Advertisement

ಕುಮಟಳ್ಳಿಗೆ ಅನ್ಯಾಯವಾದ್ರೆ ರಾಜೀನಾಮೆ ನೀಡುವೆ

11:21 PM Feb 22, 2020 | Lakshmi GovindaRaj |

ಬೆಳಗಾವಿ: “ಅಥಣಿ ಶಾಸಕ ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನನಗೆ ಬಹಳ ನೋವಾಗಿದೆ. ನನಗೆ ಅನ್ಯಾಯವಾಗಿದೆ ಎಂದು ಅವರು ಒಂದು ಮಾತು ಹೇಳಿದರೆ ನಾನು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಹೇಳುವ ಮೂಲಕ ನೀರಾವರಿ ಸಚಿವ ರಮೇಶ ಜಾರಕಿಹೊಳಿ ಮತ್ತೆ ಕುಮಟಳ್ಳಿ ಪರ ಬ್ಯಾಟ್‌ ಬೀಸಿದ್ದಾರೆ.

Advertisement

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಕುಮಟಳ್ಳಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ. ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇನೆ ಎಂದರು. “ನಾನು ಯಾವತ್ತೂ ಸೇಡಿನ ರಾಜಕೀಯ ಮಾಡುವುದಿಲ್ಲ. ನೀರಾವರಿ ಖಾತೆಯಲ್ಲಿ ಪಕ್ಷ, ಜಾತಿ ಬರುವುದಿಲ್ಲ. ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇನೆ. ನಮ್ಮ ಭಾಗಕ್ಕೆ ಅನುಕೂಲವಾಗುವಂತೆ ಕೆಲಸ ಮಾಡುತ್ತೇನೆ’ ಎಂದರು.

ನೀರಾವರಿ ಕೇಳಿರಲಿಲ್ಲ: “ನಾನು ನೀರಾವರಿ ಖಾತೆ ಬೇಕೆಂದು ಬೇಡಿಕೆ ಇಟ್ಟಿರಲಿಲ್ಲ. ಇಲ್ಲಿಯವರೆಗೆ ಉತ್ತರ ಕರ್ನಾಟಕದ ಜನರೇ ನೀರಾವರಿ ಮಂತ್ರಿಯಾಗಿದ್ದರು. ಈ ನಿಟ್ಟಿನಲ್ಲಿ ನಾನೂ ಸಹ ನೀರಾವರಿ ಸಚಿವನಾಗಿದ್ದೇನೆ. ಹೈಕಮಾಂಡ್‌, ನೀರಾವರಿ ಖಾತೆ ಕೊಟ್ಟಿದ್ದು ಸಂತಸ ತಂದಿದೆ. ವಿರೋಧಿಗಳು ನನಗೆ ಈ ಖಾತೆ ನಿಭಾಯಿಸಲು ಅಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಅವರಿಗೆ ತಕ್ಕ ಉತ್ತರ ನೀಡುವಂತೆ ಕೆಲಸ ಮಾಡುತ್ತೇನೆ’ ಎಂದು ತಿರುಗೇಟು ನೀಡಿದರು.

ಡಿಸಿಸಿ ಬ್ಯಾಂಕ್‌ ಚುನಾವಣೆ: ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಜಾರಕಿಹೊಳಿ ಹಾಗೂ ಕತ್ತಿ ಬಣ ಸೇರಿ ಕೆಲಸ ಮಾಡಲಿದೆ. ಬ್ಯಾಂಕಿನ ಹಾಲಿ ಅಧ್ಯಕ್ಷ ರಮೇಶ ಕತ್ತಿ, ಉಮೇಶ ಕತ್ತಿ, ತಾವು, ಬಾಲಚಂದ್ರ ಜಾರಕಿಹೊಳಿ ಸೇರಿ ಚುನಾವಣೆ ಮಾಡುತ್ತೇವೆ. ಕತ್ತಿ ಸಹೋದರರು, ನಾವು ಒಂದೇ ಎಂದರು. ಡಿಸಿಸಿ ಬ್ಯಾಂಕ್‌ ಚುನಾವಣೆ ವಿಚಾರದಲ್ಲಿ ಬದಲಾವಣೆ ತರುವ ಬಗ್ಗೆ ಬಾಲಚಂದ್ರ ಹಾಗೂ ಉಮೇಶ ಕತ್ತಿ ಸೇರಿ ತೀರ್ಮಾನ ಮಾಡಲಿದ್ದಾರೆ ಎಂದರು.

