Advertisement

ಕತೆ ಕತೆ ಕಾರಣ

06:00 AM Sep 30, 2018 | |

84ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಶೇಖರ ಕಂಬಾರರು ಸುಮ್ಮನೆ ಮಾತನಾಡುತ್ತಿದ್ದರೆ ಸಾಕು, ಅಲ್ಲೊಂದು ಕಥನ ಕಟ್ಟುವ ಕೌಶಲವಿರುತ್ತದೆ !

Advertisement

ಕತೆ ಹೇಳುವುದು’, “ಕತೆ ಕೇಳುವುದು’- ಇವೆರಡು ಎಲ್ಲರಿಗೂ ಬಹಳ ಇಷ್ಟವಾದ ಸಂಗತಿಗಳು. ಕಥನವೇ ಒಂದು ಕಲೆ. ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಕಥನ ಕಲೆ ಬಹಳ ಮುಖ್ಯವಾದ ಪ್ರಕಾರ. ಪ್ರತಿ ಸಂಸ್ಕೃತಿಯೊಳಗೆ ಕಥನಗಳಿರುತ್ತವೆ. ಪ್ರತಿಯೊಬ್ಬನ ಬದುಕಿನಲ್ಲಿ ಕಥನಗಳಿರುತ್ತವೆ. ಅವು ಕಥೆಗಳಾಗಿ ಅಭಿವ್ಯಕ್ತಿಗೊಳ್ಳುತ್ತವೆ. ಹಾಗಾಗಿ, ಕತೆೆಗಳೆಂದರೆ ಸಂಸ್ಕೃತಿಯ, ಬದುಕಿನ ಮುಖ್ಯ ಭಾಗಗಳೇ.

“ಕತೆೆ’ ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ನಮ್ಮ ಜನಪದರು ಸೊಗಸಾದ ಕತೆ ಹೇಳುತ್ತಾರೆ: ಒಮ್ಮೆ ಪಾರ್ವತಿ ತನ್ನ ಮಕ್ಕಳಿಗಾಗಿ ಒಂಬತ್ತು ಲಕ್ಷ ಕಥೆಗಳನ್ನು ಹೇಳಿದಳಂತೆ. ಅದನ್ನು ಒಬ್ಬ ಯಕ್ಷ ಬರೆದುಕೊಂಡನಂತೆ. ಆ ಎಲೆಗಳನ್ನು ಭೂಮಿಯ ಮೇಲೆ ಎರಚಿದನಂತೆ. ಅದರಲ್ಲಿ ಮನುಷ್ಯರಾದ ನಮಗೆ ದಕ್ಕಿರುವುದು ಎರಡು ಲಕ್ಷ ಮಾತ್ರ!

