Advertisement

Kaup: ದಿವ್ಯಾಂಗರ ಸಹಾಯಕ್ಕೆ ಟೀಮ್‌ ಮಾರುತಿ ಕುಣಿತ

06:04 PM Oct 11, 2024 | Team Udayavani |

ಕಾಪು: ಉಚ್ಚಿಲ ದಸರಾ ಮತ್ತು ಶರನ್ನವರಾತ್ರಿ ವೇಳೆ ಹುಲಿ ವೇಷ ಧರಿಸಿ ಜನರನ್ನು ರಂಜಿಸುವುದರೊಂದಿಗೆ ಅದರಿಂದ ಸಂಗ್ರಹವಾಗುವ ಹಣವನ್ನು ಸಮಾಜಮುಖೀ ಕೆಲಸಗಳಿಗಾಗಿ ವಿನಿಯೋಗಿಸುತ್ತಿದೆ ಟೀಮ್‌ ಮಾರುತಿ ಮೂಳೂರು ಬಳಗ. ಮೂರನೇ ವರ್ಷದ ತಿರುಗಾಟದಲ್ಲಿರುವ ಟೀಮ್‌ ಪಿಲಿ ಪಜ್ಜೆ 3.0ದಲ್ಲಿ ಸಂಗ್ರಹವಾಗುವ ಮೊತ್ತವನ್ನು ಕಾಪು ಪುರಸಭೆ ಮತ್ತು ಬಡಾ ಗ್ರಾ.ಪಂ. ವ್ಯಾಪ್ತಿಯ ದಿವ್ಯಾಂಗ ವಿದ್ಯಾರ್ಥಿಗಳು ಮತ್ತು ತಂದೆ / ತಾಯಿ ಅಥವಾ ಪೋಷಕರ ಆಶ್ರಯದಲ್ಲಿ ಕಲಿಯುತ್ತಿರುವ ವಿದಾರ್ಥಿಗಳಿಗೆ ಸಾಂತ್ವನ ನೆರವು ನಿಧಿಗಾಗಿ ವಿನಿಯೋಗಿಸಲು ನಿರ್ಧರಿಸಿದೆ.

Advertisement

ದಿವ್ಯಾಂಗ ಯುವಕ ಸಾರಥಿ
ಟೀಮ್‌ ಮಾರುತಿ ತಂಡದ ಅಧ್ಯಕ್ಷ ಪ್ರಹಾರ್‌ ಅವರಿಗೆ ಬಲಗೈನ ಮುಂಗೈ ಇಲ್ಲ. ತಾಯಿ ಮತ್ತು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದ ಅವರು ಶಿಕ್ಷಣಕ್ಕಾಗಿ ಸಾಕಷ್ಟು ಕಷ್ಟ ಎದುರಿಸಿದ್ದರು. ಕಷ್ಟಗಳ ನಡುವೆಯೂ ಡಿಗ್ರಿ ಮುಗಿಸಿ ಈಗ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ತನ್ನಂತೆ ಕಷ್ಟಪಡುವೆ ಬೇರೆ ಮಕ್ಕಳಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಟೀಮ್‌ ಮಾರುತಿ ತಂಡ ಸೇರಿ ಈಗ ಸಾರಥಿಯಾಗಿದ್ದಾರೆ.

26 ಹುಲಿ ವೇಷಧಾರಿಗಳು
ಪಿಲಿ ಪೆಜ್ಜೆ 3.0 ತಂಡದಲ್ಲಿ ಹತ್ತು ವರ್ಷದ ಒಳಗಿನ 7 ಮಂದಿ ಮಕ್ಕಳು ಸೇರಿದಂತೆ 26 ಮಂದಿ ಹುಲಿ ವೇಷಧಾರಿಗಳಿದ್ದರೆ. ಅದರಲ್ಲಿ 9 ಮಂದಿ ಪ್ರಥಮ ಬಾರಿಗೆ ಬಣ್ಣ ಹಚ್ಚಿದವರು. ಇವರ ಜತೆ 40 ಮಂದಿ ತಂಡದ ಜತೆಗಿದೆ. ತಂಡದಲ್ಲಿರುವ ಎಲ್ಲರೂ ವಿದ್ಯಾರ್ಥಿಗಳೇ ಆಗಿರುವುದರಿಂದ ಇವರ ಕಲಿಕೆಗೂ ಟೀಮ್‌ ನೆರವಾಗುತ್ತಿದೆ.

