Advertisement
ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ಬಗ್ಗೆಯೇ ಹೆಚ್ಚು ಚರ್ಚೆ ನಡೆಸಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತಾಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರು ಹಾಗೂ ವಿದ್ಯುತ್ ಸಮರ್ಪಪ ಪೂರೈಕೆಗೆ ಆಗ್ರಹಿಸಿದರು.
Related Articles
Advertisement
ಅರ್ಜಿ ವಿಲೇವಾರಿ ಆಗಿಲ್ಲ: ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು, ಕೃಷಿ ಹೊಂಡಕ್ಕೆ ತಂತಿಬೇಲಿ ನಿರ್ಮಿಸುವ ಕಾರ್ಯಕ್ಕೆ ಒತ್ತು ಕೊಡಬೇಕೆಂದು ತಾಪಂ ಅಧ್ಯಕ್ಷ ರಾಮಸ್ವಾಮಿ ಸೂಚಿಸಿದರು. ವಾಲ್ಮೀಕಿ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕಳೆದ ವರ್ಷ ಸಾಲ, ಸೌಲಭ್ಯಗಳಿಗೆ ಆಹ್ವಾನಿಸಿದ ಅರ್ಜಿಗಳನ್ನು ಇದುವರೆಗೂ ವಿಲೇವಾರಿ ಮಾಡಿಲ್ಲ.
ಅಧಿಕಾರಿಗಳ ವಿರುದ್ಧ ಕಿಡಿ: ಸದ್ಯ ಕ್ಷೇತ್ರಕ್ಕೆ ಶಾಸಕರಿಲ್ಲ. ಚುನಾವಣೆ ಆಗುವವರೆಗೂ ಶಾಸಕರು ಲಭ್ಯವಿರುವುದಿಲ್ಲ. ಸೌಲಭ್ಯಕ್ಕೆ ಅರ್ಜಿ ಹಾಕಿದ ಫಲಾನುಭವಿಗಳು ಏನು ಮಾಡಬೇಕೆಂದು ಸೌಲಭ್ಯ ವಿತರಣೆಗೆ ವಿಳಂಬ ತೋರಿದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಸಭೆಗೆ ಗೈರಾಗಿದ್ದ ಲೋಕೋಪಯೋಗಿ ಇಲಾಖೆ ಎಇಇಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಉಳಿದಂತೆ ಸಭೆಯಲ್ಲಿ ಶಿಕ್ಷಣ, ಆರೋಗ್ಯ, ರೇಷ್ಮೆ, ನರೇಗಾ, ತೋಟಗಾರಿಕೆ, ಅಕ್ಷರ ದಾಸೋಹ, ಸಮಾಜ ಕಲ್ಯಾಣ, ಬಿಸಿಎಂ ಹಾಗೂ ವಿವಿಧ ಇಲಾಖೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಇಂದ್ರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಿರುಮಳಪ್ಪ, ನೂತನ ಇಒ ಹರ್ಷವರ್ಧನ್, ತಾಪಂ ಸದಸ್ಯರಾದ ಮುತ್ತರಾಯಪ್ಪ, ಸತೀಶ್, ರತ್ನಮ್ಮ ಉಪಸ್ಥಿತರಿದ್ದರು.
ಎಪಿಎಂಸಿ ಅವ್ಯವಸ್ಥೆ ಬಗ್ಗೆ ಸಭೆಯಲ್ಲಿ ಚರ್ಚೆ: ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆ ಅವ್ಯವಸ್ಥೆ, ಅನೈರ್ಮಲ್ಯದ ಬಗ್ಗೆ ತಾಪಂ ಸದಸ್ಯರು ಚರ್ಚೆ ನಡೆಸಿ ಎಪಿಎಂಸಿ ಆವರಣದಲ್ಲಿ ಸ್ವಚ್ಛತೆ ಇರದಿದ್ದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆಗಾಗಿಯೇ ಲಕ್ಷಾಂತರ ರೂ, ಖರ್ಚು ಮಾಡಲಾಗುತ್ತಿದೆ. ಆದರೆ ಎಪಿಎಂಸಿ ಆವರಣದಲ್ಲಿ ಕಾಲಿಡದಷ್ಟು ಗಲೀಜು ಇದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಗುತ್ತಿಗೆದಾರರಿಗೆ ಬುದ್ಧಿ ಹೇಳಿ. ಅವರ ಕೈಯಲ್ಲಿ ಆಗಲ್ಲ ಎಂದರೆ ಗುತ್ತಿಗೆ ರದ್ದುಪಡಿಸಿ ಬೇರೆಯವರಿಗೆ ಕೊಡಿ. ಎಪಿಎಂಸಿಗೆ ಬರಲು ಜನ ಹಿಂದೇಟು ಹಾಕುತ್ತಾರೆ. ಎಪಿಎಂಸಿ ಆವರಣದಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ವಾಹನಗಳ ಟ್ರಾಫಿಕ್ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದರು.