Advertisement

ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿ

03:06 PM Nov 10, 2017 | Team Udayavani |

ದಾವಣಗೆರೆ: ಬೆಳೆ ನಷ್ಟ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ, ಭಾರತೀಯ ಕಿಸಾನ್‌ ಸಂಘ ಗುರುವಾರ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. 

Advertisement

ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಸಂಘದ ಕಾರ್ಯಕರ್ತರು ಪಿಬಿ ರಸ್ತೆ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿ, ಮನವಿ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ಪ್ರವೀಣ್‌ ರಾಂಪುರ, ಮಳೆ ಕೊರತೆಯಿಂದಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ, ವಿದ್ಯುತ್‌ ಸಮಸ್ಯೆಯಿಂದ ನೀರಾವರಿ ಪ್ರದೇಶದಲ್ಲಿ ಮೆಕ್ಕೆಜೋಳ, ಅಡಕೆ, ರಾಗಿ, ಭತ್ತ, ಕಬ್ಬು ಮುಂತಾದ ಬೆಳೆ ನಿರೀಕ್ಷಿತ ಇಳುವರಿ ಸಿಕ್ಕಿಲ್ಲ. ಕೆಲ ಕಡೆ ಸಂಪೂರ್ಣ ಕೈಕೊಟ್ಟಿವೆ. ಆದರೂ ಬೆಳೆ ನಷ್ಟ ಪರಿಹಾರದ ವಿಷಯದಲ್ಲಿ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಬೆಳೆ ವಿಮೆ ವಿಷಯದಲ್ಲೂ ರೈತರಿಗೆ ಅನ್ಯಾಯ ಆಗಿದೆ. ಎಲ್ಲಾ ರೈತರು ವೈಯುಕ್ತಿಕವಾಗಿ ವಿಮೆ ಕಟ್ಟಿದ್ದಾರೆ. ಇದರ
ಆಧಾರದಲ್ಲಿ ವಿಮಾ ಕಂಪನಿ ಪರಿಹಾರ ನೀಡಬೇಕು. ಆದರೆ, ವಿಮಾ ಕಂಪನಿ ತನ್ನದೇ ನಿಯಮ ಪಾಲಿಸಿ, ವಿಮಾ ಹಣ
ನೀಡುವುದಾಗಿ ಹೇಳುತ್ತಿದೆ. ಇದು ಅನ್ಯಾಯ. ಇದನ್ನ ಸರ್ಕಾರ ಮೌನವಾಗಿ ನೋಡಿಕೊಂಡು ಹೋಗುತ್ತಿರುವುದು ಬೇಸರದ ಸಂಗತಿ ಎಂದು ಅವರು ತಿಳಿಸಿದರು. ಮೆಕ್ಕೆಜೋಳ, ರಾಗಿ, ತರಕಾರಿ ಬೆಳೆಗೆ ಇದೀಗ ಸೈನಿಕ ಹುಳು ಬಾಧೆಯಿಂದ ಬೆಳೆ ಸಂಪೂರ್ಣ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಕಡೆ ನೋಡಲು ಸಿದ್ಧವಿಲ್ಲ. ಇತ್ತ ರೈತರು ನಿತ್ಯ ಜೀವನ ನಡೆಸಲು ಪರದಾಡುತ್ತಿದ್ದಾರೆ. ಇದನ್ನು ಅರಿತು ಸರ್ಕಾರ ಪರಿಹಾರ ನೀಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಬಾಕಿ ಇರುವ ಇತರೆ ನೀರಾವರಿ ಯೋಜನೆ ಕಾಮಗಾರಿಗಳು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಶೇಖರಪ್ಪ, ಪ್ರಸನ್ನ, ಮಂಜುನಾಥ, ಧನಂಜಯ, ವೆಂಕಟೇಶ, ನೀಲಕಂಠಪ್ಪ, ಶ್ರೀನಿವಾಸ್‌, ಶಾಂತಪ್ಪಗೌಡ, ಮಹಾರುದ್ರಪ್ಪ,
ಕಲ್ಲಪ್ಪ ಕಕ್ಕರಗೊಳ್ಳ ಮೆರವಣಿಗೆ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next