ಕುಂದಾಪುರ: ದೊಡ್ಡ ಹುದ್ದೆಗಳಿದ್ದೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಕುರಿತು ತನಿಖೆಯಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಆಗ್ರಹಿದ್ದಾರೆ.
ಅವರು ಸೋಮವಾರ ಇಲ್ಲಿನ ಶಾಸ್ತ್ರಿ ಸರ್ಕಲ್‌ನಲ್ಲಿ ಪಕ್ಷಾಧ್ಯಕ್ಷರಾದ ಬಳಿಕ ಮೊದಲ ಭೇಟಿಗಾಗಿ ಕುಂದಾಪುರ ಬಿಜೆಪಿ ವತಿಯಿಂದ ಸ್ವಾಗತ ಸ್ವೀಕರಿಸಿ ಮಾಧ್ಯಮದ ಜತೆ ಮಾತನಾಡಿದರು.
ಅನರ್ಹರಾಗಿ ಕೋರ್ಟ್ ಮೆಟ್ಟಿಲೇರಿದ ಅಷ್ಟೂ ಶಾಸಕರ ರಾಜೀನಾಮೆಯ ಹಿಂದಿನ ಕಾರಣಗಳನ್ನು ತನಿಖೆ ನಡೆಸಲಿ. ಆಗ ಎಲ್ಲವೂ ಹೊರಬರುತ್ತದೆ. ಅವರ ರಾಜೀನಾಮೆಗಿದ್ದ ಕಾರಣ, ಅವರಿಗೆ ಒಡ್ಡಿದ ಆಮಿಷ ಇತ್ಯಾದಿಗಳೆಲ್ಲ ಹೊರಬರಲಿ. ಆಗ ಬಿಎಸ್‌ವೈ ಅವರ ಆಡಿಯೋದ ಅಸಲಿ ಕಥೆ ಕೂಡ ಹೊರಬೀಳಲಿದೆ ಎಂದರು.
ಆಡಿಯೊ ಕುರಿತು ಪ್ರತ್ಯೇಕ ತನಿಖೆ ನಡೆಯಲಿದೆಯೇ ಎಂದು ಕೇಳಿದಾಗ, ಪ್ರತ್ಯೇಕ ತನಿಖೆ ಅಗತ್ಯವಿಲ್ಲ. ಅದನ್ನು ಹೊರ ಹಾಕಿದವರು ಬಿಜೆಪಿ ಕಾರ್ಯಕರ್ತರು ಅಲ್ಲ. ಅದು ಪಕ್ಷದ ಸಭೆಯಾಗಿದ್ದರೂ ಆಂತರಿಕ ಸಭೆಯಲ್ಲ. ಬಿಜೆಪಿ ಕಾರ್ಯಕರ್ತರ ಸೋಗಿನಲ್ಲಿ ಯಾರೋ ಬಂದು ಕುಳಿತು ಇಂತಹ ಕೃತ್ಯ ಎಸಗಿದ್ದಾರೆ ಎಂದರು. ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಖಚಿತವೇ ಎಂದು ಕೇಳಿದಾಗ, ಅದು ನ್ಯಾಯಾಲಯದ ತೀರ್ಮಾನದ ಬಳಿಕ ನಿರ್ಧಾರವಾಗಲಿದೆ. ಅಲ್ಲಿಯವರೆಗೆ ಯಾವುದೂ ಖಚಿತವಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು ಮೊದಲಾದವರು ಇದ್ದರು.