Advertisement

ಕೊಟ್ಟ ಮಾತ್ರಕ್ಕೆ ರಾಜೀನಾಮೆ ಅಂಗೀಕಾರವಾಗಲ್ಲ

11:06 PM Dec 10, 2019 | Lakshmi GovindaRaj |

ಬೆಂಗಳೂರು: “ಸಿದ್ದರಾಮಯ್ಯ ರಾಜೀನಾಮೆ ನೀಡಿದ ತಕ್ಷಣ ಅದು ಅಂಗೀಕಾರವಾಗುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನಗಳು ರಾಜೀನಾಮೆ ಅಂಗೀಕಾರವಾಗುವವರೆಗೆ ಏನೂ ಹೇಳಲು ಆಗುವುದಿಲ್ಲ. ಹೈಕಮಾಂಡ್‌ ರಾಜೀನಾಮೆ ಅಂಗೀಕರಿಸಿದ ನಂತರವಷ್ಟೇ ಬೇರೆ ನಾಯಕತ್ವದ ಬಗ್ಗೆ ಚರ್ಚೆಯಾಗಲಿದೆ’ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲರ ವಿಶ್ವಾಸ ಪಡೆದು ಪಕ್ಷ ಸಂಘಟಿಸಿದಾಗ ಮುಂದೆ ನಮಗೆ ಗೆಲ್ಲುವ ಅವಕಾಶ ಸಿಗಲಿದೆ.

Advertisement

ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಕುರಿತು ಹೈಕಮಾಂಡ್‌ಗೆ ಪತ್ರ ಬರೆದು ಪಕ್ಷ ಸಂಘಟನೆಗಾಗಿ ಕೆಲವು ಸಲಹೆ ನೀಡುವುದಾಗಿ ಹೇಳಿದರು. ಉಪಚುನಾವಣೆ ಸೋಲಿಗೆ ನೈತಿಕ ಹೊಣೆಹೊತ್ತು ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕ ರಾಜೀನಾಮೆ ಸಲ್ಲಿಸಿದ್ದು, ಅವರ ನಡೆಯನ್ನು ಸ್ವಾಗತಿಸುತ್ತೇನೆ. ಅವರು ರಾಜೀನಾಮೆ ನೀಡಿದ ಮಾತ್ರಕ್ಕೆ ಆ ಸ್ಥಾನ ಖಾಲಿ ಇದೆ ಎಂದು ಭಾವಿಸಬೇಕಿಲ್ಲ. ಆ ಬಗ್ಗೆ ಹೈಕಮಾಂಡ್‌ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಿದೆ ಎಂದರು.

ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳುವ ವಿಚಾರ ಸೋಲಿಗೆ ಕಾರಣ ಇರಬಹುದು. ಹಿಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹುಡುಕಿ ಬಂದಿತ್ತು. ಆಗ ಉಸ್ತುವಾರಿಯಾಗಿದ್ದ ದಿಗ್ವಿಜಯ್‌ ಸಿಂಗ್‌ ಬಳಿಯೇ ಬೇಡ ಅಂದಿದ್ದೆ. ಈಗ ದಿನೇಶ್‌ ಗುಂಡೂರಾವ್‌ ಅವರ ರಾಜೀನಾಮೆ ಮೊದಲು ಅಂಗೀಕಾರವಾಗಲಿ. ಆ ಮೇಲೆ ಮುಂದಿನ ಮಾತು ಎಂದು ಮಾರ್ಮಿಕವಾಗಿ ನುಡಿದರು. ವೀರೇಂದ್ರ ಪಾಟೀಲರ ಬಳಿಕ ಲಿಂಗಾಯತ ಸಮುದಾಯ, ಎಸ್‌.ಎಂ.ಕೃಷ್ಣ ಅವರ ಬಳಿಕ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ ನಿಂದ ದೂರವಾಗಿವೆ ಎಂಬ ಭಾವನೆ ಜನರಲ್ಲಿ ಇನ್ನೂ ಇದೆ ಎಂದು ಹೇಳಿದರು.

