Advertisement

ಬಡ್ತಿಯಲ್ಲಿ ಅಂಗವಿಕಲರಿಗೆ ಮೀಸಲು ಅಗತ್ಯ

04:20 PM Feb 13, 2017 | |

ಮಂಡ್ಯ: ರಾಜ್ಯಸರ್ಕಾರ ಬಡ್ತಿಯಲ್ಲಿ ಅಂಗವಿಕಲರಿಗೆ ಮೀಸಲು ನೀತಿ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ ಒತ್ತಾಯಿಸಿದರು. ಭಾನುವಾರ ನಗರದ ಗಾಂಧಿಭವನದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು. 

Advertisement

ಈವರೆಗೆ ನೇಮ ಕಾತಿ ಪ್ರಕ್ರಿಯೆ ನಡೆಯದೇ ಇರುವ ಕಾರಣ ಅವರ ಪಾಲಿನ ಉದ್ಯೋಗಗಳನ್ನು ಬ್ಯಾಕ್‌ಲಾಗ್‌ ಎಂದು ಪರಿಗಣಿಸಿ ನೇಮಕ ಮಾಡಿಕೊಳ್ಳಬೇಕು. ವೇತನ ಸೇರಿದಂತೆ ಎಲ್ಲಾ ಬಗೆಯ ಭತ್ಯೆಗಳಲ್ಲಿ ಇವರಿಗೆ ಆದ್ಯತೆ ಕಲ್ಪಿಸುವಂತೆ ಸಲಹೆ ನೀಡಿದರು. ಸರ್ಕಾರದಿಂದ ಅಂಗವಿಕಲರಿಗೆ ಸೂಕ್ತ ಪ್ರಮಾಣದಲ್ಲಿ ಸವಲತ್ತು ಗಳನ್ನು ನೀಡುತ್ತಿಲ್ಲ. ಸಮಾಜದಲ್ಲಿ ಅವರನ್ನು ಮುಖ್ಯ ವಾಹಿನಿಗೆ ತರಬೇಕಾದರೆ ಎಲ್ಲರಿಗೂ ನೀಡುವ ಸೌಲಭ್ಯ- ಸವಲತ್ತುಗಳನ್ನು ಅಂಗವಿಕಲರಿಗೂ ನೀಡುವಂತೆ ಆಗ್ರಹಪಡಿಸಿದರು.