ಕಳೆದ 2 ವರ್ಷದಲ್ಲಿ 2.53 ಲಕ್ಷ ರೂ. ನೆರವು
ಪಿಲಿ ಪೆಜ್ಜೆ 1.0ದಲ್ಲಿ ಸಂಗ್ರಹವಾದ ಹಣದಲ್ಲಿ ಖರ್ಚು ಕಳೆದು 1.35 ಲಕ್ಷ ರೂ. ಮೊತ್ತವನ್ನು ವೇಷ ಧರಿಸಿದ ವಿದ್ಯಾರ್ಥಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಬಡ ಕುಟುಂಬವೊಂದಕ್ಕೆ ಶೌಚಾಲಯ ನಿರ್ಮಾಣ, ಶಾಲೆಗೆ ಅಗತ್ಯ ಸೌಲಭ್ಯ ಜೋಡಣೆಗೆ ಬಳಸಲಾಗಿದೆ. ಪಿಲಿ ಪೆಜ್ಜೆ 2.0 ಸಂಗ್ರಹವಾದ 1.18 ಲಕ್ಷ ರೂ.ನಲ್ಲಿ ಹಣದಲ್ಲಿ ವೇಷ ಧರಿಸಿದ ವಿದ್ಯಾರ್ಥಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 52,400 ರೂ. ಹಾಗೂ ಕಾಪು ಪುರಸಭೆ ಮತ್ತು ಬಡಾ ಗ್ರಾ.ಪಂ. ವ್ಯಾಪ್ತಿಯ 1ರಿಂದ 10 ನೇ ತರಗತಿಯವರೆಗಿನ ದಿವ್ಯಾಂಗ‌ ವಿದ್ಯಾರ್ಥಿಗಳು ಮತ್ತು ಕಷ್ಟದಲ್ಲಿರುವ ಕುಟುಂಬಗಳ 44 ಮಕ್ಕಳಿಗೆ ವಿದ್ಯಾರ್ಥಿ ವೇತನವಾಗಿ 66,000 ರೂ. ನೀಡಿದ್ದಾರೆ.

ಕಾರ್ಯ ಶ್ಲಾಘನೀಯ
ಕಳೆದ 3 ವರ್ಷಗಳಿಂದ ಹುಲಿ ವೇಷ ಧರಿಸಿ ವಿಭಿನ್ನ ರೀತಿಯ ಸಮಾಜಮುಖೀ ಕಾರ್ಯಕ್ರಮಗಳನ್ನು ತೊಡಗಿಸಿ ಕೊಂಡಿರುವ ಸಂಘಟನೆಯ ಕಾರ್ಯ ಶ್ಲಾಘ ನೀಯ.
-ಡಾ| ಪ್ರತಿಭಾ ಆರ್‌., ತಹಶೀಲ್ದಾರ್‌, ಕಾಪು

Advertisement

ಸೇವೆಗೆ ಮೀಸಲು
ಸಂಗ್ರಹವಾದ ಹಣವನ್ನು ವಿದ್ಯಾರ್ಥಿ ವೇತನ ಹಾಗೂ ಸಾಮಾಜಿಕ ಸೇವೆಗೆ ಮೀಸಲಿರಿಸಿದ್ದೇವೆ. ಜನರು, ಉದ್ಯಮಿಗಳು, ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ.
-ಪ್ರಹರ್‌ ಮೂಳೂರು, ಅಧ್ಯಕ್ಷರು, ಟೀಮ್‌ ಮಾರುತಿ, ಮೂಳೂರು

ಹುಲಿ ಕುಣಿತ ತರಬೇತಿ, ಪೈಂಟಿಂಗ್‌
ಟೀಮ್‌ ಮಾರುತಿ ತಂಡದ ಸದಸ್ಯರು ಮೂಳೂರು ಪರಿಸರದಲ್ಲಿ ‘ವಾಟರ್‌ ಕಲರ್‌’ ಬಳಸಿ ವೇಷ ಹಾಕಿ ಮನೆ ಮನೆಗೆ ಹೋಗಿ ಕುಣಿದು ಅಷ್ಟಮಿ, ಚೌತಿ, ಮಾರ್ನೆಮಿಗೆ ಮನೋರಂಜನೆ ನೀಡುತ್ತಿದ್ದರು. ಇದೀಗ ಮೂರು ವರ್ಷಗಳಿಂದ ಈ ತಂಡಕ್ಕೆ ಆಸುಪಾಸಿನ ಮಕ್ಕಳನ್ನು ಸೇರಿಸಿ ಹುಲಿ ಕುಣಿತ ತರಬೇತಿ ನೀಡಿ ಪ್ರದರ್ಶನಕ್ಕೆ ಅಣಿ ಮಾಡಲಾಗುತ್ತಿದೆ. ಸಂಗ್ರಹವಾದ ಹಣವನ್ನು ಅಂಗವಿಕಲ ವಿದ್ಯಾರ್ಥಿಗಳು, ಅನಾಥ ಮಕ್ಕಳ ವಿದ್ಯಾಭ್ಯಾಸ ಮತ್ತು ಮೂಲಸೌಕರ್ಯಗಳ ಜೋಡಣೆಗಾಗಿ ಬಳಸಲಾಗುತ್ತಿದೆ.

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next