ಎಲ್ಲಾ ಪಕ್ಷಗಳೂ ಆತ್ಮಾವಲೋಕನ ಮಾಡಿಕೊಳ್ಳಲಿ
ಬೆಂಗಳೂರು: “ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಸೋಲಾಗಿದ್ದು, ಆತ್ಮಾವಲೋಕನ ಮಾಡಿ ಕೊಳ್ಳ ಬೇಕಿದೆ’ ಎಂದು ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು. ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಈ ಉಪಚುನಾವಣೆ ನಾಯಕರ ನಡುವೆ ಇಲ್ಲವೇ ಎರಡು ಪಕ್ಷಗಳ ನಡುವೆ ನಡೆದ ಉಪಚುನಾವಣೆಯಲ್ಲ. ಹಲವು ಮೌಲ್ಯ ಆಧಾರಿತವಾಗಿ ಎದುರಾಗಿದ್ದ ಉಪಚುನಾವಣೆ ಆಗಿತ್ತು.

ಈ ಹಿಂದಿನ ವಿಧಾನಸಭಾ ಅಧ್ಯಕ್ಷರು ಶಾಸಕರನ್ನು ಅನರ್ಹಗೊಳಿಸಿದ್ದು, ಪಕ್ಷಾಂತರ ವಿಷಯ ಇತರೆ ಅಂಶಗಳು ಉಪಚುನಾವಣಾ ವಿಷಯಗಳಾಗಿದ್ದವು. ಪ್ರಜಾಪ್ರಭುತ್ವ ಗಟ್ಟಿಯಾಗಬೇಕಾದರೆ ಜನ ವಿಶೇಷ ತೀರ್ಪು ನೀಡುವ ನಿರೀಕ್ಷೆಯಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಆಸಕ್ತಿ ಇರುವ ಎಲ್ಲಾ ಪಕ್ಷಗಳೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

Advertisement

ವಾಮಮಾರ್ಗ: ಜನರ ಮನಸ್ಸನ್ನು ಮಲಿನಗೊಳಿಸಲು ವಾಮಮಾರ್ಗದ ಪ್ರಯತ್ನ ನಡೆಸಿರುವುದು ಕಾಣುತ್ತಿದೆ. ಇಷ್ಟಾದರೂ ಚುನಾವಣಾ ಆಯೋಗ ಮೂಕಪ್ರೇಕ್ಷಕ ವಾಗಿತ್ತು. ವ್ಯವಸ್ಥೆ ಮೇಲೆಯೇ ನಿರಾಸೆ ಮೂಡುವ ಬೆಳವಣಿಗೆಯಾಗಿದೆ. ಹೀಗಾಗಿ ಎಲ್ಲಾ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ, ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಬಗ್ಗೆ ಹೈಕ ಮಾಂಡ್‌ ತೀರ್ಮಾನ ಕೈಗೊಳ್ಳಲಿದೆ ಎಂದಷ್ಟೇ ಹೇಳಿದರು.

ಈ ಫ‌ಲಿತಾಂಶ ನಿರೀಕ್ಷಿಸಿರಲಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಅನೈತಿಕವಾಗಿ ನಡೆದ ಉಪಚುನಾವಣೆಯಲ್ಲಿ ಅನೈತಿಕ ದಾರಿಯಲ್ಲಿ ಗೆಲುವು ಸಾಧಿಸಲಾಗಿದೆ. ನಾಯಕರಾದ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ವಿಚಾರದಲ್ಲಿ ನೈತಿಕತೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸೋಲಿನ ಬಗ್ಗೆ ಆತ್ಮಾವಲೋಕನ ನಡೆಯಬೇಕಿದೆ ಎಂದು ತಿಳಿಸಿದರು.

ಸೋಲಿಗೆ ಸಿದ್ದು, ದಿನೇಶ್‌ ಮಾತ್ರ ಹೊಣೆ ಅಲ್ಲ
ಶಿರಸಿ: “ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ ಗುಂಡೂರಾವ್‌ ರಾಜೀನಾಮೆ ನೀಡಿದ್ದಾರೆ. ಆದರೆ, ಚುನಾವಣೆ ಎಂದ ಮೇಲೆ ಸಾಮೂಹಿಕ ಜವಾಬ್ದಾರಿ ಇರುತ್ತದೆ. ಇದನ್ನು ಅವರಿಬ್ಬರ ಮೇಲೆ ಹಾಕಲು ಸಾಧ್ಯವಿಲ್ಲ’ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಉಪಚುನಾವಣೆಯಲ್ಲಿ ಬಿಜೆಪಿಯ 12 ಶಾಸಕರು ಆಯ್ಕೆಯಾಗಿರುವುದರಿಂದ ಶಾಸನ ಸಭೆಯಲ್ಲಿ ಬಿಜೆಪಿಗೆ ಬಹುಮತ ಲಭಿಸಿದೆ. ಸ್ಥಿರ ಸರ್ಕಾರ ನೀಡುವ ಮೂಲಕ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next