ಹಾವೇರಿ: ಜಿಲ್ಲೆಯ ರೈತರ ಬೆಳೆವಿಮೆ ಬಾಕಿ ಪ್ರಕರಣಗಳನ್ನು ಒಂದು ವಾರದೊಳಗಾಗಿ ಇತ್ಯರ್ಥಪಡಿಸಿ ರೈತರ ಖಾತೆಗಳಿಗೆ ಹಣ ಜಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಬ್ಯಾಂಕ್ ಹಾಗೂ ವಿಮಾ ಕಂಪನಿಗಳ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ 2015ರಿಂದ 2018ರ ವರೆಗಿನ ಬೆಳೆ ವಿಮೆ ಪಾವತಿ ಬಾಕಿ ಪ್ರಕರಣಗಳ ಕುರಿತಂತೆ ನಡೆಸಿದ ರೈತ ಸಂಘಟನೆಗಳು, ಬ್ಯಾಂಕ್ ಹಾಗೂ ವಿಮಾ ಕಂಪನಿಯ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಬೆಳೆ ವಿಮೆ ಪ್ರಕರಣಗಳಲ್ಲಿ ರೈತರಿಗೆ ವಂಚನೆ ಪ್ರಕರಣಗಳು ನಡೆದರೆ ಅಂತಹ ವಿಮಾ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತರು ವಿಮೆ ತುಂಬಲು ಶ್ರಮಪಡುತ್ತಾರೆ, ನಾವು ನೀಡುವ ಪರಿಹಾರ
ಏನೂ ಅಲ್ಲ. ನ್ಯಾಯೋಚಿತವಾದ ಪರಿಹಾರ ರೈತರಿಗೆ ತಲುಪಬೇಕು. ರೈತರ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಬೇಡಿ. ಸಭೆಯಲ್ಲಿ ಸರಿಯಾದ ಮಾಹಿತಿ ಇಲ್ಲದೆ ಬರಬೇಡಿ. ಗಂಭೀರವಾದ ಸಮಸ್ಯೆಗಳನ್ನು ಚರ್ಚಿಸುವಾಗ ಪೂರ್ಣಮಾಹಿತಿಯೊಂದಿಗೆ ಬರಬೇಕು. ರೈತರ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಗಣಿಸಬೇಕು ಎಂದು ಆದೇಶಿಸಿದರು. ಬೆಳೆವಿಮೆ ಪ್ರಕರಣಗಳಲ್ಲಿ ಬ್ಯಾಂಕ್ ಖಾತೆ ವಿವರ ಸಿಕ್ಕಿಲ್ಲ, ಆಧಾರ್ ಜೋಡಣೆಯಾಗಿಲ್ಲ ಎಂಬ ಯಾವ ನೆಪ ಹೇಳಬಾರದು. ನೋಂದಣಿ ಸಂದರ್ಭದಲ್ಲೇ ಎಲ್ಲ ಮಾಹಿತಿಯನ್ನು ಪಡೆಯಲಾಗುತ್ತದೆ. ಪರಿಹಾರ ನೀಡುವಾಗ ಕನಿಷ್ಟ ದಾಖಲೆಗಳನ್ನು ಪರಿಗಣಿಸಿ ಸರಳ ಮಾನದಂಡ ಅನುಸರಿಸಿ ಬೆಳೆವಿಮೆ ಮಾಡಿಸಿದ ರೈತರ ಖಾತೆಗೆ ಹಣ ಜಮೆಮಾಡುವಂತೆ ಅಧಿ ಕಾರಿಗಳಿಗೆ ತಾಕೀತು ಮಾಡಿದರು.
