Advertisement

“ಜನರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ’

11:29 PM Dec 18, 2019 | Team Udayavani |

ಸುಳ್ಯ: ಮಡಪ್ಪಾಡಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಡಿ. 22ರಂದು ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ರಾಜ್ಯದಲ್ಲೇ ಮಾದರಿ ಕಾರ್ಯಕ್ರಮ. ಇದು ಇಲಾಖೆಗಳಿಗೂ ಪ್ರಗತಿ ಅವಲೋಕಿಸುವ ಸಂದರ್ಭ. ಅಧಿಕಾರಿಗಳು ಪೂರ್ಣ ಸಿದ್ಧರಾಗಿ ಭಾಗ ವಹಿಸಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ ಡಾ| ಯತೀಶ್‌ ಉಳ್ಳಾಲ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಸಲಹೆ ಸೂಚನೆ ನೀಡಿದರು.

ಈ ಗ್ರಾಮ ವಾಸ್ತವ್ಯ ಎರಡು ರೀತಿಯಲ್ಲಿ ಪರಿಣಾಮ ಸೃಷ್ಟಿಸಬಲ್ಲುದು. ರಾಜ್ಯದ ವಿವಿಧ ಭಾಗಗಳಿಂದ ಮಾಧ್ಯಮದವರು ಭಾಗವಹಿಸುವ ಮೂಲಕ ರಾಜ್ಯವ್ಯಾಪಿ ವಿಷಯ ಪಸರಿಸುವ ಕಾರಣ ಎಲ್ಲ ಇಲಾಖೆಗಳ ಮೇಲಧಿಕಾರಿಗಳು ಅದನ್ನು ಗಂಭೀರವಾಗಿ ಗಮನಿಸುವಂತಾಗುತ್ತದೆ. ಲಘುವಾಗಿ ತೆಗೆದುಕೊಂಡರೆ ನಿಮ್ಮ ಮೇಲೆ ಉಂಟಾಗುವ ಪರಿಣಾಮವನ್ನು ಊಹಿಸಿಕೊಂಡು ಫಲಪ್ರದ ವಾಗುವಂತೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಇದು ಖಾಸಗಿ ಕಾರ್ಯಕ್ರಮ ಎಂಬ ಮನೋಭಾವನೆ ಬೇಡ. ಇದು ನಮ್ಮೆಲ್ಲರ ಕಾರ್ಯಕ್ರಮ. ಹಾಗಾಗಿ ಹೆಮ್ಮೆಯಿಂದ, ಉತ್ಸಾಹದಿಂದ ಭಾಗವಹಿಸಬೇಕು ಎಂದು ತಿಳಿಸಿದರು.

ಸಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸಿ
ಜನರ ಎಲ್ಲ ಸಮಸ್ಯೆಗಳಿಗೆ ಅಧಿಕಾರಿಗಳು ಸಕಾರಾತ್ಮಕ ನೆಲೆಯಲ್ಲಿ ಸ್ಪಂದನೆ ನೀಡಬೇಕು. ಜನರು ಕಚೇರಿಗೆ ಬಂದು ಅರ್ಜಿಗಳನ್ನು ಸಲ್ಲಿಸುವುದಕ್ಕೂ, ಖುದ್ದು ಸ್ಥಳದಲ್ಲಿ ಅರ್ಜಿ ಸಲ್ಲಿಸುವ ಸಂದರ್ಭಕ್ಕೂ ಮನಃಸ್ಥಿತಿ ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಇಲಾಖೆ ಅಧಿಕಾರಿಗಳು ಗಮನಹರಿಸಿ ಜನರೊಂದಿಗೆ ವ್ಯವಹರಿಸಲು ಅದಕ್ಕೆ ತಕ್ಕುದಾದ ಸಿಬಂದಿ ನಿಯೋಜಿಸಬೇಕು. ಅಧಿಕಾರಿಗಳ ವರ್ತನೆಯಲ್ಲಿ ಏನಾದರೂ ಲೋಪಗಳಾದರೆ ತಕ್ಕ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಉತ್ತರ ನೀಡಲು ಅಸಾಧ್ಯ ಆಗುವ ಸಂದರ್ಭ ತಹಶೀಲ್ದಾರ್‌ ಅಥವಾ ನನ್ನ ಸಂಪರ್ಕವನ್ನು ಪಡೆದು ಕೊಳ್ಳಿ ಎಂದು ಸಹಾಯಕ ಆಯುಕ್ತ ಡಾ| ಯತೀಶ್‌ ಹೇಳಿದರು.

