Advertisement

ಅಧಿಕಾರಿಗಳ ಬೇಜವಾಬ್ದಾರಿಗೆ ಅಸಮಾಧಾನ

03:54 PM Jul 14, 2022 | Team Udayavani |

ಬಾಗಲಕೋಟೆ: ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಸಂಪೂರ್ಣ ಮಾಹಿತಿ ಅಧಿಕಾರಿಗಳಿಗೇ ಇಲ್ಲವೆಂದರೆ ಜನರಿಗೆ ಯೋಜನೆಗಳನ್ನು ಹೇಗೆ ತಲುಪಿಸುತ್ತೀರಿ ಎಂದು ಪ್ರಶ್ನಿಸಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅಧಿಕಾರಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಜಿಪಂ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಇಲಾಖೆ ಯೋಜನೆಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಪಶು ಸಂಗೋಪನೆ ಇಲಾಖೆ ಸಚಿವನಾಗಿ ಮೂರು ವರ್ಷ ಆಗಿದೆ. ಜನಪರ ಕಾರ್ಯಕ್ರಮ ಜಾರಿಗೆ ತಂದಿದ್ದೇನೆ. ಈ ಯೋಜನೆಗಳ ಮಾಹಿತಿ ಇಲ್ಲವೆಂದರೆ, ಇನ್ನೂ ಜನರಿಗೆ ಯೋಜನೆ ಹೇಗೆ ತಲುಪಿಸುತ್ತೀರಿ ಎಂದು ಸಚಿವರು ಪ್ರಶ್ನಿಸಿದರು.

ಅಧಿಕಾರಿಗಳ ಉತ್ತರ ಕಂಡು ಸಚಿವರು, ಅಧಿಕಾರಿಗಳಿಗೆ ಸ್ವಷ್ಟ ಮಾಹಿತಿ ಇಲ್ಲ ಅಂದರೆ ಜನರಿಗೆ ನಿಮ್ಮಿಂದ ನ್ಯಾಯ ದೊರಕಿಸಿಕೊಡಲು ಸಾಧ್ಯವಿಲ್ಲ. ಇಲಾಖೆ ಉಪ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತ ಪ್ರತಿ ತಿಂಗಳು ಒಂದೊಂದು ತಾಲೂಕಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಧಿಕಾರಿಗಳು ಕಾರ್ಯವೈಖರಿ ಪರಿಶೀಲಿಸಿ ತಿದ್ದುವ ಕೆಲಸವಾಗಬೇಕು. ಪ್ರತಿಯೊಂದು ಯೋಜನೆಗಳ ಬಗ್ಗೆ ಕೇಳಿದ ತಕ್ಷಣ ಹೇಳುವಂತಾಗಬೇಕು. ಇಲಾಖೆ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದ್ದು, ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ಮಾಡಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳು ರೈತರಿಗೆ ತಲುಪಿಸಲು ಸಾಧ್ಯ ಎಂದರು.

ಅಂಗನವಾಡಿ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಂಎಫ್‌ ವತಿಯಿಂದ 500 ಗ್ರಾಂ. ಹಾಲಿನ ಪುಡಿ ನೀಡುತ್ತಿರುವುದರಿಂದ ಅದನ್ನು ಬಿಚ್ಚುವ ಸಂದರ್ಭದಲ್ಲೀ ಅಂಗನವಾಡಿ ಕಾರ್ಯಕರ್ತೆಯರು ಚೆಲ್ಲುತ್ತಿದ್ದಾರೆ. ಹಾಲಿನ ಪುಡಿ ಚೆಲ್ಲುವುದನ್ನು ತಡೆಗಟ್ಟಲು 500 ಗ್ರಾಂ. ಬದಲಾಗಿ 300 ಗ್ರಾಂ. ಹಾಲಿನ ಪುಡಿ ಪ್ಯಾಕೆಟ್‌ ಒದಗಿಸುವಂತೆ ಜಿಲ್ಲಾಧಿಕಾರಿ ಸುನೀಲಕುಮಾರ್‌ ಮತ್ತು ಜಿಪಂ ಸಿಇಒ ಭೂಬಾಲನ್‌ ಸಚಿವರಿಗೆ ಮನವಿ ಮಾಡಿದಾಗ ಈ ಬಗ್ಗೆ ಕೆಎಂಎಫ್‌ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೂಡಲೇ ಈ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

Advertisement

ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ| ಶಶಿಧರ ಮಾತನಾಡಿ, ಬೀಳಗಿಯಲ್ಲಿ 20 ಎಕರೆ ಜಾಗದಲ್ಲಿ ಗೋಶಾಲೆ ನಿರ್ಮಿಸಲಾಗುತ್ತಿದ್ದು, ನರೇಗಾದಡಿ ಕ್ರಿಯಾಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಈಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಶೆಡ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಕ್ಟೋಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಜಿಲ್ಲಾ ಗೋಶಾಲೆ ಅಲ್ಲದೇ ಎರಡು ಗೋಶಾಲೆಗಳು ಮಂಜೂರಾಗಿದ್ದು, ಈಗಾಗಲೇ ಗೋಶಾಲೆಗಳಿಗೆ ಜಾಗ ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ಮಂಜೂರು ಮಾಡಿಕೊಡುವುದಾಗಿ ತಿಳಿಸಿದ್ದಾರೆಂದು ಸಭೆಗೆ ತಿಳಿಸಿದರು.

ಜಾನುವಾರು ಗರ್ಭಧಾರಣೆಯಲ್ಲಿ ರಾಜ್ಯಕ್ಕೆ ಬಾಗಲಕೋಟೆ ಜಿಲ್ಲೆ ಆರನೇ ಸ್ಥಾನ ಪಡೆದಿದೆ. ಜಾನುವಾರು ಸಂಖ್ಯೆ ಕಡಿಮೆಯಾಗಿದೆಯಾದರೂ ಹಾಲು ಉತ್ಪಾದನೆಯಲ್ಲಿ ಮುಂದಿದ್ದೇವೆ. ರಬಕವಿ-ಬನಹಟ್ಟಿ ಹಾಗೂ ಹುನಗುಂದದಲ್ಲಿ ಗೋಶಾಲೆ ನಿರ್ಮಾಣಕ್ಕೆ ಕ್ರಮವಹಿಸಲಾಗುತ್ತಿದೆ. ಅಮೀನಗಡದ ಪಾಲಿಕ್ಲಿನಿಕ್‌ ಕಟ್ಟಡ ತುಂಬ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು ಕೇಳಿಕೊಂಡರು.

ಜಿಲ್ಲೆಯಲ್ಲಿ 18 ಪಶು ಆಸ್ಪತ್ರೆ, 84 ಪಶು ಚಿಕಿತ್ಸಾಲಯ, 37 ಪ್ರಾಥಮಿಕ ಪಶು ಚಿಕಿತ್ಸಾಲಯ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ, ಜಿಪಂ ಸಿಇಒ ಟಿ. ಭೂಬಾಲನ್‌ ಸೇರಿದಂತೆ ಇತರರಿದ್ದರು.

ಪ್ರಾಣಿ ರಕಣೆಗೆ ಅಭಿನಂದನೆ

ಗೋಹತ್ಯೆ ನಿಷೇಧ ಕಾಯ್ದೆ ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಉಲ್ಲಂಘನೆಯಾಗದಂತೆ ಮೂಕ ಪ್ರಾಣಿ ಸಂರಕ್ಷಣೆ ಮಾಡಿದ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಕಾರ್ಯವನ್ನು ಸಚಿವ ಪ್ರಭು ಚವ್ಹಾಣ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next