Advertisement

Karnataka Govt., ಕನ್ನಡಿಗರಿಗೆ ಮೀಸಲಾತಿ: ರಾಜ್ಯ ಸರಕಾರಕ್ಕೆ ಇಕ್ಕಟ್ಟು !

12:45 AM Jul 19, 2024 | Team Udayavani |

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಮಸೂದೆ ಜಾರಿಗೆ ತಾತ್ಕಾಲಿಕ ತಡೆ ನೀಡಿರುವ ರಾಜ್ಯ ಸರಕಾರ ಈಗ ಇಕ್ಕಟ್ಟಿಗೆ ಸಿಲುಕಿದೆ. ಒಂದು ವೇಳೆ ಮಸೂದೆ ಜಾರಿಗೆ ಮುಂದಾದರೆ ಉದ್ಯಮ ವಲಯಗಳ ವಿರೋಧ ಎದುರಿಸಬೇಕಾಗುತ್ತದೆ. ಜಾರಿ ಮಾಡ ದಿದ್ದರೆ ಸರಕಾರ ಕನ್ನಡಿಗರ ಪರ ಇಲ್ಲ ಎಂಬ ಹಣೆಪಟ್ಟಿಗೆ ಒಳಗಾಗಬೇಕಾಗುತ್ತದೆ.
ಒಂದರ್ಥದಲ್ಲಿ ನುಂಗಿದರೆ ಕಷ್ಟ, ನುಂಗದಿದ್ದರೆ ಇನ್ನೂ ಕಷ್ಟ ಎಂಬುದು ಸರಕಾರದ ಈಗಿನ ಪರಿಸ್ಥಿತಿಯಾಗಿದೆ.

Advertisement

ಕನ್ನಡಿಗರಿಗೆ ಮೀಸಲು ಮಸೂದೆ ಇನ್ನೇನು ಈ ಅಧಿವೇಶನದಲ್ಲೇ ಮಂಡನೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಉದ್ಯಮ ವಲಯದಿಂದ ವ್ಯಕ್ತವಾದ ಭಾರೀ ಆಕ್ರೋಶದ ಜತೆಗೆ ಸಚಿವ ಸಂಪುಟದಲ್ಲೂ ಕಾಣಿಸಿಕೊಂಡ ಅಪಸ್ವರದಿಂದ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ಕಾಲಿಕ ವಾಗಿ ಈ ಮಸೂದೆ ಮಂಡನೆಯನ್ನು ತಡೆಹಿಡಿಯಲಾಗಿದೆ, ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ಹೇಳುವ ಮೂಲಕ ಹಾನಿ ನಿಯಂತ್ರಣ ಮಾಡಿದ್ದಾರೆ.

ಆದರೆ ಈ ಬೆಳವಣಿಗೆಗೆ ಕನ್ನಡಪರ ಸಂಘಟನೆಗಳಿಂದ ಸಾಕಷ್ಟು ಟೀಕೆಗಳನ್ನು ಸರಕಾರ ಎದುರಿಸುತ್ತಿದೆ.

ಅಧಿವೇಶನದಲ್ಲಿ ಮಸೂದೆ ಮಂಡಿಸದೆ ತಡೆ ಹಿಡಿದಿರುವ ಕ್ರಮ ಕನ್ನಡಿಗರು, ಕನ್ನಡಪರ ಸಂಘಟನೆ, ಹೋರಾಟಗಾರರಲ್ಲಿ ಸಾಕಷ್ಟು ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗರ ಮತ ಪಡೆದು ಅಧಿಕಾರಕ್ಕೆ ಬಂದ ಸರಕಾರ ಉದ್ಯಮಿಗಳಿಗೆ ಹೆದರುವ ಪರಿಸ್ಥಿತಿ ಬಂತಲ್ಲ ಎಂಬ ಬೇಸರ ಕನ್ನಡಪರ ಹೋರಾಟಗಾರರದ್ದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕನ್ನಡಿಗರ ಪರ ಎಂದು ಸಾಬೀತುಪಡಿಸಲು ಸಕಾಲ. ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಖಾಸಗಿ ಸಂಸ್ಥೆಗಳ ಒತ್ತಡಕ್ಕೆ ಸರಕಾರ ಮಣಿಯಬಾರದು ಎಂದು ರೈತಪರ ಸಂಘಟನೆಗಳ ಸಹಿತ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ. ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಮಣಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಎಂಬ ಎಚ್ಚರಿಕೆ ಸಂದೇಶವನ್ನು ಸರಕಾರಕ್ಕೆ ರವಾನಿಸಿವೆ.