ಮನುಷ್ಯನ ಬದುಕು ನೀರಸವಾದುದಲ್ಲ. ಬದುಕಿನ ಪ್ರತಿಯೊಂದು ಘಟನೆಯೂ ಆರಾಧನಾತ್ಮಕ ಕಲೆಯೊಂದಿಗೆ ಬೆಸೆದುಕೊಂಡಿರುತ್ತದೆ. ಇದನ್ನು ರಿಚುವಲ್‌ ಎನ್ನುತ್ತೇವೆ. ಗಣಪತಿಯ ಮೂರ್ತಿಯನ್ನು ತರುವಾಗಲೂ ಪೂಜೆ ಮಾಡುತ್ತೇವೆ. ಮನೆಯಲ್ಲಿ ಹಾಡು, ನೃತ್ಯದ ಮೂಲಕ ಪೂಜೆ ಮಾಡುತ್ತೇವೆ. ಕೊನೆಯಲ್ಲಿ ಪೂಜೆ ಮಾಡಿಯೇ ವಿಸರ್ಜನೆ ಮಾಡುತ್ತೇವೆ. ಆವಾಹನೆ ಮತ್ತು ವಿಸರ್ಜನೆಯ ನಡುವೆ ಒಂದು ಕತೆ ಇರುತ್ತದೆ. ಬದುಕನ್ನು ಮಾತ್ರವಲ್ಲ, ನಾಟಕವನ್ನು ಕೂಡ ಒಂದು ರಿಚುವಲ್‌ ಆಗಿಯೇ ನೋಡುತ್ತೇವೆ. ಯಕ್ಷಗಾನದಲ್ಲಿ ಇದು ಚೆನ್ನಾಗಿ ಗೊತ್ತಾಗುತ್ತದೆ. ಅದರಲ್ಲಿ ಕೃಷ್ಣನ ಪ್ರವೇಶವಾಗುವುದಕ್ಕಿದೆ ಎಂದು ಭಾವಿಸಿ, ಅದನ್ನು ಆ ಪಾತ್ರಧಾರಿಯೇ ಸೂಚಿಸುತ್ತಾನೆ: “ಕೃಷ್ಣ ಬರುತ್ತಿರುವನು ನೋಡಿರೊ ನಗುನಗುತಾ ಬರುತ್ತಿರುವ ನೋಡಿರೋ’ ಹೀಗೆ. ಅಂದರೆ ಅವನು ಇನ್ನೂ ಕೃಷ್ಣ ಆಗಿಲ್ಲ. ಇದು ಕಥೆಯ ಒಂದು ಭಾಗ ಅಷ್ಟೆ. ಮುಂದೆ ಭಾಗವತ ಅವನನ್ನು “ಎಷ್ಟು ಚಂದ ಕುಣೀತಿಯಲ್ಲ, ಯಾರು ನೀನು? ಯಾವ ಊರಿನವನು? ಬಂದ ಉದ್ದೇಶವೇನು?’ ಎಂದು ಕೇಳಿದ ನಂತರ ಆ ಪಾತ್ರಧಾರಿ ಕೃಷ್ಣನಾಗುತ್ತಾನೆ. ಅವನು ಪ್ರಸಂಗ ಮುಗಿಯುವವರೆಗೂ ಕೃಷ್ಣನಾಗಿಯೇ ಇರುತ್ತಾನೆ. ಮಧ್ಯೆ ನಡೆಯುವುದು ಕೃಷ್ಣ ಕತೆ! ಆವಾಹನೆ ಮತ್ತು ವಿಸರ್ಜನೆಯ ನಡುವೆ ಇರುವುದು ಎಲ್ಲವೂ ಕತೆೆಗಳೇ. ನಾಟಕದಲ್ಲಾದರೆ ನಾಂದಿ ಇರುತ್ತದೆ, ಮಂಗಲ ಇರುತ್ತದೆ. ನಡುವೆ ಇರುವುದೇ ಕತೆೆ. ಬದುಕು, ನಾಟಕ, ಕಾದಂಬರಿ, ಬಯಲಾಟ ಎಲ್ಲದರಲ್ಲಿಯೂ.

ಪಂಚತಂತ್ರದ ಕತೆಗಳು ನಮಗೆಲ್ಲ ಗೊತ್ತು. ಪ್ರಪಂಚದಲ್ಲಿ ಬೈಬಲ್‌ ಬಿಟ್ಟರೆ ಅತೀ ಹೆಚ್ಚು ಅನುವಾದವಾಗಿರುವ ಪುಸ್ತಕ ಪಂಚತಂತ್ರ! ನಮಗೆ ಒರಿಜಿನಲ್‌ ಪಂಚತಂತ್ರ ಯಾವುದೆಂದು ಗೊತ್ತಿಲ್ಲ. ಯಾವುದೂ ಆಗಿರಬಹುದು! ಆಯಾ ಸಂಸ್ಕೃತಿಯಲ್ಲಿ ಎಲ್ಲವೂ ಒರಿಜಿನ್‌ಗಳೇ. ಪ್ರತಿಯೊಬ್ಬರೊಳಗೂ ಒಂದೊಂದು ಕತೆಗಳಿರುತ್ತವೆ. ಕಥೆಗಳು ಪಯಣಿಸುತ್ತವೆ. ಒಬ್ಟಾತ ಒಂದೆಡೆಯಿಂದ ಮತ್ತೂಂದೆಡೆಗೆ ಹೋಗುವಾಗ ತನ್ನ ಜೊತೆಗೆ ಕತೆಗಳನ್ನು ಒಯ್ದಿರುತ್ತಾನೆ. ಅವನ ಪ್ರವಾಸವೆಂದರೆ ಕಥನದ ಪಯಣ. ಹಾಗೆ ನೋಡಿದರೆ ಇಡೀ ಪ್ರಪಂಚಕ್ಕೆ ಕಥೆ ಹೇಳಲು ಕಲಿಸಿದವರು ನಾವೇ. ಅಂದರೆ ಭಾರತೀಯರು. ನಮ್ಮಲ್ಲಿ ಎಲ್ಲವೂ ಕಥನಗಳೇ. ಕಾವ್ಯ ಇರಲಿ, ನಾಟಕ ಇರಲಿ, ಕಾದಂಬರಿ ಇರಲಿ ಎಲ್ಲವೂ. ನಾಟಕ ಹೇಗೆ ಕಥನ ಎಂದು ನೀವು ಕೇಳಬಹುದು. ಅದು ದೃಶ್ಯ ಕಥನ. ನಾಟಕದ ರೂಪವೂ ಕತೆಯ ಹಾಗೆಯೇ ಇದೆ. ಆರಂಭವಿದೆ, ಕೊನೆಯೂ ಇದೆ. ನಡುವೆ ಇರುವುದೇ ಕತೆೆ.

