ವಿಧಾನ ಪರಿಷತ್: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ದೇಶದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯನ್ನು ಗೃಹಬಂಧನದಲ್ಲಿಟ್ಟಿರುವುದನ್ನು ಸಾಬೀತು ಮಾಡಿದರೆ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆಂದು ಬಿಜೆಪಿ ಸದಸ್ಯ ರವಿಕುಮಾರ್ ಸವಾಲು ಹಾಕಿದ್ದಾರೆ.
ಸಂವಿಧಾನದ ಮೇಲಿನ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಮಾತನಾಡುತ್ತಾ, ಸಿಎಎ ಮತ್ತು ಎನ್‌ಆರ್‌ಸಿಯಿಂದ ಅನೇಕ ಅಹಿತಕರ ಘಟನೆಗಳು ಸಂಭವಿಸುತ್ತಿವೆ. ಅಸ್ಸಾಂ ಮೊದಲಾದ ಭಾಗದಲ್ಲಿ ಲಕ್ಷಕ್ಕೂ ಅಧಿಕ ಜನರನ್ನು ಗೃಹ ಬಂಧನದಲ್ಲಿಡಲಾಗಿದೆ. ಇದರಿಂದ ದೇಶದಲ್ಲಿ ಪ್ರಜಾಸತ್ತಾತ್ಮಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಸಮೀಕ್ಷೆಗಳು ತಿಳಿಸುತ್ತಿವೆ ಎನ್ನುತ್ತಿದ್ದಂತೆ ಸಚಿವ ಸಿ.ಟಿ.ರವಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಸದನಕ್ಕೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಯಾರನ್ನೂ ಗೃಹಬಂಧನದಲ್ಲಿಟ್ಟಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ರವಿಕುಮಾರ್, ದೇಶದಲ್ಲಿ ಯಾರನ್ನೂ ಗೃಹಬಂಧನದಲ್ಲಿ ಇಟ್ಟಿಲ್ಲ. ಯಾರಾದರೂ ಒಬ್ಬರನ್ನು ತೋರಿಸಿದರೆ ಅಥವಾ ಒಬ್ಬರ ಹೆಸರನ್ನು ಹೇಳಿದರೂ ನಾನು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಇಲ್ಲವಾದಲ್ಲಿ ನೀವು ರಾಜೀನಾಮೆ ನೀಡುತ್ತೀರಾ ಎಂದು ಐವಾನ್ ಡಿಸೋಜಾ ಅವರಿಗೆ ಸವಾಲು ಹಾಕಿದರು.
ಮೋದಿ ಬಿರಿಯಾನಿ ತಿನ್ನಲು ಹೋಗುತ್ತಿದ್ದರು: ಸಿ.ಟಿ.ರವಿ ಮಾತನಾಡಿ, ಅಪ್ಪ-ಅಮ್ಮ ಇಲ್ಲದ ಸುದ್ದಿಯನ್ನು ಸದನದಲ್ಲಿ ಪ್ರಸ್ತಾಪಿಸುವುದು ಸರಿಯಲ್ಲ ಮತ್ತು ಸಂವಿಧಾನದ ಮೇಲಿನ ಚರ್ಚೆಗೂ, ಇದಕ್ಕೂ ಸಂಬಂಧವಿಲ್ಲ. ದೇಶದಲ್ಲಿ ಮೋದಿ ಪ್ರಧಾನಿಯಾದ ನಂತರ ಭಾರತಕ್ಕೆ ವಿಶ್ವಮಾನ್ಯತೆ ಲಭಿಸಿದೆ. ಚಾ ಮಾರುತ್ತಿದ್ದ ವ್ಯಕ್ತಿ ಪ್ರಧಾನಿಯಾಗಿರುವುದನ್ನು ಸಹಿಸಲು ಸಾಧ್ಯವಾಗದವರು ಹೀಗೆಲ್ಲ ಹೇಳುತ್ತಿದ್ದಾರೆ ಎನ್ನುತ್ತಿದ್ದಂತೆ ಕಾಂಗ್ರೆಸ್ ಸದಸ್ಯರೊಬ್ಬರು ಎದ್ದು ನಿಂತು ಮೋದಿ ಬಿರಿಯಾನಿ ತಿನ್ನಲು ಹೋಗುತ್ತಿದ್ದರು ಎಂದರು. ಆಗ ಸದನದಲ್ಲಿ ಕೆಲಕಾಲ ಗದ್ದಲವೆದ್ದಿತು.
