Advertisement

ಮೀಸಲಾತಿ ಒಂದು ವರ್ಗದ ಪ್ರಾಯಶ್ಚಿತ

12:40 AM Nov 25, 2019 | Lakshmi GovindaRaj |

ಬೆಂಗಳೂರು: ಮೀಸಲಾತಿ ಎಂಬುದು ಸಮಾಜದ ಒಂದು ವರ್ಗಕ್ಕೆ ಕೊಟ್ಟ ಕೊಡುಗೆ ಅಲ್ಲ. ಭಾರತದ ಅತಿ ದೊಡ್ಡ ಸಮಾಜ ಶತಮಾನಗಳಿಂದ ಒಂದು ವರ್ಗಕ್ಕೆ ಮಾಡಿದ ಅನ್ಯಾಯಕ್ಕೆ ತಾನು ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ್ತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅಭಿಪ್ರಾಯಪಟ್ಟರು.

Advertisement

ನವ ಬೆಂಗಳೂರು ಫೌಂಡೇಷನ್‌ ನಗರದ ಆರ್‌.ವಿ. ಟೀಚರ್ಸ್‌ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ “ಭಾರತೀಯ ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ದೊಡ್ಡ ವರ್ಗ ಒಂದರ ಪಟ್ಟಭದ್ರ ಹಿತಾಸಕ್ತಿಯು ಮತ್ತೂಂದು ವರ್ಗವನ್ನು ಸಂಸ್ಕೃತಿ, ಧರ್ಮದ, ಪರಂಪರೆ, ಸಂಪ್ರದಾಯದ ಹೆಸರಿನಲ್ಲಿ ಸಮಾಜದಿಂದ ಸಾವಿರಾರು ವರ್ಷಗಳು ದೂರವಿಟ್ಟು ಅನ್ಯಾಯ ಮಾಡಿತು.

ಸಮಾಜದಿಂದ ದೂರಾದ ವರ್ಗದ ಅನ್ಯಾಯವನ್ನು ಸರಿಪಡಿಸಲು ಸಂವಿಧಾನದ ಮೂಲಕ ಡಾ.ಬಿ.ಆರ್‌.ಅಂಬೇಡ್ಕರ್‌ ಮೀಸಲಾತಿಯನ್ನು ಜಾರಿಗೊಳಿಸಿದ್ದಾರೆ. ಹೀಗಾಗಿ, ಮೀಸಲಾತಿಯನ್ನು ನಮ್ಮ ಪೂರ್ವಜರು ಮಾಡಿರುವ ಅನ್ಯಾಯಕ್ಕೆ ಪ್ರಾಯಶ್ಚಿತ ಎಂದು ಅಥೆìçಸಿಕೊಂಡಾಗ ಮಾತ್ರ ಸಂವಿಧಾನ, ಮೀಸಲಾತಿಯು ಬೇಕು ಎಂಬ ಅಂಶಗಳು ತಲೆಯಲ್ಲಿ ಬರುತ್ತವೆ ಎಂದರು.

ಮೊದಲು ಅಂಬೇಡ್ಕರ್‌ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಇಂದು ಅನೇಕರಿಗೆ ಮೀಸಲಾತಿ ಕುರಿತಂತೆ ಸಾಕಷ್ಟು ಪ್ರಶ್ನೆಗಳಿದ್ದು, ಆ ಪ್ರಶ್ನೆಗಳಿಗೆ ಅಂಬೇಡ್ಕರ್‌ ಜೀವನವೇ ಉತ್ತರವಾಗಿದೆ. ಯಾವ ಕೊರತೆಯ ಕಾರಣಕ್ಕೆ ಮೀಸಲಾತಿಯನ್ನು ತಂದರು ಎಂದು ಅರ್ಥ ಮಾಡಿಕೊಂಡರೆ ಎಲ್ಲಾ ಪ್ರಶ್ನೆಗಳು ಒಂದು ನಿಮಿಷದಲ್ಲಿ ಮುಗಿಯುತ್ತದೆ ಎಂದರು.

