Advertisement

ದುಂದು ವೆಚ್ಚ ನಿಯಂತ್ರಣಕ್ಕೆ ಶೇಷನಾಸ್ತ್ರ !

01:02 PM Mar 10, 2018 | |

ಮಂಗಳೂರು: ಭಾರತದಲ್ಲಿ ಮಹಾಚುನಾವಣೆಗಳೆಂದರೆ ಅಬ್ಬರದ ಪ್ರಚಾರದ ಪರಾಕಾಷ್ಠೆ ಎಂಬ ಹೋಲಿಕೆ ಇತ್ತು. 1951-52ರ ಪ್ರಪ್ರಥಮ ಲೋಕಸಭೆ- ವಿಧಾನಸಭಾ ಚುನಾವಣೆಯಿಂದಲೇ ಇದರ ಆರಂಭ. ಸ್ವತಂತ್ರ ಭಾರತದ ಮೊದಲ ಚುನಾವಣೆ ಸಂದರ್ಭ ಪ್ರಚಾರಕ್ಕೆ ಆಡಳಿತ ಯಂತ್ರವೇ ಮಹತ್ವ ನೀಡಿತ್ತು.

Advertisement

ಮುಂದಿನ ಚುನಾವಣೆಗಳಲ್ಲಿ ಪ್ರಚಾರ ಕಾರ್ಯ ಅಬ್ಬರವನ್ನು ಪಡೆಯಿತು. ಲೋಕಸಭೆ- ವಿಧಾನಸಭೆಗಳಲ್ಲಂತೂ ‘ಮಿತಿಮೀರಿದ’ ಖರ್ಚು ಚುನಾವಣೆಯ ಸ್ವರೂಪದ ಮೇಲೆಯೇ ಬಗೆಬಗೆಯ ವಿಶೇಷವಾಗಿ ಅನಪೇಕ್ಷಣೀಯ ಪ್ರಭಾವಗಳನ್ನು ಬೀರಲು ಆರಂಭಿಸಿತು. ಅಭ್ಯರ್ಥಿಗಳಿಗೆ ಆಯಾ ಪಕ್ಷಗಳು ನೀಡುವ ಚುನಾವಣಾ ವೆಚ್ಚದ ಮೊತ್ತವನ್ನು ಮೀರಿ; ಆ ಅಭ್ಯರ್ಥಿಗಳು ವೈಯಕ್ತಿಕವಾಗಿ ಮೊತ್ತವನ್ನು ಸಂಚಯಿಸುವ ಪ್ರವೃತ್ತಿ ಉಂಟಾಯಿತು.

ಚುನಾವಣಾ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅನೇಕ ಪ್ರಾಮಾಣಿಕ ಅಭ್ಯರ್ಥಿಗಳು ಟಿಕೆಟ್‌ ನಿರಾಕರಿಸಿದ ಪ್ರಸಂಗಗಳೂ ಸಂಭವಿಸಿದವು. ಪ್ರಚಾರ ಭಾಷಣಗಳು ನಡುರಾತ್ರಿ ಕಳೆದು ಮುಂಜಾನೆ ತನಕ ಸಾಗಿದ ಪ್ರಸಂಗಗಳೂ ಸಂಭವಿಸಿದವು. ಮೈಕ್‌ ಹಾವಳಿ ಬೇರೆ! ರಸ್ತೆಗಳಲ್ಲೂ ಬರೆಹಗಳು ರಾರಾಜಿಸಿದವು. ಈ ದುಂದುವೆಚ್ಚಕ್ಕೆ ಕಡಿವಾಣ ಹಾಕಿದವರು ಪ್ರಧಾನ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್‌. ಶೇಷನ್‌. ಚುನಾವಣಾ ಪ್ರಕ್ರಿಯೆಗಳ ಕಾನೂನುಗಳನ್ನು ಅವರು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರು. ಚೆನ್ನೈ ಮೂಲದ ಟಿ.ಎನ್‌. ಶೇಷನ್‌ ಅವರು ಐಎಎಸ್‌ ಅಧಿಕಾರಿ ಆಗಿದ್ದವರು. 1990-96ರ ಅವಧಿಯಲ್ಲಿ ಭಾರತದ ಚೀಫ್‌ ಎಲೆಕ್ಷನ್‌ ಕಮಿಷನರ್‌ ಆಗಿ ಅವರು ಕ್ರಾಂತಿಕಾರಕ ಸ್ವರೂಪದಲ್ಲಿ ಚುನಾವಣಾ ನೀತಿ ನಿಯಮಗಳನ್ನು ಅನುಷ್ಠಾನಿಸಿದರು. ಅಭ್ಯರ್ಥಿಗಳು ನಿಗದಿತ ಮೊತ್ತವನ್ನಷ್ಟೇ ವ್ಯಯಿಸಬೇಕು; ಪ್ರತೀ ವೆಚ್ಚದ ಬಗ್ಗೆ ಆಯೋಗಕ್ಕೆ ಲೆಕ್ಕ ನೀಡಬೇಕು. ಮೀರಿದಲ್ಲಿ ಅಥವಾ ತಪ್ಪಿದಲ್ಲಿ ಅನರ್ಹತೆಯ ಶಿಕ್ಷೆ ಅನಿವಾರ್ಯವಾಗಿತ್ತು.

