Advertisement

ಸಂಪನ್ಮೂಲ ಕ್ರೋಢೀಕರಣ ಸುಧಾರಣೆ

06:30 AM Feb 15, 2018 | |

ಬೆಂಗಳೂರು:ರಾಜ್ಯದ ಸಂಪನ್ಮೂಲ ಕ್ರೋಢೀಕರಣದಲ್ಲಿ ಕಳೆದ ಮೂರು ತಿಂಗಳಿನಿಂದ ಸುಧಾರಣೆ ಕಂಡುಬಂದಿದ್ದು, ಜನವರಿ ಅಂತ್ಯಕ್ಕೆ 2017-18ನೇ ಸಾಲಿನ ಒಟ್ಟು ತೆರಿಗೆ ಸಂಗ್ರಹದ ಶೇ.78.75 ಸಾಧನೆಯಾಗಿದೆ.

Advertisement

ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.80 ಸಾಧನೆಯಾಗಿತ್ತು. ಆದರೆ, ಕೇಂದ್ರದಿಂದ ಬರಬೇಕಾದ ಜಿಎಸ್‌ಟಿ ಪಾಲು ಸೇರಿದಂತೆ ಪ್ರಸಕ್ತ ಸಾಲಿನಲ್ಲಿ ತೆರಿಗೆ ಸಂಗ್ರಹ ಸಾಧನೆ ಶೇ.82 ದಾಟಲಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.
2017-18ನೇ ಸಾಲಿನಲ್ಲಿ ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ಮೋಟಾರು ವಾಹನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹಾಗೂ ಇತರೆ ತೆರಿಗೆ ರೂಪದಲ್ಲಿ ಒಟ್ಟು 89,957 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಜನವರಿ ಅಂತ್ಯದವರೆಗೆ 70,850 ಕೋಟಿ ರೂ. ಸಂಗ್ರಹವಾಗಿದೆ. ತೆರಿಗೆಯೇತರ ರಾಜಸ್ವದಲ್ಲಿ ಬೊಕ್ಕಸಕ್ಕೆ 4020 ಕೋಟಿ ರೂ. ಬಂದಿದೆ. ಅಲ್ಲದೆ, ಕೇಂದ್ರದಿಂದ ತೆರಿಗೆ ಹಂಚಿಕೆ ಮತ್ತು ಸಹಾಯಧನದಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಒಟ್ಟಾರೆ ರಾಜಸ್ವ ಸ್ವೀಕೃತಿ ತೃಪ್ತಿದಾಯಕ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪ್ರಸಕ್ತ ಸಾಲಿನಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಆದಾಯ ಸಂಗ್ರಹ ಕುರಿತಂತೆ ಸಾಕಷ್ಟು ಗೊಂದಲ ಕಾಣಿಸಿಕೊಂಡರೂ ಇದೀಗ ಸಮಸ್ಯೆ ಬಹುತೇಕ ಬಗೆಹರಿದಿರುವುದರಿಂದ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗಿದ್ದು, ವರ್ಷದ ಕೊನೆಯ 3 ತಿಂಗಳಲ್ಲಿ ಆದಾಯ ಸಂಗ್ರಹ ಮತ್ತಷ್ಟು ಸುಧಾರಣೆ ಕಾಣುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಜಿಎಸ್‌ಟಿ ನಷ್ಟವನ್ನು ಪೂರ್ಣ ಪ್ರಮಾಣದಲ್ಲಿ (ವಾರ್ಷಿಕ ಶೇ.15 ಪ್ರಮಾಣದಲ್ಲಿ ತೆರಿಗೆ ಏರಿಕೆ ಅಂದಾಜಿನಂತೆ) ನೀಡಿದರೆ ವರ್ಷಾಂತ್ಯಕ್ಕೆ ತೆರಿಗೆ ಸಂಗ್ರಹ ಗುರಿ 89,957 ಕೋಟಿ ರೂ. ಮೀರಬಹುದು ಎಂದು ಅಂದಾಜಿಸಲಾಗಿದೆ. 2017-18ನೇ ಸಾಲಿಗೆ 1,86,561 ಕೋಟಿ ರೂ. ಬಜೆಟ್‌ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಕಾರ್ಯರೂಪಕ್ಕೆ ತರಲು 1,44,892 ಕೋಟಿ ರೂ. ರಾಜಸ್ವ ಜಮೆಗಳ ಜತೆಗೆ 37,092 ಕೋಟಿ ರೂ. ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು.

ಸಾಲದ ಹೊರೆ
ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,420 ಕೋಟಿ ರೂ.ಗೆ ತಲುಪುವ ನಿರೀಕ್ಷೆ ಇದೆ. ರಾಜಸ್ವ ಸಂಗ್ರಹದಲ್ಲಿ ಸುಧಾರಣೆಯಾದರೂ 2018-19ನೇ ಸಾಲಿನಲ್ಲಿ ಹೊಸ ಕಾರ್ಯಕ್ರಮಗಳಿಗೆ ಅನುದಾನ ಒದಗಿಸಲು, ಸಾಲ ಮನ್ನಾದ ಬಾಬ್ತು ಹೆಚ್ಚುವರಿಯಾಗಿ ಬೀಳುವ ಹೊರೆ ತಪ್ಪಿಸಿಕೊಳ್ಳಲು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಸಾಲ ಮಾಡಬೇಕಾಗುತ್ತದೆ. ಹೀಗಾಗಿ ಈ ಬಾರಿ ಸಾಲದ ಪ್ರಮಾಣ ಹೆಚ್ಚಾಗುವ ಆತಂಕ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next