ಬೆಂಗಳೂರು: ಮುಖ್ಯಮಂತ್ರಿ ಬೊಮ್ಮಾಯಿ ಅವರು ದಿಲ್ಲಿಯಲ್ಲಿ ಸಂಪುಟ ರಚನೆಯ ಕಸರತ್ತು ನಡೆಸುತ್ತಿದ್ದರೆ, ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಚಿವಾಕಾಂಕ್ಷಿಗಳು ಭೇಟಿ ಮಾಡಿ, ಸಂಪುಟದಲ್ಲಿ ಅವಕಾಶ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಸೋಮವಾರ ಯಡಿಯೂರಪ್ಪ ಅವರ “ಕಾವೇರಿ’ ನಿವಾಸ ಸಚಿವಾಕಾಂಕ್ಷಿಗಳು ಹಾಗೂ ಅವರ ಬೆಂಬಲಿಗ ರಿಂದ ತುಂಬಿತ್ತು. ಗಂಗಾ ಮತಸ್ಥ ಸಮುದಾಯಕ್ಕೆ ಸೇರಿರುವ ಎನ್.ರವಿಕುಮಾರ್, ಸಾಬಣ್ಣ ತಳವಾರ ಹಾಗೂ ಲಾಲಾಜಿ ಮೆಂಡನ್ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಹುನಗುಂದದ ದೊಡ್ಡನಗೌಡ ಪಾಟೀಲ್, ತೀರ್ಥ ಹಳ್ಳಿಯ ಆರಗ ಜ್ಞಾನೇಂದ್ರ, ರಾಮದುರ್ಗದ ಮಹ ದೇವಪ್ಪ ಯಾದವಾಡ ಅವರು ಬೆಂಬಲಿಗರೊಂದಿಗೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಈ ಬಾರಿ ತಮಗೂ ಸ್ಥಾನ ಕೊಡಿಸುವಂತೆ ಮನವಿ ಮಾಡಿದರು.
ಸಂಪುಟಕ್ಕೆ ನನ್ನನ್ನು ಸೇರಿಸದಿರಲು ಯಾವುದೇ ಕಾರಣ ಇಲ್ಲ. ಯಡಿಯೂರಪ್ಪರಿಗೆ ನನ್ನ ಮೇಲೆ ಅನುಕಂಪ ಇದೆ. ನಾನು ಅವರ ಜತೆ ಜತೆಯಲ್ಲಿ ಬೆಳೆದವನು. ಸಂಘವೂ ನನ್ನನ್ನು ಗುರುತಿಸಲಿದ್ದು, ಈ ಬಾರಿ ಸಚಿವನಾಗುವ ವಿಶ್ವಾಸವಿದೆ.
-ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ
ಸಿಎಂ ಬೊಮ್ಮಾಯಿ ಅವರಿಗೆ ಈಗಾಗಲೇ ಮನವಿ ಮಾಡಿದ್ದೇನೆ. ನನಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ. ಕೇಳುವುದು ನನ್ನ ಧರ್ಮ. ಸಿಗದಿದ್ದರೂ ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ.
-ದೊಡ್ಡನಗೌಡ ಪಾಟೀಲ್, ಹುನಗುಂದ ಶಾಸಕ
ನಾನು ಪಕ್ಷ ನಿಷ್ಠ ಕಾರ್ಯಕರ್ತ. ಸ್ವಾಮೀಜಿಗಳು ನನ್ನ ಪರವಾಗಿ ಬೇಡಿಕೆ ಇಡುವುದರಲ್ಲಿ ತಪ್ಪಿಲ್ಲ. ನಾನು ಹೋರಾಟದ ಮೂಲಕವೇ ಬಂದವನು.-
ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯ
ಸಚಿವ ಸಂಪುಟದ ವಿಚಾರವಾಗಿ ಯಾವುದೇ ಕರೆ ಬಂದಿಲ್ಲ. ಬುಧವಾರ ಅಥವಾ ಗುರುವಾರದೊಳಗೆ ತೀರ್ಮಾನವಾಗಬಹುದು. ಮುಖ್ಯಮಂತ್ರಿಗಳು ದಿಲ್ಲಿಯಲ್ಲಿದ್ದು, ಎರಡನೇ ಬಾರಿ ಸಚಿವರಾಗುವ ಬಗ್ಗೆ ಕಾದು ನೋಡೋಣ.
-ಬಿ.ಸಿ. ಪಾಟೀಲ್, ಮಾಜಿ ಸಚಿವ