ಅಂದಿನಿಂದ ಇಂದಿನವರೆಗೂ ಈ ನಿಯಮಾವಳಿ ವಸ್ತುಶಃ ಪಾಲನೆಯಾಗುತ್ತಿದೆ. ಚುನಾವಣಾ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಯುತ್ತಿದೆ ಎಂಬುದನ್ನು ಅಂತಾರಾಷ್ಟ್ರೀಯ ವೀಕ್ಷಕರು ಕೂಡ ಶ್ಲಾಘಿಸುತ್ತಿದ್ದಾರೆ. ಸಂವಿಧಾನದತ್ತ ಕಾನೂನನ್ನು ಪರಿಪೂರ್ಣವಾಗಿ ಅನುಷ್ಠಾನಿಸುವ ಅಧಿಕಾರಿಯ ಬದ್ಧತೆ ಮತ್ತು ಇಚ್ಛಾಶಕ್ತಿಯಿಂದ ನ್ಯಾಯ ಒದಗಣೆ ಸಾಧ್ಯ ಎಂಬ ಮಾತಿಗೆ ಪರಿಪೂರ್ಣ ನಿದರ್ಶನ ಟಿ.ಎನ್‌. ಶೇಷನ್‌.

ಲೆಕ್ಕ ಕೊಡಬೇಕು!
ನಿರ್ದಿಷ್ಟ ಅಭ್ಯರ್ಥಿಯೋರ್ವರನ್ನು ಕಾರ್ಯಕರ್ತರು ‘ಜಿಪುಣ’ ಎಂದೇ ಹಿಂದಿನಿಂದ ಉಲ್ಲೇಖೀಸುತ್ತಿದ್ದರು. ಒಂದು ಚುನಾವಣೆಯ ಸಂದರ್ಭದಲ್ಲಿ ಆ ಅಭ್ಯರ್ಥಿಯು ಕಾರ್ಯಕರ್ತರಿಗೆ ಕುಡಿಯಲು ಫ್ರಿಜ್ ನೀರಿನ ಬದಲು ಬಾವಿಯ ನೀರನ್ನೇ ಒದಗಿಸಿದರು. ತಂಪು ನೀರು ಕೇಳಿದ ಕಾರ್ಯಕರ್ತರಿಗೆ ‘ಇಲ್ಲ, ತಂಪು ನೀರು ಕೊಟ್ಟರೆ ಚುನಾವಣಾ ಆಯೋಗಕ್ಕೆ ಲೆಕ್ಕ ಕೊಡಬೇಕಲ್ಲ’ ಅನ್ನುತ್ತಿದ್ದರು! 

Advertisement

 ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next