Advertisement

ಬಜೆಟ್‌ನಲ್ಲಿ ಹೈ.ಕ.ಕ್ಕೆ ಹಣ ಮೀಸಲಿಡಿ

12:33 PM Dec 29, 2017 | Team Udayavani |

ಬೀದರ: ಹಿಂದುಳಿದ ಹೈದ್ರಾಬಾದ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತಿ ಬಜೆಟ್‌ನಲ್ಲಿ ಶೇ.30ರಷ್ಟು ಅನುದಾನ ಮೀಸಲಿಡುವ ಅಗತ್ಯವಿದೆ ಎಂದು ಕನ್ನಡ ಬಿಗ್‌ ಬಾಸ್‌ ವಿಜೇತ ಪ್ರಥಮ್‌ ಆಗ್ರಹಿಸಿದರು.

Advertisement

ನಗರದ ರಂಗ ಮಂದಿರದಲ್ಲಿ ಗುರುವಾರ ಜೈ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಗಡಿನಾಡು ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಈ ಕ್ರಮದಿಂದ ಮೈಸೂರು, ಬೆಂಗಳೂರು ಭಾಗದಂತೆ ಹೈ.ಕ.
ಭಾಗದ ಜಿಲ್ಲೆಗಳು ಸಹ ಅಭ್ಯುದಯವಾಗುತ್ತವೆ. ಪಾಲಕರು ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಓದಿಸಿ ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಮಹಾದಾಯಿ ಹೋರಾಟಕ್ಕೆ ಚಿತ್ರತಂಡ ವ್ಯಾಪಕ ಬೆಂಬಲ ಸೂಚಿಸಿ, ಧರಣಿಯಲ್ಲಿ ಪಾಲ್ಗೊಂಡಿದ್ದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಚಿತ್ರತಂಡ ಸ್ಪಂದಿಸುತ್ತ ಬರುತ್ತಿದೆ. ಈ ಪ್ರದೇಶದ ಸಮಸ್ಯೆಗಳನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು. 

ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀದರ ನಗರ ಸ್ಮಾರ್ಟ್‌ ಸಿಟಿ ಮಾಡುವುದು ಬಿಡಿ, ಮೊದಲು ರಸ್ತೆಗಳ ಸುಧಾರಣೆ ಮಾಡಬೇಕಿದೆ. ಇಲ್ಲಿನ ರಸ್ತೆಗಳು ತಗ್ಗು-ದಿನ್ನೆಯಿಂದ ಕೂಡಿವೆ. ರಾಜ್ಯ ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ಶಾಸಕರು ಸಮಪರ್ಕವಾಗಿ ಬಳಸಿಕೊಳ್ಳದೇ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಶಾಸಕರಿಗೆ ಪಾಠ ಕಲಿಸುವ ಸಮಯ ಬಂದಿದೆ ಎಂದರು.

ಡಿಸಿಸಿ ಬ್ಯಾಂಕ್‌ನಿಂದ 1.52 ಲಕ್ಷ ರೈತರಿಗೆ ಫಸಲ್‌ ಭಿಮಾ ಯೋಜನೆಯಡಿ ಬೆಳೆ ವಿಮೆ ದೊರೆತಿದೆ. 8 ಕೋಟಿಯಿಂದ ಆರಂಭವಾದ ಬ್ಯಾಂಕ್‌ ಇಂದು 35 ಸಾವಿರ ಕೋಟಿ ರೂ. ವ್ಯವಹಾರ ಮಾಡುತ್ತಿದೆ. ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯು ಬಡ ರೋಗಿಗಳಿಗೆ ಚಿರಂಜೀವಿಯಾಗಿದೆ ಎಂದು ಹೇಳಿದರು.

Advertisement

ಶ್ರೀ ಬಸವಲಿಂಗ ಅವಧೂತರು ಆಶೀವರ್ಚನ ನೀಡಿದರು. ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಜೈ ಕರವೇ ರಾಜ್ಯಾಧ್ಯಕ್ಷ ಅರುಣಕುಮಾರ ಪಾಟೀಲ, ಚಿತ್ರನಟಿ ಅಶ್ವಿ‌ನಿ ಮತ್ತು ನಟ ರಮೇಶ ಪಾಟೀಲ, ಎ.ಎಂ. ನೀಲ್‌, ಡಾ| ಶೈಲೇಂದ್ರ ಬೆಲ್ದಾಳೆ, ಶರಣಪ್ಪ ಪಾಟೀಲ, ಶಂಭುಲಿಂಗ, ಸತೀಶ ಮಡಿವಾಳ, ಹಣಮಂತ ಪಾಟೀಲ, ವಿವೇಕ ಬಿರಾದಾರ, ಮೌಂಟಿ ಗುರುನಗರ, ಜಯರಾಜ ಖಂಡ್ರೆ, ಹಬಿಬೋದ್ದಿನ್‌, ರಝಾಕ, ಪ್ರದೀಪ ಯನಗುಂದೆ, ಅಶೋಕ ಸಾಗರ, ಸಾವನ ಸಾಗರ ವೇದಿಕೆಯಲ್ಲಿದ್ದರು.
 
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಹಾಗೂ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಜೂನಿಯರ್‌ ರಾಜಕುಮಾರ ರಸಮಂಜರಿ, ಸಂಜಯ ಜೀರ್ಗೆ ನೃತ್ಯ ಮತ್ತು ನವಲಿಂಗ ಪಾಟೀಲ ಅವರಿಂದ ಹಾಸ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜೈ ಕರವೇ ಜಿಲ್ಲಾಧ್ಯಕ್ಷ ಶ್ರೀಮಂತ ಸಪಾಟೆ ಸ್ವಾಗತಿಸಿದರು. ವಿನಾಯಕ ಕುಲಕರ್ಣಿ ಮತ್ತು ಪ್ರಶಾಂತ ನಿರೂಪಿಸಿದರು. ಇದಕ್ಕೂ ಮುನ್ನ ಶಹಾಪೂರ ಗೇಟ್‌ದಿಂದ ಜಿಲ್ಲಾ ರಂಗ ಮಂದಿರದ ವರೆಗೆ ನೂರಾರು ಯುವಕರಿಂದ ಬೈಕ್‌ ರ್ಯಾಲಿ ನಡೆಯಿತು.

ನಡೆದಾಡುವ ದೇವರು ತುಮಕೂರು ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಶ್ರೀ ಮಠವು ಜ್ಯಾತ್ಯತೀತ ಮಠವಾಗಿದ್ದು, ಅಕ್ಷರ ಜ್ಞಾನದ ಜೊತೆಗೆ ಅನ್ನ ನೀಡಿ, ಮಕ್ಕಳ ಭವಿಷ್ಯ ರೂಪಿಸುತ್ತಿದೆ. ಭಾರತ ರತ್ನಕ್ಕಾಗಿ ರಾಜ್ಯ ಬಿಜೆಪಿ ನಾಯಕರು ಶ್ರಮಿಸಬೇಕು.
 ಪ್ರಥಮ್‌, ಕನ್ನಡ ಬಿಗ್‌ಬಾಸ್‌ ವಿಜೇತ 

Advertisement

Udayavani is now on Telegram. Click here to join our channel and stay updated with the latest news.

Next