Advertisement

ಭರ್ತಿಯಾಗುವತ್ತ ಸಾಗಿದ ಜಲಾಶಯಗಳು

12:48 PM Jun 16, 2018 | |

ಮೈಸೂರು: ಕೇರಳದ ವೈನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ 36 ಸಾವಿರ ಕ್ಯೂಸೆಕ್‌ಗಿಂತಲೂ ಅಧಿಕ ಪ್ರಮಾಣದಲ್ಲಿ ಒಳ ಹರಿವು ಬರುತ್ತಿದ್ದು, ಜಲಾಶಯದ ಭರ್ತಿಗೆ ಇನ್ನು ಕೇವಲ 4.30 ಅಡಿಗಳಷ್ಟೇ ಬಾಕಿ ಇದೆ.

Advertisement

2284.00 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಕಬಿನಿ ಜಲಾಶಯದ ನೀರಿನಮಟ್ಟ 2279.70 ಅಡಿಗಳಿಗೆ ತಲುಪಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ 35 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. 15.67 ಟಿಎಂಸಿ ಲೈವ್‌ ಸ್ಟೋರೇಜ್‌ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 13.03 ಟಿಎಂಸಿ ನೀರು ಸಂಗ್ರಹವಾಗಿದೆ.

ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ 12031 ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, ನೀರಿನಮಟ್ಟ 2249.30 ಅಡಿ ಇದ್ದು, 0.98 ಟಿಎಂಸಿ ನೀರು ಸಂಗ್ರಹವಿತ್ತು. ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವುದರಿಂದ ಜೂನ್‌ ತಿಂಗಳ ಎರಡನೇ ವಾರದಲ್ಲೇ ಜಲಾಶಯ ಭರ್ತಿಯತ್ತ ಸಾಗಿದೆ.

124.80 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಕೆಆರ್‌ಎಸ್‌ ಜಲಾಶಯಕ್ಕೂ 38 ಸಾವಿರ ಕ್ಯೂಸೆಕ್‌ಗಳಿಗೂ ಹೆಚ್ಚಿನ ಒಳಹರಿವು ಬರುತ್ತಿದೆ. ಕಾವೇರಿ ನದಿಯಿಂದ 29715 ಕ್ಯೂಸೆಕ್‌, ಹೇಮಾವತಿಯಿಂದ 1215ಕ್ಯೂಸೆಕ್‌, ಲಕ್ಷ್ಮಣತೀರ್ಥ ನದಿಯಿಂದ 7670ಕ್ಯೂಸೆಕ್‌ ಸೇರಿದಂತೆ ಒಟ್ಟಾರೆ 38600 ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, ಜಲಾಶಯದ ಮಟ್ಟ ಸದ್ಯ 94 ಅಡಿಗಳಿಗೆ ತಲುಪಿದೆ.

ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ 10659 ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, ಜಲಾಶಯದ ಭರ್ತಿಗೆ 30.30 ಅಡಿ ಬಾಕಿ ಇದೆ. 45.05 ಟಿಎಂಸಿ ಲೈವ್‌ ಸ್ಟೋರೇಜ್‌ ಸಾಮರ್ಥ್ಯದ ಜಲಾಶಯದ ಮಟ್ಟ 67.60 ಅಡಿಗಳಿಗೆ ಕುಸಿದು, ಜಲಾಶಯದಲ್ಲಿ 1.90 ಟಿಎಂಸಿ ಮಾತ್ರ ನೀರಿತ್ತು. ಈ ವರ್ಷ 14.40 ಟಿಎಂಸಿ ನೀರು ಸಂಗ್ರಹವಾಗಿದೆ.

Advertisement

2859.00 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಹಾರಂಗಿ ಜಲಾಶಯ 2827.08 ಅಡಿಗೆ ತಲುಪಿದೆ. 2145 ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, ಭರ್ತಿಯಾಗಲು 31.92 ಅಡಿ ಬಾಕಿ ಇದೆ. 8.07 ಟಿಎಂಸಿ ಬಳಸಬಹುದಾದ ನೀರು ಸಂಗ್ರಹಿಸಬಹುದಾದ ಚಿಕ್ಕ ಜಲಾಶಯದಲ್ಲಿ ಸದ್ಯ 2.76 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ದಿನಗಳಲ್ಲಿ ಜಲಾಶಯಕ್ಕೆ 2812.55 ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, 1.60 ಟಿಎಂಸಿ ಲೈವ್‌ ಸ್ಟೋರೇಜ್‌ ನೀರು ಇತ್ತು. 

ರೈತರ ಮೊಗದಲ್ಲಿ ಹರ್ಷ: ಸತತ ನಾಲ್ಕು ವರ್ಷಗಳ ಬರಗಾಲದಿಂದ ಕಂಗಾಲಾಗಿದ್ದ ಜಿಲ್ಲೆಯ ರೈತರ ಮೊಗದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಉತ್ತಮವಾಗಿ ಸುರಿದ್ದು ಮಂದಹಾಸ ಮೂಡಿಸಿವೆ.

