ಕಾಪು: ಕಾಪು ತಾಲೂಕಿನ ಪ್ರಸ್ತಾವಿತ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ ಸಂಬಂಧಿಸಿ ಕಾಪು ಪುರಸೌಧದ ಬಳಿ ಮೀಸಲಿರಿಸಿರುವ ಸ್ಥಳಕ್ಕೆ ಶನಿವಾರ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ್ ರಾವ್ ಮತ್ತು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಿನಿ ವಿಧಾನಸೌಧ ರಚನೆ ಸಂದರ್ಭ ಕಾಪು ತಾ| ವ್ಯಾಪ್ತಿಗೆ ಬರುವ ಎಲ್ಲ ತಾ| ಮಟ್ಟದ ಕಚೇರಿಗಳಿಗೆ ಒಂದೇ ಸೂರಿನಡಿ ಅವಕಾಶ ಕಲ್ಪಿಸಿಕೊಡಲು ಪೂರಕವಾಗುವಂತೆ ಮಿನಿ ವಿಧಾನಸೌಧ ರಚನೆಗೆ ನೀಲ ನಕಾಶ ಸಿದ್ಧಪಡಿಸುವಂತೆ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ್ ರಾವ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಬಗ್ಗೆ ಡಿಸಿ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿ, ಕಾಪು ಮಿನಿ ವಿಧಾನಸೌಧ ರಚನೆಗೆ 10 ಕೋ. ರೂ. ಅನುದಾನ ಮಂಜೂರಾಗಿದೆ. ಅದಕ್ಕೆ ಬೇಕಾಗುವಂತೆ ನಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ. ಮಿನಿ ವಿಧಾನಸೌಧ ರಚನೆ ಮೂಲಕ ತಾಲೂಕಿಗೆ ಸಂಬಂಧಪಟ್ಟು ತಹಶೀಲ್ದಾರ್ ಕಚೇರಿ, ಸರ್ವೇ ಕಚೇರಿ, ಸಬ್ ರಿಜಿಸ್ಟ್ರಾರ್ ಆಫೀಸ್, ಖಜಾನೆ ಸೇರಿದಂತೆ ಎಲ್ಲ ಕಚೇರಿಗಳೂ ಒಂದೇ ಸಂಕೀರ್ಣಕ್ಕೆ ಬರಲಿವೆ ಎಂದರು.
ಜಿಲ್ಲೆಗೆ 4 ಮಿನಿ ವಿಧಾನಸೌಧ ಮಂಜೂರು
ಕಾಪು ತಾಲೂಕು ಮಾತ್ರವಲ್ಲದೇ ಹೆಬ್ರಿ, ಬ್ರಹ್ಮಾವರ, ಬೈಂದೂರು ತಾಲೂಕಿಗೂ ಮಿನಿ ವಿಧಾನಸೌಧ ಮಂಜೂರಾಗಿದ್ದು, ಕಂದಾಯ ಇಲಾಖೆಯ ಮೂಲಕ ಮೀಸಲಿರಿಸಲಾದ ಪ್ರದೇಶದಲ್ಲಿ ಮಿನಿ ವಿಧಾನಸೌಧ ರಚನೆಯಾಗಲಿದೆ. ಅದಕ್ಕೆ ಸಂಬಂಧಪಟ್ಟು ಶನಿವಾರ ಕಂದಾಯ ಇಲಾಖೆ ಮೀಸಲಿರಿಸಿ, ಪ್ರಸ್ತಾವನೆ ಕಳುಹಿಸಿರುವ ಜಾಗಗಳನ್ನು ಪರಿಶೀಲಿಸಲಾಗಿದೆ. ಎಲ್ಲ ಮಂಜೂರಾತಿಗಳು ದೊರಕಿದ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಕುಂದಾಪುರ ಉಪವಿಭಾಗ ಸಹಾಯಕ ಆಯುಕ್ತ ಡಾ| ಮಧುಕೇಶ್ವರ್, ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ, ಕಂದಾಯ ಪರಿವೀಕ್ಷಕ ರವಿಶಂಕರ್, ಗ್ರಾಮ ಕರಣಿಕರು ಉಪಸ್ಥಿತರಿದ್ದರು.