Advertisement

ಗೌರಿ ಹತ್ಯೆ ಖಂಡಿಸಿ ಪ್ರತಿರೋಧ ಪ್ರತಿಭಟನೆ

11:57 AM Oct 03, 2017 | Team Udayavani |

ಬೆಂಗಳೂರು: ಪ್ರಸ್ತುತ ಮಹಾತ್ಮಗಾಂಧಿ ಜಯಂತಿಯನ್ನು ಸಂಭ್ರಮದಿಂದ ಆಚರಿಸುವ ಪರಿಸ್ಥಿತಿ ಇಲ್ಲ. ಗೌರಿ ಲಂಕೇಶ್‌ ಹತ್ಯೆ ನಡೆದು ಒಂದು ತಿಂಗಳಾದರೂ ಹಂತಕರಿನ್ನೂ ಪತ್ತೆಯಾಗಿಲ್ಲ. ಕೂಡಲೇ ತನಿಖೆ ಚುರುಕುಗೊಳಿಸುವಂತೆ “ನಾನು ಗೌರಿ ಬಳಗ’ ಒತ್ತಾಯಿಸಿದೆ.

Advertisement

ನಗರದ ಮೌರ್ಯ ವೃತ್ತ ಸಮೀಪದ ಗಾಂಧಿ ಪ್ರತಿಮೆ ಬಳಿ ನಾನು ಗೌರಿ ಬಳಗದ ನೇತೃತ್ವದಲ್ಲಿ ಕರ್ನಾಟಕ ಲೇಖಕಿಯರ ಸಂಘ, ಕೋಮುಸೌಹಾರ್ದ ವೇದಿಕೆ, ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿರೋಧ ಪ್ರತಿಭಟನೆ ನಡೆಸಿ, “ಗಾಂಧಿಯಿಂದ ಗೌರಿವರೆಗೂ ವಿಚಾರವಂತರ ಹತ್ಯೆಗಳು ನಡೆಯುತ್ತಲೇ ಇವೆ. ಸರ್ಕಾರಗಳು ಹಂತಕರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ವಿಫ‌ಲವಾಗಿವೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೌರಿ ಲಂಕೇಶ್‌ ಹತ್ಯಾ ವಿರೋಧಿ ವೇದಿಕೆ ಸಂಚಾಲಕಿ ಕೆ.ನೀಲಾ ಮಾತನಾಡಿ, ಸಂಘ ಪರಿವಾರದ ಸಂಪರ್ಕದಲ್ಲಿ ಇರುವವರೇ ಗೌರಿ ಲಂಕೇಶ್‌ ಹತ್ಯೆ ನಡೆಸಿದ್ದಾರೆ. ಹಂತಕರನ್ನು ಪತ್ತೆ ಮಾಡಿ, ಅವರ ಹಿಂದಿರುವ ಶಕ್ತಿಯನ್ನು ದಮನ ಮಾಡದಿದ್ದರೆ, ವಿಚಾರವಾದಿಗಳ ಹತ್ಯೆ ಸರಣಿ ಬೆಳೆಯುತ್ತಲೇ ಹೋಗುತ್ತದೆ. ವ್ಯಕ್ತಿಗಳ ಹತ್ಯೆಯಿಂದ ವಿಚಾರಗಳ ಅಂತ್ಯ ಸಾಧ್ಯವಿಲ್ಲ.

ಅದು ಹೆಮ್ಮರವಾಗಿ ಬೆಳೆಯುತ್ತದೆ ಎಂಬುದನ್ನು ಹಂತಕರು ಮೊದಲು ತಿಳಿಯಬೇಕು. ಎಸ್‌ಐಟಿ ತನಿಖೆ ತೀವ್ರಗೊಳಿಸಿ ಗೌರಿ ಲಂಕೇಶ್‌ ಹಂತಕರನ್ನು ಬಂಧಿಸಬೇಕು. ವಿಚಾರವಾದಿಗಳು, ಕೋಮುಸೌಹಾರ್ದತೆಗೆ ಮಹತ್ವ ನೀಡುವವರ ವಿರುದ್ಧ ದ್ವೇಷ ಹರಡುವ, ಹತ್ಯೆಗೆ ಪ್ರಚೋದಿಸುವವನ್ನು ಬಂಧಿಸಿ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಮಾತನಾಡಿ, ದಾಬೋಲ್ಕರ್‌, ಕಲಬುರ್ಗಿ, ಗೌರಿಲಂಕೇಶ್‌ ಸೇರಿದಂತೆ ನಾಲ್ಕು ಮಂದಿ ವಿಚಾರವಾದಿಗಳನ್ನು ಹತ್ಯೆ ಮಾಡಿದ ಹಂತಕರನ್ನು ಪತ್ತೆ ಮಾಡಬೇಕು. ಒಬ್ಬ ಗೌರಿಯ ಹತ್ಯೆಯಿಂದ ದುಷ್ಕರ್ಮಿಗಳು ಸಂಭ್ರಮಿಸಿರಬಹುದು. ಆದರೆ, ಹತ್ಯೆಯ ದಿನದಿಂದಲೇ ಸಾವಿರಾರು ಗೌರಿಯರು ಹುಟ್ಟಿಕೊಂಡಿದ್ದಾರೆ. ಸತ್ಯ, ಅಹಿಂಸೆ, ಸಹಿಷ್ಣುತೆಗೆ ಇಡೀ ವಿಶ್ವಕ್ಕೆ ಆದರ್ಶರಾದ ಗಾಂಧಿ ಹುಟ್ಟಿದ ರಾಷ್ಟ್ರದಲ್ಲಿ ಹಂತಕರು, ಹತ್ಯೆಗೆ ಸುಪಾರಿ ಕೊಟ್ಟವರು ಹುಟ್ಟಿಕೊಂಡಿರುವುದು ದೊಡ್ಡ ಅವಮಾನ.

Advertisement

ಇವರಿಂದ ವಿಶ್ವದ ಮುಂದೆ ಭಾರತ ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.  ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್‌ ಮಾತನಾಡಿ, ಲಿಂಗಾಯತ ಧರ್ಮದ ಪರವಾಗಿದ್ದರಿಂದ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಅಂತೆಯೇ ತಮ್ಮ ಪತ್ರಿಕೆಯಲ್ಲಿ ಅದೇ ವಿಚಾರವಾಗಿ ಲೇಖನ ಬರೆದಿದ್ದರಿಂದ ಗೌರಿ ಹತ್ಯೆಯಾಗಿದೆ ಎಂಬ ಸಂಶಯವಿದೆ. ಎಸ್‌ಐಟಿ ತನಿಖೆ ಚುರುಕುಗೊಳಿಸಿ ಹಂತಕರನ್ನು ಬುಡಸಮೇತ ಕಿತ್ತುಹಾಕಬೇಕು. ಸರ್ಕಾರ ತನಿಖೆ ಚುರುಕುಗೊಳಿಸಲಿ ಎಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಶರೀಫ‌, ನಗರಗೆರೆ ರಮೇಶ್‌, ಶರತ್‌ ಅನಂತಮೂರ್ತಿ, ಗೌರಮ್ಮ, ಜ್ಯೋತ್ಸಾ, ಜಿ.ಎನ್‌.ನಾಗರಾಜ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next