15 ದಿನಗಳ ಗಡುವು ನೀಡಿದ ಕರವೇ
ಖಾಸಗಿ ವಲಯದಲ್ಲಿ ಕನ್ನಡಿಗರ ಮೀಸಲಾತಿ ಜಾರಿ ನಿರ್ಧಾರದಿಂದ ಹಿಂದೆ ಸರಿದಿರುವ ಸರಕಾರದ ಕ್ರಮದ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಗುಡುಗಿದ್ದಾರೆ. ನಾನು ಯಾವತ್ತೂ, ಕನ್ನಡಿಗರ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಯಮಿಗಳ ಯಾವುದೇ ಬ್ಲ್ಯಾಕ್‌ಮೇಲ್ ಗೆ ಹೆದರಬಾರದು. ಇಡೀ ಕನ್ನಡಿಗರು ಸರಕಾರದ ಪರ ಇದ್ದಾರೆ. 15 ದಿನಗಳ ಒಳಗೆ ಮಸೂದೆಯಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿ ಮಂಡನೆಗೆ ನಿರ್ಣಯ ಮಾಡಬೇಕು. ಇಲ್ಲದೆ ಹೋದರೆ ಕನ್ನಡಿಗರು ದಂಗೆ ಏಳಲಿದ್ದಾರೆ. ಜತೆಗೆ ಕರವೇ ಕೂಡ ದಂಗೆಗೆ ಕರೆ ನೀಡಲಿದೆ ಎಂದು ಎಚ್ಚರಿಸಿದರು.

Advertisement

ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸಿರುವ ಉದ್ಯಮಿ ಮೋಹನ್‌ದಾಸ್‌ ಪೈ ವಿರುದ್ಧ ನಾರಾಯಣ ಗೌಡ ಕಿಡಿಕಾರಿದರು.
ಕನ್ನಡಿಗರಿಗೆ ಎಸಗಿರುವ ದ್ರೋಹ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರದಲ್ಲಿ ಸರಕಾರ ನಿಲುವು ಬದಲಾಯಿಸಿರುವುದು ಸರಿಯಲ್ಲ ಎಂದು ಆಪ್‌ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಮೀಸಲಾತಿ ಮಸೂದೆಗೆ ಕೈಗಾರಿಕಾ ಇಲಾಖೆ ವಿರೋಧ: ಟಿಪ್ಪಣಿ ಬಹಿರಂಗ
ಬೆಂಗಳೂರು: ಕನ್ನಡಿಗರಿಗೆ ಮೀಸಲಾತಿ ನೀಡಲು ಕಾರ್ಮಿಕ ಇಲಾಖೆ ಜಾರಿಗೊಳಿಸಲು ಮುಂದಾಗಿದ್ದ ಮಸೂದೆಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆರಂಭ ದಲ್ಲೇ ವಿರೋಧ ವ್ಯಕ್ತಪಡಿಸಿದ್ದು ಈಗ ಬಹಿರಂಗವಾಗಿದೆ. ಇದರ ಜತೆಗೆ “ಕನ್ನಡಿಗರು’ ಎಂದರೆ ಯಾರು ಎಂಬುದನ್ನು ಮರು ವ್ಯಾಖ್ಯಾನಿಸುವ ಅಗತ್ಯವೇ ಇಲ್ಲ ಎಂದು ಪ್ರತಿ ಪಾದಿಸಲಾಗಿದೆ ಎಂದೂ ಗೊತ್ತಾಗಿದೆ. ಈ ಸಂಬಂಧ ವಾಣಿಜ್ಯ, ಕೈಗಾರಿಕಾ ಇಲಾಖೆಯು ಕಾರ್ಮಿಕ ಇಲಾಖೆಗೆ ಸಲ್ಲಿಸಿದ್ದ ಟಿಪ್ಪಣಿ ಈಗ ಬಹಿರಂಗಗೊಂಡಿದೆ. ಈ ಮೂಲಕ
ಕನ್ನಡಿಗರಿಗೆ ಮೀಸಲಾತಿ ಸಂಬಂಧ ಸರಕಾರದ ಇಲಾಖೆ ಗಳೊಳಗೇ ಭಿನ್ನಧೋರಣೆ ಇರುವುದು ಸ್ಪಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next