ಕಾನ್ಪುರ: ತರಕಾರಿ ಬೆಲೆ ಕುಸಿದರೆ ರೈತರು ತರಕಾರಿಗಳನ್ನು ರಸ್ತೆಗೆ ಸುರಿದು ಪ್ರತಿಭಟಿಸುವುದು ಮಾಮೂಲು. ಕೆಲವೊಮ್ಮೆ ಹಾಲಿಗೆ ಸೂಕ್ತ ಬೆಲೆ ನೀಡುತ್ತಿಲ್ಲ ಎಂದು ಹಾಲನ್ನು ಮೋರಿಗೆ ಸುರಿದು ಪ್ರತಿಭಟಿಸಿದ ಉದಾಹರಣೆಗಳೂ ಇವೆ. ಆದರೆ ಗ್ರಾಮವೊಂದಕ್ಕೆ ಏನೇನೂ ಮೂಲ ಸೌಕರ್ಯವಿಲ್ಲ ಎಂದಾದರೆ ಹೇಗೆ ಪ್ರತಿಭಟಿಸಬೇಕು? ಈ ಪ್ರಶ್ನೆಗೆ ಉತ್ತರವಾಗಿ ನಿಲ್ಲುವುದು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಸಿಮ್ಮರಣ್‌ಪುರ ಗ್ರಾಮದ ಜನ. ಸಿಮ್ಮರಣ್‌ಪುರ ಎಂದಿದ್ದ ಗ್ರಾಮದ ಹೆಸರನ್ನು ಗ್ರಾಮಸ್ಥರೇ ಸೇರಿ ‘ಪಾಕ್ ಆಕ್ರಮಿತ ಕಾಶ್ಮೀರ’ (ಪಿಒಕೆ) ಎಂದು ಬದಲಿಸುವ ಮೂಲಕ ಪ್ರತಿಭಟಿಸುತ್ತಿದ್ದಾರೆ!
ದೌಲತ್‌ಪುರ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಸಿಮ್ಮರಣ್‌ಪುರ ಅಕ್ಷರಶಃ ಕುಗ್ರಾಮ. ಇಲ್ಲಿ ವಿದ್ಯುತ್, ಕುಡಿಯುವ ನೀರು, ಸಮರ್ಪಕ ರಸ್ತೆ, ಶಾಲೆ, ಆಸ್ಪತ್ರೆ, ಔಷಧಾಲಯ ಸೇರಿ ಯಾವೊಂದು ಸೌಲಭ್ಯವೂ ಇಲ್ಲ.
800 ಮಂದಿ ವಾಸವಿರುವ ಗ್ರಾಮದಲ್ಲಿ ಇರುವುದು ಒಂದೇ ಒಂದು ಕೈ ಪಂಪ್. ಅದೂ ಕೂಡ ನೀರೆತ್ತುವುದು ನಿಲ್ಲಿಸಿ ಎಂಟು ವರ್ಷಗಳು ಕಳೆದಿವೆ! ಹೀಗಾಗಿ ಇದ್ದೊಂದು ಬೋರ್‌ವೆಲ್ ಜಾನುವಾರುಗಳನ್ನು ಕಟ್ಟುವ ಮತ್ತು ಮಕ್ಕಳ ಆಟದ ವಸ್ತುವಾಗಿದೆ.
ಇದರಿಂದ ಬೇಸತ್ತ ಗ್ರಾಮಸ್ಥರು ಇತ್ತೀಚೆಗೆ ‘ಅಭಿವೃದ್ಧಿಯಾಗದ ಗ್ರಾಮದ ಹೆಸರನ್ನು ಬದಲಿಸದೆ ವಿಧಿಯಿಲ್ಲ’ ಎಂಬ ಭಿತ್ತಿಪತ್ರಗಳನ್ನು ಮನೆಗಳಿಗೆ ಅಂಟಿಸಿದ್ದರು. ‘ನಾವು ಪಿಒಕೆ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇವೆ. ಅಲ್ಲಿ ಜನ ಯಾವುದೇ ಸೌಲಭ್ಯವಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರಂತೆ. ನಮ್ಮ ಸ್ಥಿತಿ ಕೂಡ ಅವರಿಗಿಂತ ಭಿನ್ನವಾಗಿಲ್ಲ. ಹೀಗಾಗಿ ಗ್ರಾಮಕ್ಕೆ ನೀರು, ವಿದ್ಯುತ್, ಸಮರ್ಪಕ ರಸ್ತೆ ಬರುವವರೆಗೂ ಗ್ರಾಮವನ್ನು ‘ಪಾಕ್ ಆಕ್ರಮಿತ ಕಾಶ್ಮೀರ’ ಎಂಬ ಹೆಸರಿನಿಂದ ಕರೆಯಲು ತೀರ್ಮಾನಿಸಿದ್ದೇವೆ,’ ಎನ್ನುತ್ತಾರೆ ಮುಖಂಡ ಸೋನು ಯಾದವ್.
‘2008ರ ಗ್ರಾ.ಪಂ ಚುನಾವಣೆ ವೇಳೆ ವಿದ್ಯುತ್ ಕಂಬಗಳ ನ್ನೇನೋ ನೆಟ್ಟರು. ಆದರೆ ಈವರೆಗೂ ಅವುಗಳಿಗೆ ವೈರ್ ಎಳೆಯು ವವರು ದಿಕ್ಕಿಲ್ಲ. ಗ್ರಾಮದ ಪಕ್ಕದಲ್ಲೇ ಅತಿ ದೊಡ್ಡ ವಿದ್ಯುತ್ ಘಟಕವಿದ್ದರೂ 70 ವರ್ಷಗಳಿಂದ ಗ್ರಾಮ ಕತ್ತಲಲ್ಲಿರುವುದೇ ದುರಂತ,’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.