2015-16ನೇ ಸಾಲಿನ ಮುಂಗಾರು ಹಂಗಾಮಿನ ಅಕ್ಕಿ-ಭತ್ತ ಇಳುವರಿ ವ್ಯತ್ಯಾಸದ ಪ್ರಯುಕ್ತ ಬಿಡುಗಡೆಯಾಗಿರುವ 19.31ಕೋಟಿ ರೂ. ಹಣದಲ್ಲಿ ಈವರೆಗೆ 15.30 ಕೋಟಿ ರೂ. ಮಾತ್ರ ರೈತರ ಖಾತೆಗೆ ಜಮೆಯಾಗಿದೆ. ಬಾಕಿ 4.01 ಕೋಟಿ ರೂ. ಗಳನ್ನು ತ್ವರಿತವಾಗಿ ಜಮೆ ಮಾಡಲು ತಾಕೀತು ಮಾಡಿದರು. 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಾಕಿ ಉಳಿದ ಅಕ್ಕಿ-ಭತ್ತದವ್ಯತ್ಯಾಸದ ಪರಿಹಾರ ಬಿಡುಗಡೆ ಕುರಿತಂತೆ 3820 ರೈತರಿಗೆ 10.54 ಕೋಟಿ ರೂ. ಬಾಕಿ ಬರಬೇಕಾಗಿದೆ. ಆದರೆ, ವಿಮಾ ಕಂಪನಿ ನೋಂದಣಿ ನಿಯಮದಂತೆ ಈಗಾಗಲೇ ಹಣ ಪಾವತಿಸಲಾಗಿದೆ. ಅಕ್ಕಿ-ಭತ್ತದ ವ್ಯತ್ಯಾಸದಂತೆ ಬಾಕಿ ಹಣ ಜಮೆ ಮಾಡಲುಸಾಧ್ಯವಿಲ್ಲ. 2015-16ನೇ ಸಾಲಿನಂತೆ ಸರ್ಕಾರವೇ ವ್ಯತ್ಯಾಸದ ಹಣ ಪಾವತಿಸಬೇಕು ಎಂದು ಯುನಿವರ್ಸಲ್ ಸೊಂಪೊ ವಿಮಾ ಕಂಪನಿಯ ಪ್ರತಿನಿಧಿ ಮಹದೇವ ಸಭೆಗೆ ತಿಳಿಸಿದರು.
ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿಗಳು ರೈತರಿಗೆ ಭರವಸೆ ನೀಡಿದರು. 2016-17ನೇ ಸಾಲಿನ ಮುಂಗಾರು ಮತ್ತು ಹಿಂಗಾರು, ಬೇಸಿಗೆ ಹಂಗಾಮು ಮತ್ತು 2017-18ನೇ ಸಾಲಿನಲ್ಲಿ ರೈತ ಬ್ಯಾಂಕ್ ಸೇವಾ ಖಾತೆ ಹಾಗೂ ಆಧಾರ್ ಸಂಖ್ಯೆ ಜೋಡಣೆ ಹೊಂದಾಣಿಕೆಯಾಗದೆ 244 ಪ್ರಕರಣಗಳಲ್ಲಿ ವಿಮಾ ಪಾವತಿಯಾಗಿ, ಈ ಪ್ರಕರಣವನ್ನು ಒಂದು ವಾರದೊಳಗೆ ಪರಿಶೀಲಿಸಿ ಸರಿಪಡಿಸಿ ವಿವರ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು ಹಾಗೂ 2018ನೇ ಸಾಲಿನ ಮುಂಗಾರು ಹಂಗಾಮಿನ 66 ಕೋಟಿ ರೂ. ಬೆಳೆ ವಿಮೆ ಪರಿಹಾರ ಮೊತ್ತವನ್ನು ತ್ವರಿತವಾಗಿ ರೈತರ ಖಾತೆಗೆ ಬಿಡುಗಡೆಗೊಳಿಸಲು ಆದೇಶಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಜಿಲ್ಲಾ ಸಾಂಖೀಕ ಅಧಿಕಾರಿ ಮಣ್ಣವಡ್ಡರ, ಕೃಷಿ ವಿಮಾ ಸಂಸ್ಥೆಯಸಹಾಯಕ ಪ್ರಾದೇಶಿಕ ವ್ಯವಸ್ಥಾಪಕಿ ಡಾ| ಎಚ್.ಜಯಂತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಭೋಗಿ, ಲೀಡ್‌ಬ್ಯಾಂಕ್ ವ್ಯವಸ್ಥಾಪಕರು, ಯುನಿವರ್ಸಲ್ ಸೊಂಪೊ ಕಂಪನಿ, ಶ್ರೀರಾಮ ಜನರಲ್ ಇನ್ಸುರೆನ್ಸ್ ಕಂಪನಿ, ಓರೆಂಟಲ್ ಇನ್ಸುರೆನ್ಸ್ ಕಂಪನಿ, ಯುನೈಟೆಡ್ ಇಂಡಿಯಾ ಇನ್ಸುರೆನ್ಸ್, ಭಾರತೀಯ ಸ್ಟೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಐಸಿಐಸಿ ಬ್ಯಾಂಕ್, ಕರ್ಪೋರೇಷನ್ ಬ್ಯಾಂಕ್, ತಹಶೀಲ್ದಾರ್ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ಇದ್ದರು