವರ ಆದೇಶದ ಮೇರೆಗೆ ಜಿಲ್ಲೆಯ ಹರಿಹರ ಹಾಗೂ ಹೊನ್ನಾಳಿ ತಾಲೂಕಿನ ಅಗ್ನಿಶಾಮಕ ಇಲಾಖೆಗೆ ಎರಡು ಬೋಟ್‌ ಹಾಗೂ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಎಲ್ಲ ಉಪಕರಣಗಳನ್ನು ತರಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ಮಾಹಿತಿ ನೀಡಿ, 1.36 ಲಕ್ಷ ಹೆಕ್ಟೇರ್‌ಗೆ ಬೇಕಾಗುವ ಮೆಕ್ಕೆಜೋಳ ಬಿತ್ತನೆ ಬೀಜಗಳು ಲಭ್ಯ ಇವೆ. ರೈತರು ಮೆಕ್ಕೆಜೋಳದ ಜೊತೆಗೆ ತೊಗರಿ ಬೆಳೆಯನ್ನು ಅಂತರ ಬೇಸಾಯದಲ್ಲಿ ಬೆಳೆಯಲು ರೈತರಿಗೆ ಮಾಹಿತಿ ನೀಡಲಾಗಿದೆ. ಸೋಯಾಬೀನ್‌ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗಿದೆ ಎಂದರು.

Advertisement

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎ. ಚನ್ನಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಬಿ. ಬಸರಗಿ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್‌ ಮುದ್ದಜ್ಜಿ, ಡಿಯುಡಿಸಿ ಅಧಿಕಾರಿ ನಜ್ಮಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌, ಎಲ್ಲ ತಾಲೂಕುಗಳ ತಹಶೀಲ್ದಾರರು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರು ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಬೇಕು. ರಸಗೊಬ್ಬರಗಳಿಗೆ ಸರ್ಕಾರ ನಿಯೋಜಿಸಿದ ದರಕ್ಕಿಂತ ಜಾಸ್ತಿ ದರಕ್ಕೆ ಮಾರಿದರೆ ರೈತರಿಂದ ಮಾಹಿತಿ ಪಡೆದು ಮಾರಾಟಗಾರರ ಪರವಾನಗಿ ರದ್ದುಪಡಿಸಲಾಗುವುದು. -ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next