ಹೊಸದಿಲ್ಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು
ಪ್ರತ್ಯೇಕತಾವಾದಿಗಳಿಗೆ, ಭಯೋತ್ಪಾದಕರಿಗೆ ಆಗಿರುವ ಹಿನ್ನಡೆ. ಹೀಗೆಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಬುಧ ವಾರ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಹಲವು ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಜನರು ಬೆಂಬಲಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಚುನಾವಣೆಯಲ್ಲಿ ಬಿಜೆಪಿ 74 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿದೆ. ಜತೆಗೆ 4.5 ಲಕ್ಷ ಮತಗಳನ್ನು ಪಡೆದಿದೆ. ಇದು ನ್ಯಾಶ ನಲ್ ಕಾನ್ಫರೆನ್ಸ್ ಪಡೆದ ಮತಗಳಿಗಿಂತ ಹೆಚ್ಚು ಎಂದು ಪ್ರಸಾದ್ ವಿವರಿಸಿದ್ದಾರೆ.
ಜಮ್ಮು ವಲಯದಲ್ಲಿ ಬಿಜೆಪಿ ಗೆದ್ದ ಬಗ್ಗೆ ಮಾತನಾಡಿದ ಅವರು “ಕಣಿವೆಯಲ್ಲಿ ನಮ್ಮ ಪಕ್ಷ ಹೆಚ್ಚಿನ ಸಾಧನೆ ಮಾಡಿದೆ ಉಗ್ರ ಚಟುವಟಿಕೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಕೂಡ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಸೋಪುರ್, ಪುಲ್ವಾಮಾ, ಶೋಪಿಯಾನ್, ಗಂಡರ್‌ಬಾಲ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ ಎಂದರು. ಭಯೋತ್ಪಾದಕರ ನಂಬಿಕೆಯನ್ನು ಜನರು ಸುಳ್ಳಾಗಿಸಿದ್ದಾರೆ ಎಂದರು.
ಇದೇ ವೇಳೆ 278 ಡಿಡಿಸಿಗಳ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಪೀಪಲ್ಸ್ ಅಲಯನ್ಸ್ ಪಾರ್ ಗುಪ್ಕಾರ್ ಡೆಕ್ಲರೇಷನ್ (ಪಿಎಜಿಡಿ)ಗೆ 110, ಬಿಜೆಪಿಗೆ 75, ಅಪ್ನಿ ಪಾರ್ಟಿಗೆ 12, ಸ್ವತಂತ್ರರು 50, ಕಾಂಗ್ರೆಸ್ 26, ಪಿಡಿಎಫ್, ನ್ಯಾಶನಲ್ ಪ್ಯಾಂಥರ್ಸ್ ಪಾರ್ಟಿ ತಲಾ 2, ಬಿಎಸ್‌ಪಿ 1 ಸ್ಥಾನದಲ್ಲಿ ಜಯಗಳಿಸಿದೆ. ಗಮನಾರ್ಹ ಅಂಶವೆಂದರೆ ಈ ವರ್ಷವೇ ಸ್ಥಾಪನೆಗೊಂಡ ಅಪ್ನಿ ಪಾರ್ಟಿ 12 ಸ್ಥಾನಗಳನ್ನು ಗಳಿಸಿದ್ದು.ಪಿಎಜಿಡಿ ಪಕ್ಷಗಳ ಪೈಕಿ ನ್ಯಾಶನಲ್ ಕಾನ್ಫರೆನ್ಸ್‌ಗೆ 67, ಪಿಡಿಪಿ 27, ಪೀಪಲ್ಸ್ ಕಾನ್ಫರೆನ್ಸ್‌ಗೆ 8, ಸಿಪಿಎಂ 5, ಜೆ-ಕೆ ಪೀಪಲ್ಸ್ ಮೂವ್ ವೆಂಟ್ 3 ಸ್ಥಾನಗಳಲ್ಲಿ ಜಯ ಗಳಿಸಿದೆ. ಐದು ಪಕ್ಷಗಳಿಗೆ ಒಟ್ಟಾಗಿ 3.94 ಲಕ್ಷ ಮತಗಳು ಪ್ರಾಪ್ತಿಯಾಗಿವೆ.
ಐದರಲ್ಲಿ ಬಿಜೆಪಿಗೆ: ಸಂವಿಧಾನದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ವರ್ಷಗಳು ಕಳೆದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ 5 ಜಿಲ್ಲಾ ಅಭಿವೃದ್ಧಿ ಮಂಡಳಿಯಲ್ಲಿ ಬಹುಮತ ಸಾಧಿಸಿದೆ. ಪಿಎಜಿಡಿ 6ರಲ್ಲಿ ಬಹು ಮತ ಸಾಧಿಸಿಕೊಂಡಿದೆ. ಜಮ್ಮು ವಲಯದಲ್ಲಿ ಕಥುವಾ ಮತ್ತು ಸಾಂಬಾ, ಜಮ್ಮು ಮತ್ತು ಉಧಂಪುರ, ದೋಡಾ, ರಿಯಾಸಿಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ರಂಬಾನ್ ಮತ್ತು ಕಿಶ್ತ್ವಾರ ಪ್ರದೇಶದಲ್ಲಿ ಪಿಎಜಿಡಿ ಪ್ರಭಾವ ಮೆರೆದಿದೆ.
50 ಕ್ಷೇತ್ರಗಳಲ್ಲಿ ಸ್ವತಂತ್ರರ ಜಯ
ಐವತ್ತು ಕ್ಷೇತ್ರಗಳಲ್ಲಿ ಸ್ವತಂತ್ರರು ಜಯಗಳಿಸಿದ್ದು ಈ ಚುನಾವಣೆಯ ಪ್ರಧಾನ ಅಂಶ. ಹೀಗಾಗಿ, ಹೆಚ್ಚಿನ ಸ್ಥಳಗಳಲ್ಲಿ ಅವರು ಅಧಿಕಾರ ಪಡೆದು ಕೊಳ್ಳಲಿರುವ ಪಕ್ಷಗಳಿಗೆ ಅವರನ್ನು ಅವಲಂಬಿಸುವ ಪರಿಸ್ಥಿತಿ ಬರಲಿದೆ. ವಿಶೇಷವಾಗಿ ಅತಂತ್ರವಾಗಿರುವ ಸ್ಥಳಗಳಲ್ಲಿ ಅವರು ಪ್ರಭಾವ ಬೀರಲಿದ್ದಾರೆ. ಬಿಜೆಪಿಯಿಂದ 2 ಬಾರಿ ಶಾಸಕರಾಗಿದ್ದ ಶಾಮ್ ಲಾಲ್ ಚೌಧರಿ ಅವರನ್ನು ಜಮ್ಮುವಿನ ಸಚೇತಗಡದಲ್ಲಿ ಸ್ವತಂತ್ರ ಅಭ್ಯರ್ಥಿ ತರಣ್‌ಜಿತ್ ಸಿಂಗ್ ಸೋಲಿಸಿದ್ದು ಬಹು ಮುಖ್ಯ ಫಲಿತಾಂಶ. ಈ ಚುನಾವಣೆಯಲ್ಲಿ ಏಳು ಮಂದಿ ಸಚಿವರೂ ಜಯ ಸಾಧಿಸಿದ್ದಾರೆ.