Advertisement

ನಗರಸಭೆ ಎದುರು ನಿವಾಸಿಗಳ ಪ್ರತಿಭಟನೆ

01:33 PM Feb 28, 2017 | Team Udayavani |

ಹರಿಹರ: ನಗರದ 27ನೇ ವಾರ್ಡ್‌ನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದು, ಸೋಮವಾರ ವಾರ್ಡ್‌ ನಿವಾಸಿಗಳು ಖಾಲಿ ಕೊಡ ಹಿಡಿದು ನಗರಸಭೆ ಎದುರು ಪ್ರತಿಭಟನೆ ನಡೆಸಿದರು. ಪೂರ್ವ ನಿಗದಿಯಂತೆ ಬೆಳಿಗ್ಗೆ 11ಕ್ಕೆ ನಗರಸಭೆ ಬಜೆಟ್‌ ಅಧಿವೇಶನ ಆರಂಭವಾಗಬೇಕಿತ್ತು,

Advertisement

ಆದರೆ ಅಷ್ಟರಲ್ಲಿ ಖಾಲಿ ಕೊಡ ಹಿಡಿದು ಆಗಮಿಸಿದ ನಗರದ ಶ್ರೀಕಾಂತ ಟಾಕೀಸ್‌ ಸಮೀಪದ ಮೋಚಿ ಕಾಲೋನಿ ನಿವಾಸಿಗಳು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ, ಅಧ್ಯಕ್ಷರು, ಪೌರಾಯುಕ್ತರ ವಿರುದ್ಧ ಘೋಷಣೆ ಕೂಗಿದರು. ನೇತೃತ್ವ ವಹಿಸಿದ್ದ ನಿವಾಸಿ ಜಿ.ಮಂಜುನಾಥ್‌ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ವಾಡ್‌ ìನಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ.

ನಗರವ ವಿವಿಧ ಪ್ರದೇಶಗಳಿಗೆ ವಾರಕ್ಕೆ, ಹದಿನೈದು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದರೂ ನಮ್ಮ ಪ್ರದೇಶ ಮಾತ್ರ ಕಡೆಗಣಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು. ನದಿ ನೀರು ಪೂರೈಸದಾಗದಿದ್ದರೆ ಟ್ಯಾಂಕರ್‌ ನಿಂದಲಾದರೂ ತಪ್ಪದೇ ನೀರು ಪೂರೈಸುವುದಾಗಿ ಅಧಿಧಿಕಾರಿಗಳು ಹೇಳುತ್ತಾರಾದರೂ ನಮ್ಮ ಪ್ರದೇಶಕ್ಕೆ ಒಮ್ಮೆಯೂ ಟ್ಯಾಂಕರ್‌ ನೀರು ಪೂರೈಸಿಲ್ಲ.

ನಾವು ಮತ ನೀಡಿ ಗೆಲ್ಲಿಸಿದ ವಾರ್ಡ್‌ನ ಸದಸ್ಯರಂತೂ ನಮ್ಮೆಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಜನರು ಕುಡಿವ ನೀರಿಗಾಗಿ ಪರಿತಪಿಸುತ್ತಿದ್ದರೂ ಅವರು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರಾದ ಬಿ.ರೇವಣಸಿದ್ದಪ್ಪ ಹಾಗೂ ವಾಮನಮೂರ್ತಿ ಬಂದು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಇದಕ್ಕೆ ಜಗ್ಗದ ಪ್ರತಿಭಟನಕಾರರ ಜನಸೇವೆಗಾಗಿಯೇ ಇದ್ದರೂ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂಧಿಸದ ಜನಪ್ರತಿನಿಧಿಗಳು, ಅಧಿಕಾರಿಗಳು ನಮಗೆ ಬೇಕಾಗಿಲ್ಲ ಎಂದು ಧಿಕ್ಕಾರ ಕೂಡಿದರು. 

Advertisement

ಕೊನೆಗೆ ಅಧ್ಯಕ್ಷೆ ಆಶಾ ಮರಿಯೋಜಿರಾವ್‌ ಆಗಮಿಸಿ, ನದಿಯಲ್ಲಿ ನೀರು ಬತ್ತಿದೆ, ಅಂತರ್‌ ಜಲವೂ ಕ್ಷೀಣಿಸಿ, ಕೊಳವೆ ಬಾವಿ ನೀರು ಕಡಿಮೆಯಾಗಿದೆ. ನಗರದ ಹಲವಾರು ಪ್ರದೇಶಗಳಿಗೆ ನಗರಸಭೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

ಮಂಗಳವಾರದಿಂದ ನಿಮ್ಮ ವಾರ್ಡ್‌ಗೂ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುವುದು ಎಂದರು. ಪೌರಾಯುಕ್ತೆ ಎಸ್‌.ಲಕ್ಷಿ ಮಾತನಾಡಿ, ವಿವಿಧೆಡೆ ಕೊಳವೆ ಬಾವಿ ಕೊರೆಸುತ್ತಿದ್ದರೂ ನೀರು ಸಿಗುತ್ತಿಲ್ಲ, ಆದರೂ ಇನ್ನೆರಡು ದಿನಗಳಲ್ಲಿ ನಿಮ್ಮ ವಾರ್ಡ್‌ಗೆ ಭೂಗರ್ಭ ತಜ್ಞರನ್ನು ಕಳಿಸಿ ಅಂತರ್ಜಲ ಪರೀಕ್ಷಿಸಿ, 2 ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಇದರಿಂದ ಸಮಾಧಾನಗೊಂಡ ನಿವಾಸಿಗಳು ಪ್ರತಿಭಟನೆ ಕೈಬಿಟ್ಟರು. ನಿವಾಸಿಗಳಾ ಶಾಹಿದಾ ಬಾನು, ಲಕ್ಷಿ, ಇಮಿಯಾಜ್‌ ಅಹಮದ್‌, ಮಹದೇವಮ್ಮ, ರತ್ನಮ್ಮ, ಸುಧಾ, ಸಕ್ಕುಬಾನು, ನೇತ್ರಾವತಿ, ಮುರುಳಿ, ಗಂಗಮ್ಮ, ರಮೇಶ್‌, ಶಾಂತನ್‌, ಪ್ರಕಾಶ್‌, ಬಸವರಾಜಪ್ಪ, ಶಿವಕುಮಾರ, ಪುಟ್ಟಣ್ಣ, ತೌಸಿಫ್‌, ಬಸವರಾಜ್‌ ಮತ್ತಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next