ಬೆಂಗಳೂರು: ದುರ್ಬಲ ವರ್ಗದವರಿಗೆ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯದಡಿ ಸಂಪೂರ್ಣ ಮೀಸಲಾತಿ ಸೌಲಭ್ಯ ಪೂರ್ಣವಾಗಿ ಸಿಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ “ಜಾಗತೀಕರಣದ ಯುಗದಲ್ಲಿ ಸಾಮಾಜಿಕ ನ್ಯಾಯ: ಸಾವಾಲುಗಳು’ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಮೀಸಲಾತಿ ಇಲ್ಲದೇ ದುರ್ಬಲ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಸಂವಿಧಾನದ ಆಶಯದಂತೆ ಮೀಸಲಾತಿ ಇರಬೇಕು ಎಂದು ತಿಳಿಸಿದರು.
ಮಹಿಳೆಯರು, ಮಕ್ಕಳು, ಕಾರ್ಮಿಕರು, ಹಿಂದುಳಿದ ವರ್ಗದವರು ಅನೇಕ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಪಾಶ್ಚಿಮಾತ್ಯರ ಪ್ರಭಾಗದಿಂದ ಸಾಮಾಜಿಕ ಪರಿಕಲ್ಪನೆ ಬದಲಾಗುತ್ತಿದೆ. ಶೇ.90ರಷ್ಟು ದುರ್ಬಲ, ದಲಿತ, ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು. ಇವರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಕಲ್ಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆ, ಗ್ರಾಮ ಸ್ವರಾಜ್ಯವು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ಮುನಿರಾಜು ಮಾತನಾಡಿ, ವಾಣಿಜ್ಯೋದ್ದೇಶದ ಸಂಸ್ಥೆಗಳು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಬಿ.ಕಾಂ ಆಧಾರದಲ್ಲಿ ಎಲ್‌ಎಲ್‌ಬಿ ಪದವಿಗೆ (ಕಾನೂನು ಪದವಿ) ಅವಕಾಶ ಮಾಡಿಕೊಡುತ್ತಿವೆ. ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಸದ್ಯ ಬಿ.ಎ. ಎಲ್‌ಎಲ್‌ಬಿ ಕೋರ್ಸ್ ಮಾತ್ರ ಲಭ್ಯವಿದ್ದು, ಶೀಘ್ರದಲ್ಲಿ ಬಿ.ಕಾಂ. ಎಲ್‌ಎಲ್‌ಬಿ ಕೋರ್ಸ್ ಆರಂಭಿಸಲಿದ್ದೇವೆ ಎಂದು ತಿಳಿಸಿದರು.
ಐಸಿಎಸ್‌ಎಸ್‌ಆರ್ ಪ್ರಾಧ್ಯಾಪಕ ಡಾ.ಆರ್.ಎಸ್.ದೇಶಪಾಂಡೆ ಮಾತನಾಡಿದರು. ಬೆಂವಿವಿ ಕುಲಸಚಿವ ಡಾ.ಬಿ.ಕೆ.ರವಿ, ಕಾರ್ಯಕ್ರಮ ಸಂಯೋಜಕ ಡಾ.ಚಂದ್ರಕಾಂತಿ, ಕಾರ್ಯಕ್ರಮ ನಿರ್ದೇಶಕ ಡಾ.ವಿ. ಸುದೇಶ್ ಉಪಸ್ಥಿತರಿದ್ದರು.