ನವದೆಹಲಿ: ದೇಶದಲ್ಲಿರುವ ಒಂಭತ್ತು ವಾಣಿಜ್ಯ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸಂಪೂರ್ಣವಾಗಿ ಅಲ್ಲಗಳೆದಿದೆ. ಮತ್ತು ಇಂತಹ ಮಾಹಿತಿಗಳನ್ನು ಸುಳ್ಳು ಸುದ್ದಿಗಳೆಂದು ಅದು ಸ್ಪಷ್ಟೀಕರಣ ನೀಡಿದೆ.
ಪಂಜಾಬ್ ಮತ್ತು ಮಹಾರಾಷ್ಟ್ರಸಹಕಾರಿ ಬ್ಯಾಂಕುಗಳ ವಿರುದ್ಧ ಆರ್.ಬಿ.ಐ. ಕಠಿಣ ಕ್ರಮಗಳನ್ನು ತೆಗೆದುಕೊಂಡ ಬಳಿಕ ಆರ್.ಬಿ.ಐ. ಒಂಭತ್ತು ವಾಣಿಜ್ಯ ಬ್ಯಾಂಕುಗಳನ್ನು ಶಾಶ್ವತವಾಗಿ ಮುಚ್ಚಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತು ಮತ್ತು ಇದರಿಂದ ಜನರು ಭಾರೀ ಗೊಂದಲ ಮತ್ತು ಭೀತಿಗೊಳಗಾಗಿದ್ದರು.
ಕಾರ್ಪೊರೇಶನ್ ಬ್ಯಾಂಕ್, ಯೂಕೋ ಬ್ಯಾಂಕ್, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಆಂಧ್ರ ಬ್ಯಾಂಕ್ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಆರ್.ಬಿ.ಐ. ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಒಂಭತ್ತು ವಾಣಿಜ್ಯ ಬ್ಯಾಂಕುಗಳ ಮುಚ್ಚುವಿಕೆ ಸಂಬಂಧ ಹರಡಿರುವ ಗಾಳಿಸುದ್ದಿಗಳನ್ನು ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ‘ಕಿಡಿಗೇಡಿತನದ ಕೃತ್ಯ’ ಎಂದು ಬಣ್ಣಿಸಿದ್ದಾರೆ. ಮತ್ತು ‘ಯಾವುದೇ ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ’ ಎಂದು ರಾಜೀವ್ ಕುಮಾರ್ ಅವರು ತಿಳಿಸಿದ್ದಾರೆ.
‘ಆರ್.ಬಿ.ಐ. ಕೆಲವೊಂದು ವಾಣಿಜ್ಯ ಬ್ಯಾಂಕುಗಳನ್ನು ಮುಚ್ಚುತ್ತದೆ ಎನ್ನುವ ಗಾಳಿ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ನಂಬಿಕೆಯ ಪ್ರತಿರೂಪವಾಗಿರುವ ಯಾವುದೇ ಬ್ಯಾಂಕ್ ಗಳನ್ನು ಮುಚ್ಚುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಾತ್ರವಲ್ಲದೇ ಸರಕಾರ ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ’ ಎಂದು ರಾಜೀವ್ ಕುಮಾರ್ ಅವರು ತಿಳಿಸಿದ್ದಾರೆ.