ಜಲಾಶಯಗಳು ಭರ್ತಿಯಾಗಿ ಅಚ್ಚುಕಟ್ಟು ಪ್ರದೇಶದ ಕೃಷಿಗೆ ನೀರಾವರಿ ಇಲಾಖೆ ನೀರು ಹರಿಸಿದರೆ  ಕೆಆರ್‌ಎಸ್‌ ಜಲಾಶಯದಿಂದ ಮೈಸೂರು ಜಿಲ್ಲೆಯಲ್ಲಿ 35222 ಹೆಕ್ಟೇರ್‌, ಕಬಿನಿ ಜಲಾಶಯದಿಂದ ಮೈಸೂರು ಜಿಲ್ಲೆಯಲ್ಲಿ 43439 ಹೆಕ್ಟೇರ್‌ ಹಾಗೂ ಚಾಮರಾಜ ನಗರ ಜಿಲ್ಲೆಯಲ್ಲಿ 44461 ಹೆಕ್ಟೇರ್‌ ಸೇರಿದಂತೆ ಒಟ್ಟಾರೆ 87900 ಹೆಕ್ಟೇರ್‌ ಪ್ರದೇಶದ ಅಚ್ಚುಕಟ್ಟಿಗೆ ಅನುಕೂಲವಾಗಲಿದೆ.

ಹಾರಂಗಿ ಜಲಾಶಯದಿಂದ ಜಿಲ್ಲೆಯಲ್ಲಿ 44483 ಹೆಕ್ಟೇರ್‌, ಹೇಮಾವತಿ ಜಲಾಶಯದಿಂದ  2267 ಹೆಕ್ಟೇರ್‌, ನುಗು ಜಲಾಶಯದಿಂದ 7328 ಹೆಕ್ಟೇರ್‌ ಸೇರಿದಂತೆ 132739 ಹೆಕ್ಟೇರ್‌ ಪ್ರದೇಶದ ರೈತರ ಜಮೀನಿಗೆ ನೀರು ಹರಿಯಲಿದೆ.

ಮುಂಗಾರು ಚುರುಕು: ಜಿಲ್ಲೆಯಲ್ಲಿ ಮುಂಗಾರು  ಮಳೆ ಉತ್ತಮವಾಗಿದ್ದು, ಕಳೆದ ಒಂದು ವಾರದಲ್ಲಿ ಮೈಸೂರು ಜಿಲ್ಲೆಯಲ್ಲಿ 59 ಮಿ.ಮೀ ಮಳೆಯಾಗಿದೆ. ಜೂನ್‌ 8 ರಿಂದ 14ರ ಅವಧಿಯಲ್ಲಿ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ವಾಡಿಕೆಗಿಂತ  ಶೆ.495ರಷ್ಟು ಹೆಚ್ಚು ಮಳೆಯಾಗಿದೆ. 20.8 ಮಿ.ಮೀ ವಾಡಿಕೆ ಮಳೆ ಬೀಳಬೇಕಿತ್ತು. ಆದರೆ, 123.7 ಮಿ.ಮೀ ಮಳೆಯಾಗಿದೆ. ಹುಣಸೂರು ತಾಲೂಕಿನಲ್ಲಿ 14.4 ಮಿ.ಮೀ ವಾಡಿಕೆಗೆ 44.7 ಮಿ.ಮೀ ಮಳೆಯಾಗಿದೆ.

ಕೆ.ಆರ್‌.ನಗರ ತಾಲೂಕಿನಲ್ಲಿ 12.9 ವಾಡಿಕೆಗೆ 28.2 ಮಿ.ಮೀ, ಮೈಸೂರು ತಾಲೂಕಿನಲ್ಲಿ 17.0 ಮಿ.ಮೀ ವಾಡಿಕೆಗೆ  13.2 ಮಿ.ಮೀ, ನಂಜನಗೂಡು ತಾಲೂಕಲ್ಲಿ 12.7 ಮಿ.ಮೀ ವಾಡಿಕೆಗೆ 34.8 ಮಿ.ಮೀ, ಪಿರಿಯಾಪಟ್ಟಣ ತಾಲೂಕಿನಲ್ಲಿ 18.0 ಮಿ.ಮೀ ವಾಡಿಕೆಗೆ 83.0 ಮಿ.ಮೀ ಹಾಗೂ ತಿ.ನರಸೀಪುರ ತಾಲೂಕಿನಲ್ಲಿ 16.1 ಮಿ.ಮೀ ವಾಡಿಕೆಗೆ 6.8 ಮಿ.ಮೀ ಮಳೆಯಾಗಿದೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next