Advertisement

ಒಂದು ನಾಟಕ ನಡೆಯುತ್ತಿದೆ. ಅಲ್ಲಿ ನಾನು ಪ್ರೇಕ್ಷಕ. ಈ ಹೊತ್ತಿನಲ್ಲಿ ನಾನು ಶ್ರೀಮಂತ, ನಾನು ಬಡವ, ನಾನು ವಿದ್ಯಾರ್ಥಿ, ನಾನು ಶಿಕ್ಷಕ, ನಾನು ಸಾಹಿತಿ, ನಾನು ಹೆಣ್ಣು , ನಾನು ಗಂಡು- ಇಂಥ ಎಲ್ಲ ಅಸ್ತಿತ್ವಗಳನ್ನು ಮರೆಯುತ್ತೇನೆ. ವೇದಿಕೆಯಲ್ಲಿ ನನ್ನ ಸಹಪಾಠಿಯೇ ಅಭಿನಯಿಸುತ್ತಿರಬಹುದು, ಅವನನ್ನು ದುಶ್ಯಂತನನ್ನಾಗಿ ನೋಡುತ್ತೇನೆ. ನನ್ನ ಪಕ್ಕದ ಮನೆಯ ಹುಡುಗಿಯೇ ಆಗಿರಬಹುದು, ಆಕೆಯನ್ನು ಶಕುಂತಲೆಯಾಗಿ ನೋಡುತ್ತೇನೆ. ಅದು ನಡೆಯುತ್ತಿರುವ ಕಾಲವಾದರೋ ಬಹಳ ಹಳೆಯದು. ಅಲ್ಲೊಂದು ಕಾಡಿದೆ. ಅಲ್ಲಿ ಜಿಂಕೆ-ಕೋಗಿಲೆಗಳಿವೆ. ಅಲ್ಲೊಬ್ಬಳು ಹೆಣ್ಣು ಮಗಳಿದ್ದಾಳೆ. ಅಲ್ಲಿಗೆ ಒಬ್ಬ ರಾಜ ಬರುತ್ತಾನೆ. ಅವರಲ್ಲಿ ಪ್ರೇಮಾಂಕುರವಾಗುತ್ತದೆ. ಅವರಿಬ್ಬರು ಪ್ರೀತಿಸುತ್ತಾರೆ. ನಾವು ಆ ಎಲ್ಲ ಘಟನೆಗಳಿಗೂ ಸಾಕ್ಷಿಯಾಗುತ್ತೇವೆ. ಅವರ ನಗೆ ನಮ್ಮ ನಗೆಯೂ ಆಗುತ್ತದೆ. ಅವರ ಸಂಕಟ ನಮ್ಮದೂ ಆಗುತ್ತದೆ. ಅಲ್ಲಿ ಉಂಟಾಗುವ ಸುಗ್ಗಿ-ಸಂಕಟ ಎಲ್ಲವೂ ನಿರುದ್ದಿಷ್ಟವಾದುದು. ನಾವು ಕಥೆಯನ್ನು ಹಿಂಬಾಲಿಸುತ್ತೇವಲ್ಲದೆ ನೀವು ಯಾಕೆ ಹಾಗೆ ಮಾಡುತ್ತೀರಿ; ನೀವು ಯಾಕೆ ಸಂತೋಷ ಪಡುತ್ತೀರಿ, ನೀವು ಯಾಕೆ ಸಂಕಟ ಪಡುತ್ತೀರಿ ಎಂದು ಪ್ರಶ್ನಿಸುವುದಿಲ್ಲ. ನಾವು ಯಾರು ಎಂಬಂಥ ತರತಮ ಭಾವಗಳು ನಮ್ಮಲ್ಲಿರುವುದಿಲ್ಲ. ಕೇವಲ ಕಥೆಯನ್ನಷ್ಟೇ  ನೋಡುತ್ತಿರುತ್ತೇವೆ. ನಾವು ನೋಡುತ್ತಿರುವ ಮತ್ತು ಅವರು ಅಭಿನಯಿಸುತ್ತಿರುವ ಮಧ್ಯೆ ಒಂದು ಅನುಸಂಧಾನ ಇದೆ. ಇದೇ ರಸಾನುಭವ. ಈ ಭಾವವನ್ನು “ಪರಮಾತ್ಮನ ಸಹೋದರ’ ಎಂದು ಕರೆದಿದ್ದಾರೆ. ಅದು ನನ್ನೊಬ್ಬನ ಅನುಸಂಧಾನ, ರಸಾನುಭವ ಆಗಿರದೆ ಅಲ್ಲಿರುವ ಸಾವಿರಾರು ಮಂದಿ ಪ್ರೇಕ್ಷಕರ ಅನುಭವವೂ ಆಗಿರುತ್ತದೆ. ವ್ಯಕ್ತಿಗತವಾಗಿ ಸ್ವಲ್ಪ ಹೆಚ್ಚುಕಡಿಮೆ ಆಗಬಹುದು. ಕತೆಯ ಉದ್ದೇಶವೂ ಅದೇ.

