Advertisement

ವಕೀಲನಿಂದ ಮನುಷ್ಯನ ಗೌರವ ಉಳಿವು

09:27 PM Mar 08, 2020 | Lakshmi GovindaRaj |

ತುಮಕೂರು: ವೈದ್ಯ ಒಬ್ಬ ವ್ಯಕ್ತಿಯ ಪ್ರಾಣ ಉಳಿಸಿದರೆ, ವಕೀಲ ಒಬ್ಬ ಮನುಷ್ಯನ ಗೌರವ ಉಳಿಸುತ್ತಾನೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನಟರಾಜ್‌ ರಂಗಸ್ವಾಮಿ ಅಭಿಪ್ರಾಯಪಟ್ಟರು.

Advertisement

ನಗರದ ವಕೀಲರ ಭವನದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಕಾರ್ಯಾಗಾರ ಸಮಾರೋಪದಲ್ಲಿ ಮಾತನಾಡಿ, ವಕೀಲರು ಕೇವಲ ಜೀವನೋಪಾಯಕ್ಕೆ ವಕೀಲ ವೃತ್ತಿ ಆರಿಸಿಕೊಳ್ಳದೆ ಮತ್ತೂಬ್ಬರ ಗೌರವ ಕಾಪಾಡುವ ಉದ್ಧೇಶ ಇಟ್ಟುಕೊಂಡು ವಕೀಲ ವೃತ್ತಿ ಆರಂಭಿಸಿ ಎಂದು ಸಲಹೆ ನೀಡಿದರು.

ಪ್ರತಿನಿತ್ಯ ಪುಸ್ತಕ ಓದಿ ಹೊಸ ಹೊಸ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವ ಹುಮ್ಮಸ್ಸು ಬೆಳೆಸಿಕೊಳ್ಳಬೇಕು. ಬರೀ ಪುಸ್ತಕ ಓದಿನಿಂದಲೇ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ವಕೀಲರು ಕಾರ್ಯಾಗಾರಗಳಲ್ಲಿ ಭಾಗವಹಿಸಿ ಜ್ಞಾನಾರ್ಜನೆ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಾಗಾರಗಳಲ್ಲಿ ಭಾಗವಹಿಸಿ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವ್‌ಕುಮಾರ್‌ ಮಾತನಾಡಿ, ನ್ಯಾಯಾಲಯವೆಂಬ ರಣಾಂಗಣದಲ್ಲಿ ನ್ಯಾಯವೆಂಬ ಶಸ್ತ್ರವನ್ನಿಡಿದು ವಕೀಲರು ನ್ಯಾಯ ಒದಗಿಸಬೇಕು. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಮಾಡಲು 30 ಎಕರೆ ಜಮೀನು ಅವಶ್ಯಕತೆ ಇದೆ. ವಸತಿಗೃಹಗಳು ಸೇರಿ ಎಲ್ಲಾ ರೀತಿಯ ಮೂಲಸೌಲಭ್ಯ ಮಾಡಬಹುದು.

ಈ ನಿಟ್ಟಿನಲ್ಲಿ ಎಲ್ಲಾ ವಕೀಲರ ಸಹಕಾರ ಅಗತ್ಯ. ತರಬೇತಿ ಎಂಬುದು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಮುಖ್ಯ. ವಕೀಲರಿಗೆ ಸ್ವ ಅಧ್ಯಯನ ಮತ್ತು ತರಬೇತಿ ಅತ್ಯವಶ್ಯಕ. ಸಮಾಜಕ್ಕೆ ಮತ್ತು ದೇಶಕ್ಕೆ ವಕೀಲರ ಕೊಡುಗೆ ಅಪಾರ. ಕಾನೂನು ನಿಂತ ನೀರಲ್ಲ. ಬದಲಾವಣೆಯಾಗುತ್ತಿರುತ್ತದೆ. ಆದ್ದರಿಂದ ವಕೀಲರು ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

Advertisement

ರಾಜ್ಯ ವಕೀಲರ ಪರಿಷತ್‌ ನೋಂದಣಿ ಸಮಿತಿ ಸದಸ್ಯ ಎಂ.ಎನ್‌.ಮಧುಸೂದನ್‌ ಮಾತನಾಡಿ, ನ್ಯಾಯಾಲಯಗಳ ಮೂಲಸೌಕರ್ಯ ಹೆಚ್ಚಳ ಮಾಡಲು ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ವಕೀಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಹರೀಶ್‌ಬಾಬು ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ವಕೀಲರ ಪರಿಷತ್‌ ಸದಸ್ಯ ಎಸ್‌.ಬಸವರಾಜು ಮಾತನಾಡಿದರು. ವಕೀಲರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಆರ್‌.ದೇವರಾಜು, ಜಂಟಿ ಕಾರ್ಯದರ್ಶಿ ಎನ್‌.ಆರ್‌.ಲೋಕೇಶ್‌, ಖಜಾಂಚಿ ಆರ್‌.ಪಾತಣ್ಣ, ಕಾರ್ಯಖಾರಿ ಸಮಿತಿ ಸದಸ್ಯ ಸಿ.ಸುರೇಶ್‌ಕುಮಾರ್‌, ಸಿದ್ದರಾಜು, ಟಿ.ಕವಿತಾ, ಡಿ.ಎ.ಜಗದೀಶ್‌ ಇದ್ದರು. ಹೈಕೋರ್ಟ್‌ ನ್ಯಾಯಾಧೀಶರನ್ನು ಜಿಲ್ಲಾ ನ್ಯಾಯಾಧೀಶರು ಹಾಗೂ ವಕೀಲರ ಸಂಘದಿಂದ ಗೌರವಿಸಲಾಯಿತು.

ವಕೀಲರು ಪುಸ್ತಕ ಓದಿದರೂ ಕೇಳಿ ತಿಳಿದುಕೊಳ್ಳುವುದು ಬಹಳಷ್ಟಿರುತ್ತದೆ. ನನಗೆಲ್ಲಾ ತಿಳಿದಿದೆ ಎಂದುಕೊಂಡರೆ ಅವನಷ್ಟು ಮೂರ್ಖ ಪ್ರಪಂಚದಲ್ಲೆಲ್ಲೂ ಇರಲಾರ. ಆದುದರಿಂದ ವಕೀಲರು ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಬೇಕು.
-ಎನ್‌.ಎಸ್‌.ಸಂಜಯ್‌ಗೌಡ, ಉಚ್ಚ ನ್ಯಾಯಾಲಯದ ನ್ಯಾಯಾಧೀಶ

Advertisement

Udayavani is now on Telegram. Click here to join our channel and stay updated with the latest news.

Next