Advertisement

ಭಡ್ತಿ ಮೀಸಲಾತಿ : ಸುಪ್ರೀಂ ಅಂಗಳಕ್ಕೆ

06:40 AM Jan 17, 2018 | Harsha Rao |

ಬೆಂಗಳೂರು: ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧ ಎಂದು ಹೇಳುತ್ತಿರುವ ರಾಜ್ಯ ಸರಕಾರವು ಈಗ ನ್ಯಾಯಾಲಯದಲ್ಲಿ 3 ತಿಂಗಳ ಕಾಲಾವಕಾಶ ಕೋರಿದೆ. ಇದರಿಂದಾಗಿ ವಿವಾದದ ಚೆಂಡು ಮತ್ತೆ ಸುಪ್ರೀಂ ಕೋರ್ಟ್‌ ಅಂಗಳ ತಲುಪಿದಂತಾಗಿದೆ.

Advertisement

ಮುಂಭಡ್ತಿ ವಿಚಾರದ ಮಸೂದೆ ರಾಷ್ಟ್ರಪತಿ ಯವರ ಒಪ್ಪಿಗೆಗೆ ಹೋಗಿರುವುದನ್ನೇ ಪ್ರಮಾಣಪತ್ರದಲ್ಲಿ ಪ್ರಮುಖವಾಗಿ ಪ್ರಸ್ತಾವಿಸಿರುವ ರಾಜ್ಯ ಸರಕಾರ, ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆದಿದ್ದು, ಇನ್ನೂ ಮೂರು ತಿಂಗಳು ಕಾಲಾವಕಾಶ ಬೇಕು ಎಂದು ಹೇಳಿದೆ.

ಹೀಗಾಗಿ ಸುಪ್ರೀಂ ಕೋರ್ಟ್‌ ಮುಂದೇನು ಮಾಡಲಿದೆ ಎಂಬುದರತ್ತ ಎಲ್ಲರ ಚಿತ್ತ ಹರಿದಿದೆ. ಈ ಮಧ್ಯೆ ರಾಜ್ಯ ಸರಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ “ಅಹಿಂಸಾ’ ಹೋರಾಟ ಸಮಿತಿ ಕಾನೂನು ಹೋರಾಟ ಮುಂದು ವರಿಸಲು ತೀರ್ಮಾನಿಸಿದೆ. ಅಲ್ಲದೆ ವಿಧಾನಸಭೆ ಚುನಾವಣೆ ವರೆಗೂ ವಿವಾದ ಯಥಾಸ್ಥಿತಿ ಮುಂದುವರಿಯಲಿ ಎನ್ನುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮತ್ತೆ ಮೂರು ತಿಂಗಳ ಕಾಲಾವಕಾಶ ಕೋರಿದೆ ಎಂದು ಹೇಳಲಾಗಿದೆ.

ಮೀನಮೇಷ ಯಾಕೆ?
 ಮತ್ತೂಂದು ಮೂಲಗಳ ಪ್ರಕಾರ ಬಹುತೇಕ ಇಲಾಖೆಗಳ ಪರಿಷ್ಕೃತ ಜೇಷ್ಠತಾ ಪಟ್ಟಿ ಸಿದ್ಧಗೊಂಡಿದೆಯಾದರೂ ಲೋಕೋಪಯೋಗಿ, ಜಲಸಂಪನ್ಮೂಲ ಇಲಾಖೆಯದೇ ಸಮಸ್ಯೆಯಾಗಿದೆ. ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯ ಜೇಷ್ಠತಾ ಪಟ್ಟಿ 2002ರ ವರೆಗೆ ಮಾತ್ರ ಸಿದ್ಧಪಡಿಸಲಾಗಿದೆ. 2017ರ ವರೆಗಿನ ಜೇಷ್ಠತಾ ಪಟ್ಟಿ ಸಿದ್ಧಪಡಿಸಿದರೆ ಈಗಾಗಲೇ ಮೀಸಲಾತಿಯಡಿ ಭಡ್ತಿ ಪಡೆದಿರುವ ಕೆಲವು ಪ್ರಭಾವಿ ಅಧಿಕಾರಿಗಳಿಗೆ ಹಿಂಭಡ್ತಿ ನೀಡಬೇಕಾಗುತ್ತದೆ. ಭಡ್ತಿ 
ಪಡೆದು ಆಯಕಟ್ಟಿನ ಜಾಗದಲ್ಲಿರುವವರು ಹಿರಿಯ ಸಚಿವರಿಗೆ ಆಪ್ತರಾಗಿರುವುದರಿಂದ ಅವರಿಗೆ ಹಿಂಭಡ್ತಿ ನೀಡುವುದು ಕಷ್ಟ. ಹೀಗಾಗಿ ಮೀನಮೇಷ ಎಣಿಸಲಾಗುತ್ತಿದೆ. ಜೇಷ್ಠತಾ ಪಟ್ಟಿ ಸಿದ್ಧಪಡಿಸುವಲ್ಲಿಯೂ ಕೆಲವು ಲೋಪದೋಷ ಆಗಿದ್ದು, ಅದನ್ನು ಸರಿಪಡಿಸುವಂತೆ ಆಯಾ ಇಲಾಖೆಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ತತ್‌ಕ್ಷಣಕ್ಕೆ ಇದು ಬಗೆಹರಿಯುವಂತದ್ದಲ್ಲ ಎಂದು ಹೇಳಲಾಗುತ್ತಿದೆ.

ಸುಪ್ರೀಂ ಕೋರ್ಟ್‌ ಒಂದೊಮ್ಮೆ ತಮ್ಮ ಹಿಂದಿನ ಆದೇಶ ಪಾಲನೆ ಮಾಡಲೇಬೇಕು ಎಂದು ಸೂಚಿಸಿದರೆ ರಾಜ್ಯ ಸರಕಾರ ಮತ್ತೆ ಇಕ್ಕಟ್ಟಿಗೆ ಸಿಲುಕಲಿದೆ. ಆಗ ಅನಿವಾರ್ಯವಾಗಿ ಜೇಷ್ಠತಾ ಪಟ್ಟಿ ಸಲ್ಲಿಸಲೇಬೇಕಾಗುತ್ತದೆ.

Advertisement

ಸರಕಾರಕ್ಕೆ ಆಶಾಭಾವನೆ
ರಾಷ್ಟ್ರಪತಿ ಬಳಿ ಮಸೂದೆ ಇರುವುದರಿಂದ ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ ಸಹ ರಾಜ್ಯ ಸರಕಾರದ ಮನವಿಗೆ ಒಪ್ಪಿಗೆ ನೀಡಬಹುದು ಎಂಬ ಆಶಾಭಾವನೆ ಸರಕಾರದ್ದಾಗಿದೆ. ಆದರೆ ಸರಕಾರದ ನಡೆ ವಿರುದ್ಧ ಅಹಿಂಸಾ ಹೊರಾಟ ಸಮಿತಿಯೂ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿದೆ. ಬುಧವಾರ ಅಥವಾ ಗುರುವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next