ಸಭಾಪತಿ ಮಧ್ಯಪ್ರವೇಶಿಸಿ ಗದ್ದಲ ಮಾಡದಂತೆ ಸೂಚನೆ ನೀಡಿದರು. ಸಂವಿಧಾನದ ಕುರಿತ ಚರ್ಚೆಯನ್ನು ಇತಿಮಿತಿಯಲ್ಲಿ ಮಾಡಬೇಕು. ಸಿಎಎ ಕುರಿತಾದ ಅನಾವಶ್ಯಕ ಚರ್ಚೆ ಬೇಡ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸಲಹೆ ನೀಡಿದರು. ಐವಾನ್ ಡಿಸೋಜಾ ಮಾತು ಮುಂದುವರಿಸಿ, ಸಂವಿಧಾನದ ಕುರಿತು ಮಾತನಾಡುವಾಗ ಪೌರತ್ವದ ಕುರಿತು ಮಾತನಾಡಬೇಡ ಎಂದರೆ ಇನ್ನೇನು ಮಾತನಾಡಬೇಕು?.
ಇಂದಿನ ಆಡಳಿತ ವ್ಯವಸ್ಥೆಯಿಂದ ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಪ್ರತ್ಯೇಕ ದೇಶದ ಕೂಗು ಕೇಳಿ ಬರುತ್ತಿದೆ ಎನ್ನು ತ್ತಿದ್ದಂತೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಎದ್ದು ನಿಂತು, ಪ್ರತ್ಯೇಕ ಕಾಶ್ಮೀರದ ಕೂಗನ್ನೇ ಕೇಂದ್ರ ಸರ್ಕಾರ ನಿಲ್ಲಿಸಿಬಿಟ್ಟಿದೆ. ಇನ್ನು ಪ್ರತ್ಯೇಕ ದೇಶದ ಕೂಗು ಕೇಳಲು ಸಾಧ್ಯವೇ?. ಹೀಗೆಲ್ಲ ಸದನದಲ್ಲಿ ಮಾತನಾಡು ವುದು ಸರಿಯಲ್ಲ. ವಿಪಕ್ಷ ನಾಯಕರು ಇದಕ್ಕೆ ಕಡಿವಾಣ ಹಾಕಬೇಕು ಮತ್ತು ಸಭಾಪತಿಗಳು ಈ ಸಂಬಂಧ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಧ್ಯಪ್ರವೇಶಿಸಿ, ಅನಾವಶ್ಯಕ ಗೊಂದಲ ನಿರ್ಮಾಣ ಮಾಡುವುದು ಸರಿಯಲ್ಲ. ದೇಶ ಮತ್ತು ಸಂವಿಧಾನಕ್ಕೆ ಗೌರವ ತರುವ ನಿಟ್ಟಿನಲ್ಲಿ ಮಾತಾಡಬೇಕು. ಸಿಎಎ, ಎನ್‌ಆರ್‌ಸಿಗೆ ಉತ್ತರ ನೀಡಲು ಇದು ರಾಜಕೀಯ ವೇದಿಕೆಯಲ್ಲ. ಬೇರೆ, ಬೇರೆ ವಿಚಾರವನ್ನು ಬೇರೆ, ಬೇರೆ ಸಂದರ್ಭದಲ್ಲಿ ಚರ್ಚೆ ಮಾಡೋಣ. ಈಗ ಚರ್ಚೆ ಸಂವಿಧಾನಕ್ಕೆ ಪೂರಕವಾಗಿರಲಿ ಎಂದು ಸಲಹೆ ನೀಡಿ, ಸುಗಮ ಕಲಾಪಕ್ಕೆ ಅನುವು ಮಾಡಿದರು.