ಅಂದಿನ ಕಾಲಕ್ಕೆ ದೇಶದ ದೊಡ್ಡ ವ್ಯವಸ್ಥೆಯಾಗಿದ್ದ ಕಾಂಗ್ರೆಸ್‌ನಲ್ಲಿ ಅಂಬೇಡ್ಕರ್‌ ನೋವುಗಳಿಗೆ ಬೆಲೆ ಸಿಗಲಿಲ್ಲ. ಭಿನ್ನ ವ್ಯವಸ್ಥೆ ರೂಪಿಸಿಕೊಂಡು ಹೋರಾಟ ಮುಂದುವರೆಸಿದರು. ಅವರ ಒಟ್ಟಾರೆ ಹೋರಾಟಕ್ಕೆ ಸಂವಿಧಾನದ ಮೂಲಕ ಗೆಲುವು ಸಿಕ್ಕಿತು. ಆದರೆ, ಇಂದಿಗೂ ಅನೇಕ ರಾಜಕೀಯ ಪಕ್ಷಗಳು ಅಂಬೇಡ್ಕರ್‌ ಅವರನ್ನು ಗುತ್ತಿಗೆ ತೆಗೆದುಕೊಂಡವರಂತೆ ಮಾತನಾಡುತ್ತವೆ. ಇಂತಹ ಶ್ರೇಷ್ಠ ವ್ಯಕ್ತಿಗೆ ಭಾರತರತ್ನ ನೀಡಲು 1999ರ ವಾಜಪೇಯಿ ಸರ್ಕಾರವೇ ಬರಬೇಕಾಯಿತು ಎಂದು ಕುಟುಕಿದರು.

Advertisement

ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಮೋಹನ್‌ ದಾಸ್‌ ಪೈ ಮಾತನಾಡಿ, ಶಾಸಕರು, ಸಂಸದರು, ಸಚಿವರು ಯಾವುದೇ ಕಾರಣಕ್ಕೂ ಮುಖ್ಯಸ್ಥರಲ್ಲ. ಅವರು ನಮ್ಮಂತ ಸಾರ್ವಜನಿಕರ ಪ್ರತಿನಿಧಿಗಳು ಎಂಬುದನ್ನು ಸಂವಿಧಾನ ತಿಳಿಸಿದೆ ಎಂದು ಸಂವಿಧಾನದ ರೂಪುರೇಷಗಳ ಕುರಿತು ತಿಳಿಸಿದರು.

ಅಸ್ಪೃಶ್ಯತೆಯ ವಿರುದ್ಧ ಸಂಕಲ್ಪ ಮಾಡಿ: ಅಸ್ಪೃಶ್ಯತೆಗೆ ಸಂವಿಧಾನದ ಮೂಲಕ ಕಾನೂನು ಪರಿಹಾರ ಸಿಕ್ಕಿದೆ ಹೊರತು ನಮ್ಮ ಮನಸ್ಸಿನಿಂದ ಹೊಗಿಲ್ಲ. ಜಾತಿ ಹೆಸರಲ್ಲಿ ಜನರನ್ನು ನೋಡದೇ ಸಮಾನತೆಯಿಂದ ಕಾಣುವ ಮೂಲಕ ಅಸ್ಪೃಶ್ಯತೆ ಆಚರಣೆ ಸಮಾಜದಿಂದಲೇ ದೂರ ತಳ್ಳಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕುಟುಂಬ, ಹಿರಿಯರು ಎಂಬ ನೆಪ ಹೇಳದೆ ಅಸ್ಪೃಶ್ಯತೆಯನ್ನು ಆಲೋಚನೆಯಿಂದಲೇ ಕಿತ್ತು ಹಾಕುತ್ತೇವೆ ಎಂಬ ಸಂಕಲ್ಪ ಮಾಡಬೇಕು ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ತಿಳಿಸಿದರು.

ವೇದಿಕೆ ಕಾರ್ಯಕ್ರಮ ಮಧ್ಯೆಯೇ ಧಿಕ್ಕಾರ!: ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸಭಿಕರ ಮಧ್ಯದಿಂದ ಎಂದ ಅಪರಿಚಿತನೊಬ್ಬ “ಸಂವಿಧಾನ ಅತ್ಯಾಚಾರ ಮಾಡಿದವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕಿಲ್ಲ, ಧಿಕ್ಕಾರ ಧಿಕ್ಕಾರ’ ಎಂದು ಕೂಗಿದನು. ಕೂಡಲೇ ಪೊಲೀಸರ ವಶಕ್ಕೆ ಪಡೆದು ಸಭಾಂಗಣದಿಂದ ಕರೆದೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next