ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬುಧವಾರ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತಿದ್ದಂತೆ, ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ಮಾಜಿ ಶಾಸಕ ಬಿ.ಎ. ಮೊದಿನ್ ಬಾವಾ ಅವರ ಮೇಲೆ ಮಾಜಿ ಮೇಯರ್ ಗುಲ್ಜಾರ್‌ಬಾನು ಅವರ ಸಂಬಂಧಿಕರು ಎನ್ನಲಾದ ಕೆಲವರು ಹಲ್ಲೆ ನಡೆಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿ ಹೊರಭಾಗದಲ್ಲಿ ಟಿಕೆಟ್ ವಂಚಿತರ ಬೆಂಬಲಿಗರು ನಾಯಕರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ನಗರದ ಕೊಡಿಯಾಲ್‌ಬೈಲ್‌ನ ಹೊಟೇಲ್ ಒಂದರ ಸಭಾಂಗಣದಲ್ಲಿ ಬುಧವಾರ ರಾತ್ರಿ ಕೆಪಿಸಿಸಿ ನಾಯಕರು ಸುದ್ದಿಗೋಷ್ಠಿ ನಡೆಸಿದ್ದರು. ಇದರಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಮೊದಿನ್ ಬಾವಾ ಹೊರಗೆ ಬರುತ್ತಿದ್ದಂತೆ ಮಾಜಿ ಮೇಯರ್ ಗುಲ್ಜಾರ್‌ಬಾನು ಅವರ ಸಂಬಂಧಿಕರು ಮತ್ತು ಬೆಂಬಲಿಗರು ಕಾಟಿಪಳ್ಳ ಉತ್ತರ ವಾರ್ಡ್‌ನಲ್ಲಿ ಫಾತಿಮಾ ಬಿ. ಎಂಬವರಿಗೆ ಟಿಕೆಟ್ ನೀಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.
ಇದೇ ವೇಳೆ ಮೊದಿನ್ ಬಾವಾ ಅವರ ಬೆಂಬಲಿಗರು ಹಾಗೂ ಗುಲ್ಜಾರ್‌ಬಾನು ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ಬಾವಾ ಅವರ ಮೇಲೆ ಹಲ್ಲೆ ನಡೆಯಿತು. ತತ್‌ಕ್ಷಣ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗದಂತೆ ತಡೆದರು.