ಬಾಗಲಕೋಟೆ : ರಾಜ್ಯದ ಸಾರಿಗೆ ಸಂಸ್ಥೆಗಳ ಬಸ್ ನಲ್ಲಿ ಈ ವರೆಗೆ ಮಹಿಳೆಯರು, ವಿಕಲಚೇತನರಿಗೆ ಸ್ಥಾನ ಮೀಸಲಿಡುವ ಪದ್ಧತಿ ಇತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ನೀಡಿದ್ದು, ಇದೀಗ ಬಸ್ ಗಳಲ್ಲಿ ಪುರುಷರಿಗೆ ಸೀಟು ಮೀಸಲಿಡಬೇಕೆಂಬ ಒತ್ತಾಯ ಕೇಳಿ ಬಂದಿದೆ !
ಹೌದು, ಇಂತಹವೊಂದು ಒತ್ತಾಯದ ಸಲಹೆಯನ್ನು ಬಿಜೆಪಿಯ ಮುಖಂಡ, ಮಾಜಿ ಸಚಿವ ಮುರುಗೇಶ ನಿರಾಣಿ ಸರ್ಕಾರಕ್ಕೆ ನೀಡಿದ್ದಾರೆ.
ಕಾರಣ ಇಷ್ಟೇ. ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಪ್ರಯಾಣದ ವೇಳೆ ಹಣ ನೀಡಿ ಟಿಕೆಟ್ ಪಡೆಯುವ ಪುರುಷರಿಗೆ ಸೀಟು ಸಿಗುತ್ತಿಲ್ಲ. ನಿತ್ಯವೂ ವಿವಿಧ ಉದ್ಯೋಗಕ್ಕಾಗಿ ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸುವ ಪುರುಷರು ಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಬಸ್ ನಲ್ಲಿ ಜಾಗವಿಲ್ಲದೇ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ಹೋಗಲು ಆಗುತ್ತಿಲ್ಲ.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಬೇಕು, ಸಾಮಾನ್ಯ ಬಸ್ ಗ ಳಲ್ಲಿ ಪುರುಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು ಎಂದು ನಿರಾಣಿಯವರು, ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬಜೆಟ್ ನಲ್ಲಿ ಉತ್ತರ ನಿರ್ಲಕ್ಷ್ಯ :
ಸಿದ್ದರಾಮಯ್ಯ ಅವರು ಈ ವರೆಗೆ ಮಂಡಿಸಿದ ಬಜೆಟ್ ನಲ್ಲಿಯೇ ಅತ್ಯಂತ ಕಳಪೆ ಹಾಗೂ ಕೊರತೆಯ ಬಜೆಟ್ ಈ ಬಾರಿ ಮಂಡಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ, ಉತ್ತರಕರ್ನಾಟಕ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಅದರಲ್ಲೂ ಬಾಗಲಕೋಟೆ ಜಿಲ್ಲೆಗೆ ಬಜೆಟ್ ನಲ್ಲಿ ನಯಾಪೈಸೆ ಕೂಡ ಕೊಟ್ಟಿಲ್ಲ ಎಂದು ದೂರಿದರು.