ಮಂಡ್ಯ: ಬಿಜೆಪಿಯವರು ಜಿಲ್ಲೆಯಲ್ಲಿ ಹೇಗಾದರೂ ಮಾಡಿ ಕಮಲ ಅರಳಿಸುವ ಹಿನ್ನೆಲೆಯಲ್ಲಿ ಉರಿಗೌಡ, ದೊಡ್ಡನಂಜೇಗೌಡ ಕಥೆ ಕಟ್ಟಿಕೊಂಡು ಮಾತನಾಡುತ್ತಿದ್ದಾರೆ. ಆದರೆ ಇಲ್ಲಿನ ಹೊಲ ಉಳುವ ಬೋರೇಗೌಡನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ವಿ.ಸಿ.ಫಾರಂನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಏನೂ ಕೆಲಸ ಇಲ್ಲ. ಈ ವಿಚಾರ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಆಲಿಕಲ್ಲು ಮಳೆ ಬಿದ್ದು ಜನ ಸಾಯುತ್ತಿದ್ದಾರೆ. ಇದರ ಬಗ್ಗೆ ಗಮನಹರಿಸಬೇಕು. ಸಮಸ್ಯೆಗಳಿಗೆ ಸ್ಪಂದಿಸಬೇಕೋ ಅಥವಾ ಕಾಲ್ಪನಿಕ ವಿಚಾರಗಳಿಗೆ ಪ್ರಾಶಸ್ತ್ಯ ಕೊಡಬೇಕಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಮುನಿರತ್ನ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ: ಸಿನಿಮಾ ಯಾವನು ಮಾಡ್ತಾನೋ ಅದು ಅವನಿಗೆ ಸೇರಿದ್ದು. ಸಿನಿಮಾ ಕಥೆ ಏನು ಒರ್ಜಿನಲ್ಲಾ..? ಕಾಲ್ಪನಿಕ ವಿಚಾರ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆಂದು ಸಚಿವ ಮುನಿರತ್ನ ವಿರುದ್ಧ ಏಕವಚನದಲ್ಲಿಯೇ ಎಚ್.ಡಿ.ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.
ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡ ಹೆಸರು ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ಪುಸ್ತಕದಲ್ಲಿ ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತಿದ್ದರು ಎಂದು ಉಲ್ಲೇಖವಾಗಿದೆ. ಅಲ್ಲೇನಾದ್ರು ಉರಿಗೌಡ, ದೊಡ್ಡನಂಜೇಗೌಡ ಕತ್ತಿ ಹಿಡಿದು ಕುತ್ತಿಗೆ ಕೂಯ್ದರು ಅಂತಾ ಇದಿಯಾ? ಇಲ್ಲ ಯುದ್ಧ ಮಾಡಿ ತಲೆ ತೆಗೆದರು ಅಂತ ದಾಖಲಾಗಿದೆಯೇ ಎಂದು ಪ್ರಶ್ನಿಸಿದರು.