ಮಹಾಭಾರತ ನಮ್ಮ ನಡುವೆ ಇರುವ ಮಹಾಕಾವ್ಯ, ಮಹಾಕತೆೆ. ಅದರಲ್ಲಿ ಎಷ್ಟೊಂದು ರಸಗಳಿವೆ! ಶೃಂಗಾರ, ರೌದ್ರ, ವೀರ ಹೀಗೆ. ರಸ ವೈವಿಧ್ಯಗಳು ಇರುವುದರಿಂದ ಅದನ್ನು ಮತ್ತೆ ಮತ್ತೆ ಹೇಳುತ್ತೇವೆ, ಕೇಳುತ್ತೇವೆ, ನೋಡುತ್ತೇವೆ. ಹಾಗೆ ನೋಡಿದರೆ, ನಮಗೆ ಧರ್ಮದ ಬಗ್ಗೆ ಹೇಳಿಕೊಳ್ಳಲು ಕತೆ ಬೇಕು, ನೀತಿ ಹೇಳಲು ಕಥೆ ಬೇಕು. ಹುಟ್ಟಿದರೆ ಒಂದು ಕತೆ, ಸತ್ತರೆ ಮತ್ತೂಂದು ಕತೆೆ. ಕುಳಿತರೆ ಕತೆ, ನಿಂತರೆ ಕತೆ. ಕೇವಲ ಮನುಷ್ಯರು ಮಾತ್ರವಲ್ಲ , ಗಿಡ ಕತೆ ಹೇಳುತ್ತದೆ, ಮನೆ ಕತೆೆ ಹೇಳುತ್ತದೆ, ಮಂಚ ಕತೆ ಹೇಳುತ್ತದೆ, ಹಸು-ಹುಲಿ-ಗಿಳಿ-ಮೊಲ-ಸಿಂಹ ಎಲ್ಲವೂ ಕತೆೆ ಹೇಳುತ್ತವೆ.

ಪಾಶ್ಚಾತ್ಯರಲ್ಲಿ ಕತೆಯ ಉದ್ದೇಶ ಭಿನ್ನವಾದುದು. ಅವರಲ್ಲಿ ಎರಡು ಪಾತ್ರಗಳ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ. ಹಾಗಾಗಿ, ಘರ್ಷಣೆ ಏರ್ಪಡುತ್ತದೆ. ಘರ್ಷಣೆಯಾದಾಗ ದುಃಖವಾಗುತ್ತದೆ. ದುಃಖವಾದಾಗ ಅತ್ತು ಬಿಡಬೇಕು. ಟ್ರ್ಯಾಜಿಡಿಗಳಲ್ಲಿ ಅರಿಸ್ಟಾಟಲ್‌ ಇದನ್ನು “ಕೆಥಾರ್ಸಿಸ್‌’ ಎಂದು ಕರೆದ. ನಮ್ಮಲ್ಲಿ ಜನ್ಮವೆತ್ತುವುದು ಪುಣ್ಯದ ಕೆಲಸ. ಪಾಶ್ಚಾತ್ಯರಲ್ಲಿ ಹುಟ್ಟಿದ್ದು ಪಾಪ ಎಂಬ ನಂಬಿಕೆ ಇದೆ. ಹುಟ್ಟಿದವರಿಗೆ ಆಡಂ ಜ್ಞಾನದ ಹಣ್ಣು ಕೊಡುತ್ತಾನೆ. ಅದನ್ನು ತಿಂದ ಮೇಲೆ ಅವರಿಗೆ ತಾವು ನಗ್ನರಾಗಿದ್ದೇವೆ ಎಂಬ ಅರಿವು ಮೂಡಿ ನಾಚಿಕೆಯಾಗುತ್ತದೆ. ಗ್ರೀಕ್‌ನ ಈಡಿಪಸ್‌ನ ಕಥೆ ನಮಗೆ ಗೊತ್ತು. ಅವನಿಗೂ ಜ್ಞಾನ ಉಂಟಾದದ್ದೇ ಸಮಸ್ಯೆ. ಅಲ್ಲಿನವರಿಗೆ ಜ್ಞಾನ, ವಿದ್ಯೆ ಒಂದು ರೀತಿಯ ಬಂಧನದ ಹಾಗೆ. ನಮ್ಮಲ್ಲಿ ಜ್ಞಾನ, ವಿದ್ಯೆ ಎಂಬುದು ಎಲ್ಲದರಿಂದ ಮುಕ್ತಿ ಹೊಂದುವಂಥಾದ್ದು. ಕಥೆಗಳು ಅಲ್ಲಿಯೂ ಇವೆ, ಇಲ್ಲಿಯೂ ಇವೆ. ಉದ್ದೇಶ ಒಂದೇ, ಆಶಯ ಬೇರೆ ಬೇರೆ. ಆಯಾಯ ಸಂಸ್ಕೃತಿಗನುಗುಣವಾಗಿ.

