ಕುರುಗೋಡು: ಬಳ್ಳಾರಿ ಜಿಲ್ಲೆಗೆ ನೂತನವಾಗಿ ಆಗಮಿಸಿದ ಎಸ್‌ಪಿ ಅರುಣ್ ರಂಗರಾಜನ್ ಶನಿವಾರ ಕುರುಗೋಡು ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಾರ್ವಜನಿಕರ ಸಂಪರ್ಕ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಪಿ ಅರುಣ್ ರಂಗರಾಜನ್,ಸಾರ್ವಜನಿಕರ ಸಮಸ್ಯೆಗಳಿಗೆ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳು ಸ್ಪಂದಿಸಬೇಕು. ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಠಾಣೆಗೆ ಬಂದು ದೂರು ದಾಖಲಿಸಿದರೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾನೂನು ವಿರೋಧ ಚಟುವಟಿಕೆಗಳನ್ನು ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಾರ್ವಜನಿಕರು ಶಾಂತಿಯುತವಾಗಿ ಭಯರಹಿತ ಮತದಾನ ಮಾಡಿ, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಕೆರೆಕೆರೆ ಗ್ರಾಮದ ಮುಖಂಡ ಕೆ.ಈಶ್ವರಪ್ಪ ಮಾತನಾಡಿ, ಆಶ್ರಯ ಯೋಜನೆಯಡಿ ಮಂಜೂರದ ಮನೆಗಳಿಗೆ ಮರುಳಿನ ತೊಂದರೆಯಾಗಿದೆ. ದಯಾಮಾಡಿ ಬಡವರಿಗೆ ಅನುಕೂಲವಾಗುವಂತೆ ಸಹಾಯ ಮಾಡಬೇಕೆಂದರು.
ಗೆಣಿಕೆಹಾಳ್ ಗ್ರಾಮದ ಮುಖಂಡ ವಿಎಸ್‌ಎಸ್‌ಎನ್ ಅಧ್ಯಕ್ಷ ಬಸವನಗೌಡ ಮಾತನಾಡಿ, ತುಂಗಾಭದ್ರಾ ಕಾಲುವೆ ಭಾಗದ ರೈತರು ಬೆಳೆದ ಬೆಸಿಗೆ ಬೆಳೆಯು ನೀರಿಲ್ಲದೆ ಒಣುಗುತ್ತಿದ್ದು, ತಾವುಗಳು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ 15 ದಿನದ ವರೆಗೆ ಕಾಲುವೆಗೆ ನೀರು ಹರಿಸುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಟಿ.ಸುರೇಶ್, ಸಿಪಿಐ ಮಂಜುನಾಥ್, ಪಿಎಸ್‌ಐ ಮಹೇಶ್‌ಗೌಡ, ಎಎಸ್‌ಐ ರುದ್ರಮುನಿಸ್ವಾಮಿ, ಗ್ರಾಮದ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.