ಕಾರವಾರ: ನಗರದ ಡಿಸ್ಟಿಲರಿ ರಸ್ತೆಯಲ್ಲಿರುವ ಖಾಸಗಿ ವಸತಿ ಸಮುಚ್ಛಯವೊಂದರಿಂದ ಸಾರ್ವಜನಿಕ ರಸ್ತೆಗೆ ಹರಿಯುತ್ತಿರುವ ಕೊಳಚೆ ನೀರು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆ ಭಾಗದ ನಿವಾಸಿಗಳು ಮಂಗಳವಾರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಹಲವು ತಿಂಗಳಿನಿಂದ ಡಿಸ್ಟಿಲರಿ ರಸ್ತೆಯಲ್ಲಿರುವ ಅಪಾರ್ಟಮೆಂಟ್‍ನಿಂದ ನಿತ್ಯವೂ ಶೌಚ ನೀರು, ಕೊಳಚೆ ನೀರು ಎದುರಿನಲ್ಲಿರುವ ರಸ್ತೆಗೆ ಹರಿದು ಬರುತ್ತಿದೆ. ಇದರಿಂದ ಸುತ್ತಲಿನ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ದುರ್ವಾಸನೆಯಿಂದ ಸುತ್ತಮುತ್ತಲಿನಲ್ಲಿರುವ ಜನರು ವಾಸಿಸಲು ಕಷ್ಟವಾಗಿದೆ ಎಂದು ದೂರಿದರು.
‘ಹಲವು ಬಾರಿ ನಗರಸಭೆಗೆ ಸಮಸ್ಯೆಯ ಬಗ್ಗೆ ದೂರು ನೀಡಲಾಗಿದೆ. ಈವರೆಗೆ ಶಾಶ್ವತ ಕ್ರಮವಾಗಿಲ್ಲ. ಅಪಾರ್ಟಮೆಂಟ್‍ನಲ್ಲಿ ಎಸ್‍ಟಿಪಿ ಘಟಕ ಇರುವುದು ಅನುಮಾನವಿದೆ. ಈ ಬಗ್ಗೆ ಪರಿಶೀಲನೆ ಆಗಬೇಕು.ಕೊಳಚೆ ನೀರಿನಿಂದಾಗಿ ಈ ಭಾಗದ ಜನರು ಉಸಿರಾಟ ಸಮಸ್ಯೆ, ಇನ್ನಿತರ ಆರೋಗ್ಯ ಸಮಸ್ಯೆಗೆ ತುತ್ತಾಗುವಂತಾಗಿದೆ’ ಎಂದು ನಗರಸಭೆ ಸದಸ್ಯ ಮಕ್ಬೂಲ್ ಶೇಖ್ ಆರೋಪಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸ್ಥಳ ಪರಿಶೀಲಿಸಿ, ಸಮಸ್ಯೆ ಅರಿತು
ಅಗತ್ಯ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತ ಚಂದ್ರ ಮೌಳಿ ಹಾಗೂ ಪರಿಸರ ,ಆರೋಗ್ಯ ಪರಿವೀಕ್ಷಕರಿಗೆ ಸೂಚಿಸಲಾಗುವುದು ಎಂದರು.
ಯಾಸಿನ್ ಶೇಖ್, ಸೈಯ್ಯದ್ ಅಖ್ತರ್, ರಾಮಾ ಶಾಸ್ತ್ರಿ, ಜೊತೆಗೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.