ನಾಟಕದ ಬಗ್ಗೆ ಹೇಳಿದೆ. ಸಿನೆಮಾವನ್ನು ತೆಗೆದುಕೊಳ್ಳೋಣ. ಅದರ ಉದ್ದೇಶವೂ ಕಥೆ ಹೇಳುವುದೇ. 1892ರಲ್ಲಿ ಮೊತ್ತಮೊದಲ ಸಿನೆಮಾ ಬಂತು. ಅದರಲ್ಲಿ ಒಂದು ಟ್ರೈನ್‌ ಬರುವುದೇ ಒಂದು ಕಥೆ. ಟ್ರೈನ್‌ ಬಂದದ್ದೇ ಎಲ್ಲರೂ ಓಡಿಬಿಟ್ಟರು. ಸೀಯಿಂಗ್‌ ಈಸ್‌ ಬಿಲೀವಿಂಗ್‌ ಎಂಬ ಮಾತು ಬಂದದ್ದೇ ಇಲ್ಲಿಂದ. ಇದು ಆಧುನೀಕತೆ ಪ್ರವೇಶವಾಗುವ ಸಂದರ್ಭದ ಸಾಂಕೇತಿಕತೆ.

ಕಥೆಗಳಿಗೊಂದು ಸ್ವಭಾವ ಇದೆ. ಅವುಗಳು ಬೆಳೆಯುತ್ತ ಹೋಗುತ್ತವೆ. ಯಕ್ಷಗಾನದಲ್ಲಿ ಒಂದು ಪ್ರಸಂಗ ಬರುತ್ತದೆ ಎಂದಿಟ್ಟುಕೊಳ್ಳಿ. ಅದರ ಕಥೆ ಶೇಣಿ ಗೋಪಾಲಕೃಷ್ಣ ಭಟ್ಟರಂಥವರ ಬಾಯಿಯಲ್ಲಿ ಬೆಳೆಯುತ್ತ ಹೋಗುತ್ತದೆ. ರಾಮಾಯಣದಲ್ಲಿ ರಾವಣನನ್ನು ಪ್ರಶ್ನಿಸುವ ಒಂದು ಸಾಲನ್ನು ಕಲ್ಪಿಸಿಕೊಳ್ಳಿ. “ನೀನು ಸೀತೆಯನ್ನು ಕದ್ದೊಯ್ದದ್ದು ತಪ್ಪಲ್ಲವೆ?’ ಎಂದು ಭಾಗವತ ಕೇಳಿದರೆ ಆಗ ರಾವಣ ಹೇಳಿಯಾನು, “ಅದು ತಪ್ಪಲ್ಲ  ಭಾಗವತರೆ, ಅವಳು ಹಿಂದಿನ ಜನ್ಮದಲ್ಲಿ ನನ್ನ ಮಗಳಾಗಿದ್ದಳು’. ಹಾಗೆ ಇಬ್ಬರ ನಡುವೆ ಆರಂಭವಾದ ಸಂವಾದ, ಕಥೆಯಾಗಿ ಬೆಳೆದು ಬೆಳಗಿನವರೆಗೂ ಮುಂದುವರಿಯಬಹುದು. ಯಾವಾಗಲೂ ಹೀಗೇ ಆಗಬೇಕೆಂದಿಲ್ಲ, ಒಂದೇ ವಾಕ್ಯದಲ್ಲಿಯೂ ಕಥೆ ಮುಗಿದು ಹೋಗಬಹುದು. ಅಂದರೆ ಕತೆಯ ಬೀಸು ಎಷ್ಟು ಚಿಕ್ಕದೂ ಆಗಿರಬಹುದು, ಎಷ್ಟು ದೊಡ್ಡದೂ ಆಗಿರಬಹುದು. ಕತೆಗೆ ಮುಖ್ಯ ಲಕ್ಷಣವೊಂದಿದೆ, ಅದು ರಿಪೀಟ್‌ ಆಗುವುದಿಲ್ಲ. ಹಾಗಾಗಿ, ಕತೆೆ ಎಂಬುದು ನಿರಂತರವಾದ ಪ್ರಕ್ರಿಯೆ. ನೀವು ನಿಮ್ಮ ಮಗನಿಗೆ ಒಂದು ಕತೆ ಹೇಳುತ್ತೀರಿ ಎಂದಿಟ್ಟುಕೊಳ್ಳಿ. ಅದನ್ನೇ ಅವನು ತನ್ನ ಸಹಪಾಠಿಗಳಿಗೆ ಒಂದು ರೀತಿಯಲ್ಲಿ ಹೇಳಿದರೆ, ಶಿಕ್ಷಕರಿಗೆ ಮತ್ತೂಂದು ರೀತಿಯಲ್ಲಿ ಹೇಳುತ್ತಾನೆ. ಹುಡುಗಿಯರಿದ್ದರೆ ಅವರಿಗೆ ಬೇರೆ ರೀತಿಯಲ್ಲಿ ಕತೆ ಹೇಳುತ್ತಾನೆ. ತನ್ನ ಅತ್ಯಾಪ್ತ ಸ್ನೇಹಿತ ಇದ್ದರೆ ಅವನಿಗೆ ಕತೆ ಹೇಳುವ ಕ್ರಮವೇ ಬೇರೆ. ಒಂದು ಕತೆಯನ್ನು ಹೇಳುತ್ತಿರುವಾಗಲೇ ಇನ್ನಷ್ಟು ಕತೆಗಳು ಹುಟ್ಟಿಕೊಳ್ಳುತ್ತವೆ. 

