ಬೆಳಗಾವಿ: ಸಂಪುಟ ವಿಸ್ತರಣೆಗೆ ಕಸರತ್ತು ಆರಂಭವಾಗಿರುವ ವೇಳೆಯಲ್ಲೇ ಕಾಂಗ್ರೆಸ್‌ನ ಪ್ರಭಾವಿ ಶಾಸಕ ಸತೀಶ್ ಜಾರಕಿಹೊಳಿ ಅವರು ರೆಸಾರ್ಟ್‌ಗೆ ತೆರಳಿ ಆಬಳಿಕ ನೀಡಿರುವ ಹೇಳಿಕೆ ಮೈತ್ರಿ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ನಡುಕ ಹುಟ್ಟಿಸುವಂತಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ‘ನಾನು ನಿನ್ನೆ ರೆಸಾರ್ಟ್‌ಗೆ ತೆರಳಿದ್ದು ನಿಜ. ಮದುವೆ ಮುಗಿಸಿ ಬರುವಾಗ ತೆರಳಿದ್ದೆ.ನಮ್ಮ ಶಾಸಕರನ್ನು ಒಯ್ಯಲಿಕ್ಕೆ, ಪಕ್ಷಾಂತರ ಮಾಡಲಿಕ್ಕೆ ಅಲ್ಲ. ಟೂರ್ ನಡೆಸಲು ಪ್ರಿಪ್ಲ್ಯಾನ್ ಮಾಡುವ ಸಲುವಾಗಿ ತೆರಳಿದ್ದೆ .ಮುಂದೆ ಉಪಯೋಗಕ್ಕೆ ಬರುತ್ತದೆ’ ಎಂದು ನಗುನಗುತ್ತಾ ಬಾಂಬ್ ಸಿಡಿಸಿದ್ದಾರೆ.
ಖಾನಾಪುರದ ಕಣಕುಂಬಿ ಗ್ರಾಮದಲ್ಲಿರುವ ಸಾತೇವಾರಿ ರೆಸಾರ್ಟ್‌ಗೆ ಜಾರಕಿಹೊಳಿ ಅವರು ತೆರಳಿರುವ ಪೋಟೋಗಳು ವೈರಲ್ ಆಗುವ ಮೂಲಕ ಹಲವು ಊಹಾಪೋಹಕ್ಕೆ ಕಾರಣವಾಗಿತ್ತು. ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ತೊರೆದು ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗುತ್ತಾರೆ ಎನ್ನಲಾಗಿದೆ.
ಈಗಾಗಲೆ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಕುರಿತು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ಅಸಮಾಧಾನ ಹೊಂದಿರುವುದು ಬೆಳಕಿಗೆ ಬಂದಿದೆ.
ಜಾರಕಿಹೊಳಿ ಸಹೋದರರು ರಾಜಕೀಯದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ನಿರೀಕ್ಷೆ ರಾಜಕಾರಣದಲ್ಲಿ ಮೂಡಿದೆ.