ಅಂಗವಿಕಲರು ತಮಗೆ ಬೇಕಾದ ಸವಲತ್ತುಗಳನ್ನು ಈವರೆಗೆ ಹೋರಾಟ ಮಾಡಿಕೊಂಡೇ ಪಡೆದುಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಸಿ ಮತ್ತು ಡಿ ಗ್ರೂಪ್‌ ನೌಕರರ ನೇಮಕಾತಿ ವೇಳೆ ಶೇ.5ರಷ್ಟು ಮೀಸಲನ್ನು ಅಂಗವಿಕಲರಿಗೆ ಕಲ್ಪಿಸಿದ್ದರು. ಈಗ ನೇಮಕಾತಿ ಪ್ರಕ್ರಿಯೆಗಳೇ ನಡೆಯುತ್ತಿಲ್ಲ. ಆದ್ದರಿಂದ ಇವರು ನೌಕರಿಯಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷ ರೇಣುಕಾರಾಧ್ಯ ಮಾತನಾಡಿ, ಅಂಗವಿಕಲರ ಅಭಿವೃದ್ಧಿ ಆಗದ ಹೊರತು ದೇಶ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಅಂಗವಿಕಲರಿಗೆ ಸವಲತ್ತು ಹಾಗೂ ಕಾನೂನುಗಳನ್ನು ರೂಪಿಸಿ 20 ವರ್ಷ ಕಳೆದರೂ ಅವರ ಸವಲತ್ತುಗಳು ಅನುಷ್ಠಾನಕ್ಕೆ ಬಂದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ರ್‍ಯಾಂಪ್‌ ಅಳವಡಿಸಿಲ್ಲ. ಅಂಗವಿಕಲರಿಗೆ ಪ್ರತ್ಯೇಕವಾದ ಶೌಚಾಲಯ ಗಳಿಲ್ಲ. ಅನೇಕ ತಂತ್ರಜಾnನಗಳು ಬೆಳವಣಿಗೆ ಆಗಿದ್ದರೂ ಅಂಗವಿಕಲರಿಗೆ ಇವುಗಳು ಈವರೆಗೆ ತಲುಪಿಲ್ಲ. ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸಿ ಪ್ರಾಮಾಣಿಕವಾಗಿ ಅಂಗವಿಕಲರ ಅಭಿವೃದ್ಧಿಗೆ ದುಡಿಯಬೇಕು ಎಂದು ಕರೆ ನೀಡಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಇಂದ್ರೇಶ್‌ ಮಾತನಾಡಿ, ಸರ್ಕಾರ ಅಂಗವಿಕಲರ ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಶಾ ದಾಯಕ ಭರವಸೆ ನೀಡಿದೆ. ಮುಂದಿನ ಬಜೆಟ್‌ನಲ್ಲಿ ಅಂಗವಿಕಲರ ತಿದ್ದುಪಡಿ ಕಾಯ್ದೆಗೆ ಮಾರ್ಗಸೂಚಿಯನ್ನು ರೂಪಿಸುವ ಭರವಸೆ ನೀಡಿದೆ ಎಂದು ತಿಳಿಸಿದರು. ಅಂಗವಿಕಲರನ್ನು ಹೀಯ್ನಾಳಿಸುವುದು, ಅನುಕರಿಸಿ ಮೂದಲಿ ಸುವುದು ಕಾನೂನುಬದ್ಧ ಅಪರಾಧ. ಈ ಕಾಯ್ದೆಯನ್ನು ಇತ್ತೀಚೆಗೆ ತರಲಾಗಿದೆ.

Advertisement

ಕೆಲಸ ಮಾಡುವ ಸ್ಥಳಗಳಲ್ಲಿ ದೌರ್ಜನ್ಯ ಎಸಗಿದರೆ ಜೈಲು ಶಿಕ್ಷೆಹಾಗೂ ದಂಡ ವಿಧಿಸಲಾಗುತ್ತದೆ. ಈ ಎಲ್ಲಾ ಕಾಯ್ದೆಗಳು ಸಮರ್ಥವಾಗಿ ಅನುಷ್ಠಾನಕ್ಕೆ ಬಂದಾಗ ಅಂಗವಿಕಲರ ಅಭಿವೃದ್ಧಿ ಸಾಧ್ಯ ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್‌ ಮಾತನಾಡಿ, ಜಿಲ್ಲೆಯಲ್ಲಿ ಕನಿಷ್ಠ 500ಕ್ಕೂ ಹೆಚ್ಚು ಮಂದಿ ಅಂಗವಿಕಲ ನೌಕರರಿದ್ದಾರೆ.

ಎಲ್ಲರೂ ಈ ಸಂಘಕ್ಕೆ ಸದಸ್ಯರಾಗಬೇಕು. ನಿಮ್ಮ ಸಂಘ ಕೈಗೊಳ್ಳುವ ಎಲ್ಲಾ ಕೆಲಸಕ್ಕೆ ಹಾಗೂ ಹೋರಾಟಕ್ಕೆ ತಾವು ಸದಾ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ಸಂಘದ ರಾಜಾಧ್ಯಕ್ಷ ವೆಂಕಟರಮಣಪ್ಪ, ಜಿಲ್ಲಾಧ್ಯಕ್ಷ ವಿ.ಎಂ.ಶ್ರೀನಿವಾಸ್‌, ಪ್ರಧಾನ ಕಾರ್ಯದರ್ಶಿ ಬಿ.ವಿ.ಶ್ರೀನಿವಾಸಮೂರ್ತಿ, ಗೌರವಾಧ್ಯಕ್ಷ ಜಯರಾಮು, ಬಸವರಾಜು, ಶಿವಾನಂದ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next