ಒಮ್ಮೆ ಹೇಳಿದ ಕಥೆ ಮತ್ತೂಮ್ಮೆ ಹೇಳುವಾಗ ಹೊಸತೇ ಆಗುತ್ತದೆ. ಮಹಾಭಾರತವನ್ನೇ ತೆಗೆದುಕೊಳ್ಳಿ, ಅದನ್ನು ನಮ್ಮ ದೇಶ ಮತ್ತೆ ಮತ್ತೆ ಹೇಳುತ್ತ ಬಂದಿದೆ. ವ್ಯಾಸಭಾರತವಿರಲಿ, ಕುಮಾರವ್ಯಾಸ ಭಾರತವಿರಲಿ, ಅದನ್ನು ಹೇಳುವಾಗ ಅದು “ನನ್ನ ಭಾರತ’ ವಾಗುತ್ತದೆ! ನಮ್ಮಲ್ಲೊಬ್ಬಳು ಮುಸ್ಲಿಂ ಹೆಣ್ಣುಮಗಳು ಮಹಾಭಾರತದ ಕತೆ ಹೇಳುತ್ತಿದ್ದಳು. ಕೃಷ್ಣ ಇಂದೇ ಈ ಕ್ಷಣದಲ್ಲಿಯೇ ನಮ್ಮ ಜೊತೆ ಅನುಸಂಧಾನ ನಡೆಸುತ್ತಿದ್ದಾನೆ ಎಂಬಂಥ ಆಪ್ತತೆ ಅವಳ ಮಾತಿನಲ್ಲಿ ಇರುತ್ತಿತ್ತು. ಆಗ ಮಹಾಭಾರತ ಅವಳ ಕತೆ! ಹಾಗಾಗಿಯೇ ವ್ಯಾಸ ಹೇಳಿದ ಮೇಲೂ ಪಂಪನಿಗೆ ಅದೇ ಕತೆಯನ್ನು ಹೇಳಬೇಕೆನ್ನಿಸಿತು. ರನ್ನನಿಗೆ ಹೇಳಬೇಕೆನ್ನಿಸಿತು, ಕುಮಾರವ್ಯಾಸನು ಕೃಷ್ಣಕತೆಯನ್ನು ಹೇಳುತ್ತಿದ್ದೇನೆ ಎಂದು ಹೇಳುತ್ತಿರುವಾಗಲೂ ಹೇಳುವುದು ಮಹಾಭಾರತದ ಕತೆಯನ್ನೇ.