ಸವದಿ ಜತೆ ಭಿನ್ನಾಭಿಪ್ರಾಯ ಇಲ್ಲ
ಬೆಳಗಾವಿ: “ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲಾ ಒಗ್ಗಟ್ಟಾ ಗಿದ್ದೇವೆ. ನಮ್ಮ ನಡುವೆ ಭಿನ್ನಾಭಿಪ್ರಾ ಯವಿದೆ ಎನ್ನುವುದು ಕೇವಲ ಊಹಾ ಪೋಹ’ ಎಂದು ಅಥಣಿ ಶಾಸಕ ಮಹೇಶ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸವದಿ ರಾಜಕೀಯ ಭವಿಷ್ಯಕ್ಕಾಗಿ ಕುಮಟಳ್ಳಿ ಅವರನ್ನು ಬಲಿ ಕೊಡಲಾಗುತ್ತಿದೆ ಎಂಬ ಸುದ್ದಿಗೆ ಯಾವುದೇ ಆಧಾರವಿಲ್ಲ. ನಮ್ಮ ನಡುವೆ ಯಾವುದೇ ಅಸಮಾಧಾನ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು. ನಾವಿಬ್ಬರೂ ಬೆಂಗಳೂರಿನಲ್ಲಿ ಸಾಕಷ್ಟು ಸಮಯ ಚರ್ಚೆ ಮಾಡಿದ್ದೇವೆ. ಅದೇ ರೀತಿ, ಶುಕ್ರವಾರವೂ ಅಥಣಿಯ ಗಚ್ಚಿನಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಾಗಿ ಹೇಳಿದರು.

ಕುಮಟಳ್ಳಿಗೆ ಏನಾದ್ರೂ ಅನ್ಯಾಯ ಆಗಿದೆ ಎಂದು ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆಂಬ ಸಚಿವ ರಮೇಶ ಜಾರಕಿಹೊಳಿ ಮಾತಿಗೆ ಪ್ರತಿಕ್ರಿಯಿಸಿದ ಅವರು, ಜೀವನದಲ್ಲಿ ಹಣ ಗಳಿಸಬಹುದು. ಆದರೆ, ಒಬ್ಬರ ವಿಶ್ವಾಸ ಗಳಿಸುವುದು ಕಠಿಣ. ಅದನ್ನು ನಾನು ಪಡೆದಿದ್ದೇನೆ. ಅದು ನನ್ನ ಭಾಗ್ಯ ಎಂದರು. ಡಿಸಿಸಿ ಬ್ಯಾಂಕ್‌ ಚುನಾವಣೆ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸವದಿ ಚುನಾವಣೆಗೆ ನಿಲ್ಲುತ್ತಾರೆ. ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಿ ಜಗದೀಶ ಶೆಟ್ಟರ ಇದ್ದರೆ ನಾನು ಇದ್ದ ಹಾಗೆ. ಶೆಟ್ಟರ ಒಳ್ಳೆಯವರು. ಒಂದು ವೇಳೆ ಶೆಟ್ಟರ ಆಗುವುದಿಲ್ಲ ಎಂದರೆ ನಾನು ಜಿಲ್ಲಾ ಉಸ್ತುವಾರಿ ಕೇಳುತ್ತೇನೆ.
-ರಮೇಶ ಜಾರಕಿಹೊಳಿ, ನೀರಾವರಿ ಸಚಿವ

ಮಹೇಶ ಕುಮಟಳ್ಳಿ ಅವರನ್ನು ಬಿಜೆಪಿಗೆ ಕರೆ ತಂದಿರುವುದು ರಮೇಶ ಜಾರಕಿಹೊಳಿ. ಹೀಗಾಗಿ, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಹೇಳುವುದು ಸಹಜ. ಆದರೆ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಸರ್ಕಾರದ ಭದ್ರತೆ ಹಾಗೂ ಅಭದ್ರತೆ ಯಾರ ಹೇಳಿಕೆಗಳ ಮೇಲೂ ನಿಂತಿಲ್ಲ. ಹೀಗಾಗಿ, ಸುಸೂತ್ರವಾಗಿ ಸರ್ಕಾರ ನಡೆಸಲು ಮಾಧ್ಯಮಗಳು ಬಿಡಬೇಕು. ಅವರಿಗೆ ಬೆಳಗಾವಿ ಜಿಲ್ಲೆಯ ಜವಾಬ್ದಾರಿ ನೀಡಿದರೆ, ನಾನು ಬಿಡಲು ರೆಡಿ ಇದ್ದೇನೆ.
-ಜಗದೀಶ ಶೆಟ್ಟರ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next