ಚಳ್ಳಕೆರೆ: ಸರ್ಕಾರಿ ಇಲಾಖೆಗಳಲ್ಲಿ ಕಂದಾಯ ಇಲಾಖೆ ತನ್ನದೇಯಾದ ವಿಶೇಷ ಜವಾಬ್ದಾರಿ ಹೊಂದಿದೆ. ಸಿಬ್ಬಂದಿ ಸಾರ್ವಜನಿಕರು, ರೈತರ ಕಾರ್ಯ, ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು, ಮಂಗಳವಾರ ಇಲ್ಲಿನ ತಾಲೂಕು ಕಚೇರಿಗೆ ದಿಢೀರನೇ ಭೇಟಿ ನೀಡಿ, ಪರಿಶೀಲಿಸಿದರು. ಸರ್ಕಾರದ ಎಲ್ಲಾ ಸೂಚನೆಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕು,ಈಗ ಎಲ್ಲೆಡೆ ಕಂಪ್ಯೂಟರೀಕರಣವಾಗಿದ್ದು,ಜನರು ಬಯಸುವ ದಾಖಲಾತಿಗಳನ್ನು ತ್ವರಿತವಾಗಿ ವಿತರಿಸಬೇಕು. ತಾಲೂಕು ಕಚೇರಿಗೆ ಹೋದರೆ ಯಾವುದೇ ತೊಂದರೆಯಿಲ್ಲದೇ ನಮ್ಮ ಕೆಲಸವಾಗುತ್ತದೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ಮೂಡುವಂತೆ ಕೆಲಸ ಮಾಡಬೇಕು. ಕಚೇರಿಯ ಹಿರಿಯ ಅಧಿಕಾರಿಗಳು ಸಿಬ್ಬಂದಿ ವರ್ಗದ ಕಾರ್ಯವನ್ನು ಖುದ್ದಾಗಿ ವೀಕ್ಷಿಸಿ ಮಾರ್ಗದರ್ಶನ ನೀಡಬೇಕು ಎಂದರು. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಇಲಾಖೆಯ ಗೌರವ ಹೆಚ್ಚುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಸುಮಾರು 9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದ ಒಳಾಂಗಣವನ್ನು ವೀಕ್ಷಿಸಿದ ಅವರು, ಕಟ್ಟಡದ ಒಳಗೆ ವಿವಿಧ ಕೆಲಸಗಳಿಗಾಗಿ ಆಗಮಿಸುವ ಸಾರ್ವಜನಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಆಗಬೇಕು, ಕಟ್ಟಡದ ಹೊರಭಾಗದ ಬಯಲು ಪ್ರದೇಶದಲ್ಲಿ ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು, ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ನೀಡುವಂತೆ ಲೋಕೋಪಯೋಗಿ ಇಲಾಖೆಯ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಲಕ್ಷ್ಮಿನಾರಾಯಣ, ಇಂಜಿನಿಯರ್ ರಾಜಪ್ಪಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಪೌರಾಯುಕ್ತ ಪಿ.ಪಾಲಯ್ಯ, ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ಧಿಕಾರಿಗಳನ್ನು ಸನ್ಮಾನಿಸಿದರು. ನಗರಸಭೆ ಕಾರ್ಯಾಲಯವೂ ಸಹ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು, ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸುವಂತೆ ಡಿಸಿ ಸೂಚಿಸಿದರು.
ಪೌರಾಯುಕ್ತ ಪಾಲಯ್ಯ ಮಾಹಿತಿ ನೀಡಿ, ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ಪುರಸಭೆ ಕ್ರಮ ಕೈಗೊಂಡಿದ್ದು, ನಗರಸಭೆಯ ಅಧಿಕಾರಿಗಳಿಗೆ ವಿವಿಧ ವಾರ್ಡ್ ಜವಾಬ್ದಾರಿ ನಿಗದಿಪಡಿಸಲಾಗಿದೆ ಎಂದರು. ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್, ಶಿರಸ್ತೇದಾರ್ ಮಂಜುನಾಥಸ್ವಾಮಿ, ಕಂದಾಯ ಅಧಿಕಾರಿ ಲಿಂಗೇಗೌಡ, ಗ್ರಾಮಲೆಕ್ಕಿಗ ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.