ಅದೇ ಕತೆ ಎಂದರೆ ಅದೇ ಕತೆಯೇ. ಅಲ್ಲವೆಂದರೆ ಅಲ್ಲ. ಆಗ ನಾನು ಸಿನೆಮಾವೊಂದರ ಉದಾಹರಣೆ ಹೇಳಿ, “ಸೀಯಿಂಗ್‌ ಈಸ್‌ ಬಿಲೀವಿಂಗ್‌’ ಎಂದೆ. ಅದಕ್ಕೆ ಸಂಬಂಧಿಸಿ ಒಂದು ವಿಚಾರ ಹೇಳುತ್ತೇನೆ. ಕತೆ ಎಂಬುದು ಕಿವಿಯನ್ನು ಅವಲಂಬಿಸಿರುತ್ತದೆಯೇ ಹೊರತು ಕಣ್ಣನಲ್ಲ. ಕಿವಿ ತುಂಬ ಸೂಕ್ಷ್ಮ ಮತ್ತು ಕ್ರಿಯೇಟಿವ್‌. ನಮ್ಮ ಕಿವಿಯಲ್ಲಿ ರಾಜ ಎಂಬ ಶಬ್ದ ಬಿದ್ದ ತಕ್ಷಣ ನೂರಾರು, ಸಾವಿರಾರು ರಾಜರ ಕಲ್ಪನೆ ಮೂಡುತ್ತದೆ. ಆದರೆ, ಕಣ್ಣಿಗೆ ಕಾಣಲು ಸಾಧ್ಯವಾಗುವುದು ಒಬ್ಬನೇ ರಾಜನ ಚಿತ್ರವನ್ನು. ರೈಲಿನ ಶಬ್ದ ಕೇಳಿದರೆ ಅದು ಹೇಗಿರುತ್ತದೋ ಎಂಬ ಕಲ್ಪನೆ ಮನಸ್ಸಿನಲ್ಲಿ ಮೂಡಲಾರಂಭಿಸುತ್ತದೆ. ಅದನ್ನು ನೋಡಿದ ಕೂಡಲೇ ಕಲ್ಪನೆಗೆ ತೆರೆ ಬೀಳುತ್ತದೆ. ಕತೆಗಳು ಕಲ್ಪನೆಯನ್ನು ವಿಸ್ತರಿಸುವಂಥವು. ಕಥನಗಳು ಕತೆಗಳಾಗುವುದು, ಕತೆಗಳು ಕಥನಗಳಾಗುವುದು ಒಂದು ವಿಸ್ಮಯದ ಪ್ರಕ್ರಿಯೆ. ಹಾಗಾಗಿಯೇ ಕತೆಯ ಶತ್ರು ಅಕ್ಷರ! ಕೇಳಬೇಕಾದ ಕತೆಯನ್ನು ಓದಲು ಶುರುಮಾಡಿದ ಕೂಡಲೇ ಕಥನಶಕ್ತಿ ಕಡಿಮೆಯಾಗುತ್ತದೆ. ಕಣ್ಣಿಗೆ ಕಾಣುವುದನ್ನು ಮಾತ್ರ ನೋಡಲು ಬಯಸುತ್ತದೆ, ಅದನ್ನೇ ನಂಬುತ್ತದೆ. ಆದರೆ ಕಿವಿ ಹಾಗಲ್ಲ , ಅದಕ್ಕೆ ನಂಬಿಕೆಯ ಹಂಗಿಲ್ಲ. ಭೀಷ್ಮ ಬಾಣಗಳ ಮೇಲೆ ಮಲಗಿದ್ದಾನೆ ಎಂಬ ಒಂದೇ ಮಾತು ನಮ್ಮ ಮನಸ್ಸಿನಲ್ಲಿ ರುದ್ರಭೂಮಿಯ ಚಿತ್ರವನ್ನು ತರುತ್ತದೆ. ಆದರೆ, ಅಕ್ಷರ ಹಾಗಲ್ಲ, ಪಂಪನೇ ಇದನ್ನು ಹೇಳಿದ್ದಾನೆ, ಸುಳಿವ ಶಾಸನದಂತೆ ಎಂಬಂತೆ. ಧೃತರಾಷ್ಟ್ರನಿಗೆ ಸಂಜಯ ಕಿವಿಯ ಮೂಲಕ ಕಣ್ಣಾಗುತ್ತಾನೆ. ಕಿವಿ ನಂಬಲಾಗದ್ದನ್ನು ಕಣ್ಣಿನ ಮೂಲಕ ತೋರಿಸುವ ಕ್ರಮ. ಒಂದು ಹೊಸ ಬೆಳವಣಿಗೆ. ಮ್ಯಾಕ್‌ಬೆತ್‌ ನಾಟಕದಲ್ಲಿ ಷೇಕ್ಸ್‌ಪಿಯರ್‌ ಆಸ್ತಿಯನ್ನು ಮೂರು ವಿಭಾಗಗಳನ್ನಾಗಿ ಮಾಡಿ ತೋರಿಸುವ ಸಂದರ್ಭವನ್ನು ತರುತ್ತಾನೆ. ಆಗ ಹೆಣ್ಣುಮಕ್ಕಳು ಒಪ್ಪದೆ ಅದರ ನಕ್ಷೆ ತೋರಿಸು ಎನ್ನುತ್ತಾರೆ. ಅದು “ಕಣ್ಣಿನ ಪ್ರವೇಶ’ವಾದ ಸಂದರ್ಭ!

