Advertisement
ಈ ಹಿಂದೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ವರಿಷ್ಠರ ಸೂಚನೆಯಂತೆ ರಾಜೀನಾಮೆ ಸಲ್ಲಿಸಿದ್ದ ಎಚ್.ವಿ.ಮಂಜುನಾಥ, ಬಳಿಕ ಬದಲಾದ ರಾಜಕೀಯ ಕಾರಣಗಳಿಂದ ವರಿಷ್ಠರ ಸೂಚನೆಯಂತೆ ಕೊನೆ ಗಳಿಗೆಯಲ್ಲಿ ತಮ್ಮ ರಾಜೀನಾಮೆ ವಾಪಸ್ ಪಡೆದು ಜಿಪಂ ಅಧ್ಯಕ್ಷರಾಗಿ ಮುಂದುವರಿದಿದ್ದರು. ಆದರೆ ಇದೀಗ ಮತ್ತೆ ರಾಜೀನಾಮೆ ಪಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಜಿಪಂ ಅಧ್ಯಕ್ಷ ಮಂಜುನಾಥ ತಮ್ಮ ರಾಜೀನಾಮೆ ಪತ್ರವನ್ನು ಸರ್ಕಾರದ ಪ್ರದಾನ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
Related Articles
Advertisement
ಆದರೆ ಲೋಕಸಭಾ ಚುನಾವಣೆ ಘೊಷಣೆಯಾದ ಕಾರಣ ಮಂಜುನಾಥ ಅಧ್ಯಕ್ಷರಾಗಿ ಮುಂದುವರಿದಿದ್ದರು. ಜೂ. 24ರಂದು ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ ಹಾಗೂ ಉಪಾಧ್ಯಕ್ಷೆ ನಿರ್ಮಲ ಮುನಿರಾಜುಗೆ ರಾಜೀನಾಮೆ ನೀಡುವಂತೆ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಂಸದರ, ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲೆಯ ಹಾಲಿ, ಮಾಜಿ ಶಾಸಕರ ಸಮ್ಮುಖದಲ್ಲಿ ಸೂಚಿಸಿದ್ದರು. ಇದೀಗ ಮತ್ತೆ ಪಕ್ಷದ ವರಿಷ್ಠರು ರಾಜೀನಾಮೆ ಪಡೆದಿದ್ದಾರೆ.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ: ಎಚ್.ವಿ.ಮಂಜುನಾಥ ಜಿಪಂ ಅಧ್ಯಕ್ಷರಾಗಿ ವಿಶೇಷವಾಗಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಹಾಗೂ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ವಿಶೇಷ ಒತ್ತು ಕೊಟ್ಟಿದ್ದರು. ಹಾಗಾಗಿಯೆ ಕಳೆದ ವರ್ಷ 31ನೇ ಸ್ಥಾನದಲ್ಲಿದ್ದ ಜಿಲ್ಲೆಯ ಫಲಿತಾಂಶ 20ನೇ ಸ್ಥಾನಕ್ಕೆರಿತ್ತು. ಈ ವರ್ಷವು ಕೂಡ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆಗೆ ನಿರಂತರವಾಗಿ ಸಭೆಗಳನ್ನು ನಡೆಸಿ ಶೈಕ್ಷಣಿಕ ಗುಣಮಟ್ಟಕ್ಕೆ ಒತ್ತು ಕೊಟ್ಟಿದ್ದರು.
