ಬೆಂಗಳೂರು: ವಾಹನ ನಿಲುಗಡೆ ಸ್ಥಳಗಳಲ್ಲಿಗೆ ಮಹಿಳೆಯರಿಗೆ ಶೇ.20ರಷ್ಟು ಸ್ಥಳಾವಕಾಶವನ್ನು ಕಾಯ್ದಿರಿಸುವ ವ್ಯವಸ್ಥೆಗೆ ಮೇಯರ್ ಆರ್.ಸಂಪತ್‌ರಾಜ್ ಭಾನುವಾರ ಚಾಲನೆ ನೀಡಿದರು.
ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ಮಹಿಳೆಯರ ವಾಹನಗಳಿಗೆ ಸ್ಥಳ ದೊರೆಯದೆ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಪಾರ್ಕಿಂಗ್ ಸ್ಥಳಗಳಲ್ಲಿ ಮಹಿಳೆಯರಿಗೆ ಶೇ.20ರಷ್ಟು ಸ್ಥಳಾವಕಾಶ ಕಾಯ್ದಿರಿಸುವ ಆದೇಶ ಹೊರಡಿಸಲಾಗಿದೆ. ಅದರಂತೆ ಪ್ರಾಯೋಗಿಕವಾಗಿ ಬ್ರಿಗೇಡ್ ರಸ್ತೆಯಲ್ಲಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಅದರಂತೆ ಬ್ರಿಗೇಡ್ ರಸ್ತೆಯಲ್ಲಿ ಮಹಿಳೆಯರ ವಾಹನ ನಿಲುಗಡೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆಯಲ್ಲಿ ಒಟ್ಟು 22 ಕಾರುಗಳ ನಿಲುಗಡೆಗೆ ಸ್ಥಳಾವಕಾಶವಿದ್ದು, ಆ ಪೈಕಿ 8 ರಿಂದ 9 ಸ್ಥಳಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗುತ್ತಿದ್ದು, ಬ್ರಿಗೇಡ್ ರಸ್ತೆ ನಿರ್ವಹಣೆ ಅಸೋಸಿಯೇಷನ್ ಸಹಕಾರದಲ್ಲಿ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ.
ನೂತನ ವ್ಯವಸ್ಥೆಗೆ ಚಾಲನೆ ನೀಡಿದ ಮಾತನಾಡಿದ ಮೇಯರ್ ಸಂಪತ್‌ರಾಜ್, ನಗರದ ಪ್ರಮುಖ ಸ್ಥಳಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಸಿಗದೆ ಮಹಿಳೆಯರು ಪರದಾಡುವುದನ್ನು ತಪ್ಪಿಸುವ ಉದ್ದೇಶದಿಂದ ನೂತನ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮೊದಲು ಬ್ರಿಗೇಡ್ ರಸ್ತೆಯಲ್ಲಿ ಜಾರಿಗೊಳಿಸುತ್ತಿದ್ದು, ನಂತರದಲ್ಲಿ ಎಲ್ಲ ಕಡೆಗಳಲ್ಲಿಯೂ ಜಾರಿಗೊಳಿಸಲಾಗುವುದು ಎಂದರು.
ಮಹಿಳೆಯರಿಗೆ ಈಗಾಗಲೇ ಬಸ್, ರೈಲು ಸೇರಿ ಇನ್ನಿತರ ಸಾರ್ವಜನಿಕ ಸೇವೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಅದೇ ರೀತಿ ವಾಹನ ನಿಲುಗಡೆ ಸ್ಥಳದಲ್ಲಿಯೂ ಮಹಿಳಯರಿಗೆ ಪ್ರತ್ಯೇಕ ಸ್ಥಳ ನಿಗದಿಗೊಳಿಸುವುದರಿಂದ ಅನುಕೂಲವಾಗಿದ್ದು, ಮುಂದಿನ ದಿನಗಳಲ್ಲಿ ವಾಹನ ನಿಲುಗಡೆ ಗುತ್ತಿಗೆ ಪಡೆಯುವ ಸಂಸ್ಥೆಗೂ ಶೇ.20ರಷ್ಟು ಮಹಿಳೆಯ ವಾಹನಗಳಿಗೆ ಸ್ಥಳ ಕಾಯ್ದಿರಿಸುವಂತೆ ಟೆಂಡರ್‌ನಲ್ಲಿ ಷರತ್ತು ವಿಧಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಶಾಸಕ ಎನ್.ಎ.ಹ್ಯಾರೀಸ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಸೇರಿದಂತೆ ಪ್ರಮುಖರು ಹಾಜರಿದ್ದರು.