ದಕ್ಷಿಣ ಆಫ್ರಿಕಾದಲ್ಲಿ ಅದ್ಭುತವಾದ ಜಾನಪದೀಯ ಕಥನ ಪರಂಪರೆಗಳು ಇದ್ದವು. ಮನೆಯಿಂದ ಮನೆಗೆ, ಹಳ್ಳಿಯಿಂದ ಹಳ್ಳಿಗೆ ಸಂಪರ್ಕ ಸಾಧಿಸುವ ಕಥನ ತಂತು ಅದು. ಇಂಥಲ್ಲಿ ನಮ್ಮ ಅಸ್ತಿತ್ವ ಸಾಧಿಸಲು ಸಾಧ್ಯವಿಲ್ಲವೆಂದು ಅರಿತ ಬ್ರಿಟಿಷರು ಅಲ್ಲಿ ಶಾಲೆಗಳನ್ನು ತೆರೆದರು. ಶಾಲೆಗಳೆಂದರೆ ಅಕ್ಷರ ಪರಂಪರೆಯ ಆರಂಭ. ಕಥನ ಕಲೆ ಹಿಂದುಳಿಯುತ್ತದೆ. ವೋಲೆ ಸೋಯಿಂಕಾನಂಥ ನೈಜೀರಿಯಾದ ಚಿಂತಕನಿಗೆ  ಪ್ರಶಸ್ತಿಯನ್ನು ಕೊಟ್ಟರು ಬೇರೆ! ಅದಿರಲಿ.

ನಮ್ಮಲ್ಲಿ ಕಥನ ಕೌಶಲದ ಎರಡು ಧಾರೆಗಳನ್ನು ನಾನು ಗಮನಿಸಿದ್ದೇನೆ. ಒಂದು ಬಯಲಾಟ ಪರಂಪರೆಯಲ್ಲಿ. ಇನ್ನೊಂದು ರಾಜಕಾರಣದಲ್ಲಿ ! ಒಂದು ವಾಕ್ಯವನ್ನು ಎಷ್ಟು ರೀತಿಯಲ್ಲಿಯೂ ಹೇಳುತ್ತಾರೆ ರಾಜಕಾರಣಿಗಳು. ಕಥೆ ಕಟ್ಟುವುದು ಎಂದರೆ ಇದೇ ಅಲ್ಲವೇನು!

ಇದೊಂದು ಕಥೆ ನೋಡಿ-
ಒಮ್ಮೆ ಭೂಮಿ ಹಿಡಿ ಮಣ್ಣಿನಂತೆ ಇತ್ತಂತೆ. ಅದನ್ನು ನೋಡಿದ ದೇವಲೋಕದ ಮಕ್ಕಳು ತಮ್ಮ ತಂದೆ-ತಾಯಿಗಳಿಗೆ ಆಡಿ ಬರುತ್ತೇವೆ ಎಂದು ಹೇಳಿ ಹೋದರು. “ಸೂರ್ಯ ಉದಯವಾಗುವ ಮೊದಲು ಮರಳಿ ಬನ್ನಿ’ ಎಂದರು ತಂದೆ-ತಾಯಿ. ಇಲ್ಲಿನ ನೀರು, ಬಂಡೆ, ಮರಳು ಮುಂತಾದವನ್ನು ನೋಡುತ್ತ, ಆಡುತ್ತ ಮೈಮರೆತವರಿಗೆ ಸೂರ್ಯನ ಉದಯವಾದದ್ದೇ ತಿಳಿಯಲಿಲ್ಲ. ಅವರಿಗೆ ಮರಳಿ ಹೋಗಲಾಗಲಿಲ್ಲ. ಅವರು ಬೇರುಬಿಟ್ಟು ಮರಗಳಾದರು. ಅವರ ನಿಟ್ಟುಸಿರು ಗಾಳಿಯಾಯಿತು. ಅವರ ಅಳು ಮಳೆಯಾಯಿತು.

(ಉದಯವಾಣಿ ಬಳಗದ ಕಾರ್ಯಕ್ರಮದ ಉಪನ್ಯಾಸ ಮತ್ತು ಅನೌಪಚಾರಿಕ ಮಾತುಕತೆಯ ಸಂಗ್ರಹರೂಪ)
ನಿರೂಪಣೆ : ನ. ರವಿಕುಮಾರ

ಚಂದ್ರಶೇಖರ ಕಂಬಾರ

Advertisement

Udayavani is now on Telegram. Click here to join our channel and stay updated with the latest news.

Next