ಜಿಪಂ ಅಧ್ಯಕ್ಷ ಮಂಜುನಾಥ ಹೇಳಿದ್ದೇನು?: ಬದಲಾದ ರಾಜಕೀಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಪಕ್ಷ ಸೂಚಿಸಿದ ಹಿನ್ನೆಲೆಯಲ್ಲಿ ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದೆ. ಈ ಅವಧಿಯಲ್ಲೂ ಈ ಸ್ಥಾನದಿಂದ ನಿರ್ವಹಿಸಬೇಕಾದ ಕರ್ತವ್ಯವನ್ನು ಆತ್ಮಸಾಕ್ಷಿಗನುಗುಣವಾಗಿ ನಿರ್ವಹಿಸಿದ್ದೇನೆ. ಆ ತಾತ್ಕಾಲಿಕ ಅವಧಿ ಮುಗಿದಿದ್ದು, ಜಿಪಂ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದೇನೆ ಎಂದು ಜಿಪಂ ಅಧ್ಯಕ್ಷ ಮಂಜುನಾಥ ತಿಳಿಸಿದರು.
ಅವಕಾಶ ಕಲ್ಪಿಸಿದ ಪಕ್ಷದ ನಿರ್ದೇಶನಗಳಿಗೆ ಬದ್ಧರಾಗಿ ನಡೆಯುವುದು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಾರ್ವಜನಿಕ ಜೀವನದ ನೀತಿ ಸಂಹಿತೆಯ ಭಾಗವೆಂದು ಭಾವಿಸುತ್ತೇನೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಯಶಸ್ವಿಯಾಗಿ ಅಧಿಕಾರ ವಿಕೇಂದ್ರೀಕರಣದ ಆಶಯಗಳು ಈಡೇರಬೇಕು. ಜನಪ್ರತಿನಿಧಿಗಳಿಗೆ ಇನ್ನೂ ಹೆಚ್ಚಿನ ಸ್ವಾತಂತ್ರ, ಅನುದಾನ ಮತ್ತು ಸಮಯ ಇರಬೇಕೆಂಬ ನನ್ನ ಈ ಹಿಂದಿನ ಅನಿಸಿಕೆಯನ್ನು ಮತ್ತೂಮ್ಮೆ ಪುನರುಚ್ಚರಿಸಬಯಸುತ್ತೇನೆ. ಈ ಹಿನ್ನೆಲೆಯಲ್ಲಿ ತಜ್ಞರ ಮಾರ್ಗದರ್ಶನದಲ್ಲಿ ಸಾರ್ವಜನಿಕ ಚರ್ಚೆ ನಡೆಯಲಿ ಎಂದರು.
ಮಂಚೇನಹಳ್ಳಿ ಪ್ರಕಾಶ್‌ಗೆ ಅಧ್ಯಕ್ಷ ಸ್ಥಾನ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅರ್ನಹ ಶಾಸಕ ಡಾ.ಕೆ.ಸುಧಾಕರ್ ಪರ ಗುರುತಿಸಿಕೊಂಡಿರುವ ಜಿಲ್ಲೆಯ ಮಂಚೇನಹಳ್ಳಿ ಜಿಪಂ ಸದಸ್ಯ ಪಿ.ಎನ್.ಪ್ರಕಾಶ್‌ಗೆ ಅಧ್ಯಕ್ಷ ಸ್ಥಾನ ನೀಡಿ ಅವರನ್ನು ಪಕ್ಷದಲ್ಲಿಯೆ ಉಳಿಸಿಕೊಳ್ಳುವ ತಂತ್ರ ರೂಪಿಸಿ ಮಂಜುನಾಥರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್‌ಗೆ ಗೆಲುವು ಪ್ರತಿಷ್ಠೆಯಾಗಿರುವುದರಿಂದ ಜತೆಗೆ ಆರಂಭದಿಂದಲೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಪಿ.ಎನ್.ಪ್ರಕಾಶ್‌ಗೆ ಜಿಪಂ ಅಧ್ಯಕ್ಷ ಸ್ಥಾನ ಕೊಡುವ ಭರವಸೆಯನ್ನು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮತ್ತಿತರ ನಾಯಕರು ನೀಡಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದು, ಜಿಪಂ ಅಧ್ಯಕ್ಷರ ಆಯ್ಕೆಯಲ್ಲಿ ವಿನೂತನ ಬೆಳವಣಿಗೆ ಇದಾಗಿದೆ.