ಬೆಳಗಾವಿ: ಮಲಪ್ರಭಾ ಜಲಾಶಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಮಂಗಳವಾರ (ಅ.15) ಬಾಗಿನ ಅರ್ಪಣೆ ಮಾಡಿದರು.
ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಜಲಾಶಯಗಳು, ಕೆರೆಕಟ್ಟೆಗಳು ತುಂಬಿದ್ದು, ರೈತರ ಮುಖದಲ್ಲಿ ಹರ್ಷ ಮೂಡಿದೆ. ಸವದತ್ತಿ ತಾಲೂಕಿನ ನವಿಲು ತೀರ್ಥ (ಮಲಪ್ರಭಾ) ಜಲಾಶಯದಲ್ಲಿ ರೈತರ ಅಗತ್ಯಕ್ಕೆ ತಕ್ಕಷ್ಟು ನೀರು ಲಭ್ಯವಾಗಲಿದೆ ಎಂದು ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾಲ್ಗುಣದಿಂದಾಗಿ ರಾಜ್ಯಕ್ಕೆ ಉತ್ತಮ ಮಳೆ, ಬೆಳೆಯಾಗಿದೆ. ಮಲಪ್ರಭಾ ಜಲಾಶಯ 50 ವರ್ಷದ ಇತಿಹಾಸದಲ್ಲಿ 10ನೇ ಬಾರಿಗೆ ಭರ್ತಿಯಾಗಿದೆ. ಜಲಾಶಯ ಪೂರ್ತಿ ತುಂಬಿರುವುದರಿಂದ ರೈತರಿಗೆ ಅಗತ್ಯವಾದಾಗ ನೀರು ಬಿಡುವುದಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಜಲಾಶಯದ ಗರಿಷ್ಟ ಮಟ್ಟ 2079.5 ಅಡಿ (37.731 ಟಿಎಂಸಿ) ಸಾಮರ್ಥ್ಯವಿದ್ದು ಈಗ ಪೂರ್ತಿಯಾಗಿ ನೀರು ಸಂಗ್ರಹವಾಗಿದೆ ಎಂದರು.
ಜಲಾಶಯದಲ್ಲಿ ಒಟ್ಟು 37 ಟಿಎಂಸಿ ನೀರು ತುಂಬಿದ್ದು, ಇದರಲ್ಲಿ 16 ಟಿಎಂಸಿ ನೀರು ಕುಡಿಯುವುದಕ್ಕೆ ಹಾಗೂ 16 ಟಿಎಂಸಿ ನೀರಾವರಿಗೆ ಬೇಕಾಗುತ್ತದೆ. ರೈತರಿಗೆ ನೆರವು ನೀಡುವುದೇ ನಮ್ಮ ಉದ್ದೇಶ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಶಾಸಕರಾದ ಎನ್.ಎಚ್.ಕೋನರೆಡ್ಡಿ, ಬಿ.ಬಿ.ಚಿಮ್ಮನಕಟ್ಟಿ, ವಿಶ್ವಾಸ್ ವೈದ್ಯ, ಮಲಪ್ರಭಾ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಸದಾಶಿವಗೌಡ ಪಾಟೀಲ್ ಭಾಗಿಯಾಗಿದ್ದರು.