ಇಲಾಖೆಗಳಿಂದ ಮಾಹಿತಿ
ವಿವಿಧ ಇಲಾಖೆಗಳ ಮುಖ್ಯಸ್ಥರಿಂದ ಗ್ರಾಮ ವಾಸ್ತವ್ಯದ ಸಿದ್ಧತೆಯ ಕುರಿತು ಮಾಹಿತಿ ಬಯಸಿದ ಸಹಾಯಕ ಆಯುಕ್ತರು ಸೂಕ್ತ ಸಲಹೆ ಸೂಚನೆ ನೀಡಿದರು. ಕೊಳವೆಬಾವಿ, ಜಲ ಮರುಪೂರಣ ಘಟಕಕ್ಕೆ ಪೂರಕ ಮಾಹಿತಿ, ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ವಿವರ, ಪೊಲೀಸ್‌ ಇಲಾಖೆಯಿಂದ ಅಪರಾಧ ಮಾಸಾಚರಣೆ ದಿನಾಚರಣೆ ಹೀಗೆ ವಿವಿಧ ಇಲಾಖೆಗಳು ತಮ್ಮ ಇಲಾಖಾ ವ್ಯಾಪ್ತಿಯ ಯೋಜನೆಗಳ ಕುರಿತು ಕೇಂದ್ರ ತೆರೆದು ಮಾಹಿತಿ ನೀಡುವಂತೆ ಸಹಾಯಕ ಆಯುಕ್ತರು ಸೂಚಿಸಿದರು.

Advertisement

ಪೊಲೀಸ್‌ ಉಪನಿರೀಕ್ಷಕ ಹರೀಶ್‌ ಎಂ.ಎನ್‌. ಅವರು ವಾಹನ ಪಾರ್ಕಿಂಗ್‌ಗೆ ಸೂಕ್ತ ಸ್ಥಳ ಮೀಸಲಿಡಬೇಕು ಎಂದರು. ತಹಶೀಲ್ದಾರ್‌ ಎನ್‌.ಎ. ಕುಂಞಿ ಅಹ್ಮದ್‌ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು. ತಾ.ಪಂ. ಇಒ ಭವಾನಿಶಂಕರ್‌, ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಉಪ ಸ್ಥಿತರಿದ್ದರು. ಆಮಂತ್ರಣ ಪತ್ರವನ್ನು ಎಸಿ ಬಿಡುಗಡೆಗೊಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮಾತನಾಡಿ, ಪ್ಲಾಸ್ಟಿಕ್‌ ಮುಕ್ತ, ಪರಿಸರ ಸ್ನೇಹಿ ಗ್ರಾ.ಪಂ., ಅಂತರ್ಜಲ ಸಂರಕ್ಷಣೆ ಆಶಯದೊಂದಿಗೆ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. ಇದು ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಆಯೋಜನೆಗೊಳ್ಳುವ ಕಾರ್ಯಕ್ರಮವಾಗಿದ್ದು, ಗ್ರಾಮಸ್ಥರು, ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಗ್ರಾಮ ವಾಸ್ತವ್ಯದ ಸ್ವರೂಪದ ಕುರಿತು ಮಾಹಿತಿ ನೀಡಿದರು.

ಗ್ರಾಮದಲ್ಲಿ ಸುತ್ತು ಹಾಕಿ
ಗ್ರಾಮದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲು, ಜನರ ಪ್ರಶ್ನೆ, ಅರ್ಜಿಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಎಲ್ಲ ಇಲಾಖೆ ಅಧಿಕಾರಿಗಳು ಮಡ ಪ್ಪಾಡಿಯಲ್ಲಿ ಒಂದು ಸುತ್ತು ಸಂಚರಿಸುವಂತೆ ಸಲಹೆ ನೀಡಿದ ಸಹಾಯಕ ಆಯುಕ್ತರು, ಗ್ರಾಮ ವಾಸ್ತವ್ಯದ ಸಮಸ್ಯೆಗಳಿಗೆ ಸ್ಪಂದಿಸು ವುದಕ್ಕೆ ಸಾಧ್ಯತೆ ಇರುವುದಕ್ಕೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿ. ಇಲ್ಲದಿದ್ದರೆ ಗ್ರಾಮಸ್ಥರಿಗೆ ಸಮಾಧಾನಕರ ಉತ್ತರ ನೀಡಬೇಕು. ನಕಾರಾತ್ಮಕ ಉತ್ತರ ನೀಡಬೇಡಿ ಎಂದರು.

ಇಂದು ಎಸಿ, ತಹಶೀಲ್ದಾರ್‌ ಭೇಟಿ
ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಹಾಗೂ ತಾನು ಡಿ. 19ರಂದು ಮಡಪ್ಪಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಈ ವೇಳೆ ಇಲಾಖಾಧಿಕಾರಿಗಳು ನಮ್ಮೊಂದಿಗೆ ಭಾಗಿ ಯಾಗಬಹುದು ಎಂದು ಡಾ| ಯತೀಶ್‌ ಉಳ್ಳಾಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next