ನವದೆಹಲಿ: ವಿವಾದಿತ ದೇಶದ್ರೋಹ ಕಾಯ್ದೆಗೆ ತಡೆ ನೀಡಿ ಸುಪ್ರೀಂಕೋರ್ಟ್ ಬುಧವಾರ (ಮೇ 11) ಆದೇಶ ನೀಡಿರುವ ಬೆನ್ನಲ್ಲೇ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ನ್ಯಾಯಾಲಯ ಮತ್ತು ಅದರ ಸ್ವಾತಂತ್ರ್ಯವನ್ನು ಗೌರವಿಸುವುದಾಗಿ ಹೇಳಿದ್ದು, ಆದರೆ ಲಕ್ಷ್ಮಣ ರೇಖೆಯನ್ನು ದಾಟಲು ಸಾಧ್ಯವಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ, ಉದ್ವಿಗ್ನ ವಾತಾವರಣ; ಪ್ರಕರಣ ದಾಖಲು
ಕಾಯ್ದೆ ಬಗ್ಗೆ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ಹಾಗೂ ನಮ್ಮ ಪ್ರಧಾನಿ (ನರೇಂದ್ರ ಮೋದಿ) ಅವರ ಉದ್ದೇಶದ ಕುರಿತು ಮಾಹಿತಿ ನೀಡಿದ್ದೇವೆ. ನಾವು ನ್ಯಾಯಾಲಯ ಮತ್ತು ಅದರ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಆದರೆ ರಾಜ್ಯದ ಎಲ್ಲಾ ಕಾರ್ಯಾಂಗಗಳನ್ನು ಗೌರವಿಸಬೇಕಾದ ಲಕ್ಷ್ಮಣ ರೇಖೆಯನ್ನು ದಾಟುವಂತಿಲ್ಲ. ನಾವು ದೇಶದ ಸಂವಿಧಾನ ಮತ್ತು ಕಾನೂನನ್ನು ಗೌರವಿಸುವುದಾಗಿ ರಿಜಿಜು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ದೇಶದ್ರೋಹದ ಕಾಯ್ದೆಯನ್ನು ಪರಿಶೀಲಿಸುವವರೆಗೂ ತಡೆ ನೀಡಿದ್ದು, ಯಾರು ಈ ಕಾಯ್ದೆಯಡಿಯಲ್ಲಿ ಜೈಲಿನಲ್ಲಿದ್ದಾರೋ ಅವರು ಸಂಬಂಧಪಟ್ಟ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಭಯೋತ್ಪಾದನೆಯಂತಹ ಆರೋಪಗಳನ್ನು ಒಳಗೊಂಡಿರುವ ಕಾರಣ ನ್ಯಾಯಾಲಯಗಳಲ್ಲಿ ಅಂತಹ ವಿಚಾರಣೆಗಳನ್ನು ಮುಂದುವರಿಸಬೇಕು ಎಂಬ ಕೇಂದ್ರದ ವಾದವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು.